ಲಾಟರಿ ಹಗರಣ : ಸರ್ಕಾರ ಸಿಬಿಐಗೆ ಬರೆದ ಪತ್ರದಲ್ಲೇನಿದೆ?
ಬೆಂಗಳೂರು, ಮೇ 29 : ಬಹುಕೋಟಿ ರೂಪಾಯಿ ಒಂದಂಕಿ ಲಾಟರಿ ಹಗರಣದ ಬಗ್ಗೆ ತನಿಖೆಯನ್ನು ನಡೆಸಬೇಕು ಎಂದು ಸರ್ಕಾರ ಸಿಬಿಐಗೆ ಅಧಿಕೃತವಾಗಿ ಪತ್ರ ಬರೆದಿದೆ. ಕಾಲ-ಕಾಲಕ್ಕೆ ತನಿಖೆಯ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ರಾಜ್ಯ ಗೃಹ ಇಲಾಖೆ ಗುರುವಾರ ಬೆಳಗ್ಗೆ ಈ ಪತ್ರವನ್ನು ಸಿಬಿಐಗೆ ರವಾನಿಸಿದೆ. 2007 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿನ ಅಕ್ರಮ ಲಾಟರಿ (ಆನ್‌ಲೈನ್ ಲಾಟರಿ ಸೇರಿ), ಮಟ್ಕಾ/ ಓಸಿ ದಂಧೆ ಕುರಿತು ತನಿಖೆ ನಡೆಸುವಂತೆ ಪತ್ರದಲ್ಲಿ ಮನವಿ ಸಲ್ಲಿಸಲಾಗಿದೆ.[ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ? ಸಿದ್ದು ಉತ್ತರ ಕೇಳಿ]

ಪತ್ರದಲ್ಲಿನ ವಿವರಣ : ಕರ್ನಾಟಕದಲ್ಲಿ 2007 ರ ಮಾರ್ಚ್ 27 ರಂದು ಲಾಟರಿ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 1 ರಿಂದ ಅಧಿಕೃತವಾಗಿ ಈ ಆದೇಶ ಜಾರಿಗೆ ಬಂದಿದೆ. ಆದರೆ, ಅನಂತರವೂ ಆನ್‌ಲೈನ್ ಸೇರಿದಂತೆ ಅಕ್ರಮ ಲಾಟರಿ ವಹಿವಾಟು ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. [ಸಿಐಡಿ ಹಾಗೂ ಸಿಬಿಐ ತನಿಖೆ ವ್ಯತ್ಯಾಸವೇನು?]
ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಅಕ್ರಮ ಲಾಟರಿ ದಂಧೆಯ ಬಗ್ಗೆ ಮೊಕದ್ದಮೆ ದಾಖಲಿಸಲಾಗಿದೆ. ಲಾಟರಿ ಅಕ್ರಮದ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು 2015 ರ ಮೇ 6 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಮೇ 8 ರಂದು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. [ಈತ 7,000ಕೋಟಿ ಲಾಟರಿ ಹಗರಣದ ಕಿಂಗ್ ಪಿನ್ !]
ಸಿಐಡಿ ಮತ್ತು ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸಿದಾಗ ಈ ದಂಧೆಯಲ್ಲಿ ಹಲವು ಅಧಿಕಾರಿಗಳು ಮತ್ತು ಇತರರು ಶಾಮೀಲಾಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಸಮಗ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರ ಮಾಡಲಾಗುತ್ತಿದೆ. ಕಾಲಕಾಲಕ್ಕೆ ವರದಿಯನ್ನು ನೀಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಲಾಟರಿ ಹಗರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಐಡಿ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ನೀಡಿತ್ತು. ಪ್ರತಿಪಕ್ಷಗಳು ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದರಿಂದ ಸರ್ಕಾರ ತನಿಖೆಯನ್ನು ಮೇ 25ರಂದು ಸಿಬಿಐಗೆ ವಹಿಸುವುದಾಗಿ ಘೋಷಣೆ ಮಾಡಿತ್ತು.












Click it and Unblock the Notifications