
ಹನುಮ ಬಿಜೆಪಿ ಕಾರ್ಯಕರ್ತನಾ: ದಿನೇಶ್ ಗುಂಡೂರಾವ್ ಸಂದರ್ಶನ

ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಹುಟ್ಟಿದ, ದಿವಂಗತ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರು ಜೊತೆಗೆ ಬೆಂಗಳೂರು ಗಾಂಧಿನಗರ ಕ್ಷೇತ್ರದ ಹಾಲೀ ಶಾಸಕರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗುವ ಮುನ್ನ, ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ನಿಭಾಯಿಸಿದ್ದ ದಿನೇಶ್, ಕಾಂಗ್ರೆಸ್ ಸರಕಾರದ ಯಶಸ್ವೀ ಅನ್ನಭಾಗ್ಯ ಯೋಜನೆಯ ರೂವಾರಿ.
ಮುಂಬರುವ ಚುನಾವಣೆ, ಸಿದ್ದರಾಮಯ್ಯನವರ ಸರಕಾರದ ಸಾಧನೆ, ಮಹದಾಯಿ ಮುಂತಾದ ವಿಚಾರವನ್ನು ಇಟ್ಟುಕೊಂಡು, ದಿನೇಶ್ ಗುಂಡೂರಾವ್ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಪ್ರಮುಖಾಂಶ:
ಪ್ರ: ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ನಡುವಿನ ಕಾರ್ಯವೈಖರಿಯ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?
ದಿನೇಶ್: ಈ ಎರಡು ಹುದ್ದೆಯಲ್ಲಿ ಅಂತಹ ಡಿಫರೆನ್ಸ್ ಏನೂ ಇಲ್ಲ. ನಾವೆಲ್ಲಾ ಜೊತೆ ಸೇರಿ, ಚುನಾವಣಾ ಪ್ರಚಾರ ಹೇಗೆ ಮಾಡಬೇಕು ಎನ್ನುವುದನ್ನು ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ಹಳೇ ಮೈಸೂರು ಮತ್ತು ದಕ್ಷಿಣ ಕರ್ನಾಟಕದ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತಿದ್ದೇನೆ.
ಕೆಪಿಸಿಸಿ ಅಧ್ಯಕ್ಷರಿಗೆ ಎಲ್ಲಾ ಕಡೆ ಗಮನಕೊಡಲು ಸಾಧ್ಯವಾಗದೇ ಇರುವುದರಿಂದ, ನಾವು ಇನ್ನೂ ಆಳವಾಗಿ ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಕಾರ್ಯಕರ್ತರ ಕಷ್ಟಸುಖಗಳನ್ನು ವಿಚಾರಿಸುತ್ತೇವೆ. ಅಂತಿಮವಾಗಿ ಅಧ್ಯಕ್ಷರ ತೀರ್ಮಾನವೇ ಫೈನಲ್ . ಮುಂದೆ ಓದಿ...

ತಮ್ಮ ಸ್ವಕ್ಷೇತ್ರ ಗಾಂಧಿನಗರದ ಬಗ್ಗೆ ದಿನೇಶ್ ಹೇಳಿದ್ದು
ಪ್ರ: ಗಾಂಧಿನಗರ ಕ್ಷೇತ್ರದಲ್ಲಿ ನಿಮ್ಮ ಸಾಧನೆ, ಆಗಬೇಕಾಗಿದ್ದದ್ದು, ಆಗಿದ್ದು, ಈ ಬಗ್ಗೆ?
ದಿನೇಶ್: ತುಂಬಾ ಕೆಲಸ ಮಾಡಿದ್ದೇವೆ, ಇನ್ನೂ ತುಂಬಾ ಕೆಲಸ ಆಗಬೇಕಿದೆ. ಮುಖ್ಯಮಂತ್ರಿಗಳೂ ಕ್ಷೇತ್ರದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ, ಕೆಲಸ ತೃಪ್ತಿದಾಯಕವಾಗಿ ಸಾಗುತ್ತಿದೆ. ಟೆಂಡರ್ ಶ್ಯೂರ್ ನಲ್ಲಿ ಕೆಲಸ ನಡೆಯುತ್ತಿದೆ. ಮೆಜೆಸ್ಟಿಕ್ ಏರಿಯಾ ಅಪ್ ಗ್ರೇಡ್ ಆಗುತ್ತಿದೆ. ಇಂಡೋರ್ ಸ್ಟೇಡಿಯಂ, ಪಾರ್ಕ್ ಮುಂತಾದವೂ ಈ ಭಾಗದಲ್ಲಿ ಬರುತ್ತಿದೆ. ಇನ್ನೆರಡು ವರ್ಷಗಳಲ್ಲಿ ಮೆಜೆಸ್ಟಿಕ್ ಚಿತ್ರಣ ಸಂಪೂರ್ಣ ಬದಲಾಗಲಿದೆ.

ಹನುಮ ಬಿಜೆಪಿಯ ಕಾರ್ಯಕರ್ತನಾ?
ಪ್ರ: ಟಿಪ್ಪು ಜಯಂತಿ ಆಚರಿಸುವ ಸಿದ್ದರಾಮಯ್ಯ ಸರಕಾರ, ಹನುಮ ಜಯಂತಿ ಯಾಕೆ ಆಚರಿಸಿಲ್ಲ ಎನ್ನುವ ಮಾತನ್ನು ಯೋಗಿ ಆದಿತ್ಯನಾಥ್ ಅವರು ಹುಬ್ಬಳ್ಳಿಯಲ್ಲಿ ಹೇಳಿದ್ದಾರಲ್ಲಾ?
ದಿನೇಶ್: ಯೋಗಿ ಆದಿತ್ಯನಾಥ್ ಒಂದು ಮಠದ ಪೀಠಾಧಿಪತಿಯಾಗಿದ್ದವರು, ಅವರು ಇಂತಹ ಹೇಳಿಕೆಯನ್ನು ನೀಡಬಾರದು. ಹನುಮ ಜಯಂತಿ ಆಚರಣೆ, ಆಂಜನೇಯ ಸ್ವಾಮಿ ಬಿಜೆಪಿಯ ಆಸ್ತಿಯಲ್ಲ. ನಾವು ಕೂಡಾ ಆಂಜನೇಯನ ಭಕ್ತರೇ. ಬಸವ ಜಯಂತಿ, ಕನಕ ಜಯಂತಿ ಸೇರಿದಂತೆ 24 ಜಯಂತಿಯನ್ನು ಆಚರಿಸುತ್ತಿದ್ದೇವೆ. ಧರ್ಮ ಎನ್ನುವುದು ಬಿಜೆಪಿ ಆಸ್ತಿ ಎನ್ನುವಂತೆ ಯೋಗಿ ಆದವರೊಬ್ಬರು. ಈ ರೀತಿ ಮಾತನಾಡುವುದು ತಪ್ಪು. ಯೋಗಿ ಇಲ್ಲಿಗೆ ಬಂದು ಕೀಳುಮಟ್ಟದ ಮಾತನ್ನು ಆಡಬಾರದು. ಹನುಮ ಬಿಜೆಪಿಯ ಕಾರ್ಯಕರ್ತನಲ್ಲ, ಅವನು ಇಡೀ ನಮ್ಮ ಹಿಂದೂ ಧರ್ಮಕ್ಕೆ ಸೇರಿದಂತವನು. ನಾವೆಲ್ಲಾ ಹನುಮನನ್ನು ಪೂಜಿಸುತ್ತೇವೆ. ಯಾಕೆ ಬಿಜೆಪಿಯವರು ಈ ರೀತಿ ಮಾತನಾಡಬೇಕು, ರಾಮ ಹನುಮನನ್ನು ಪೂಜಿಸಲು ಬಿಜೆಪಿಯನ್ನೇ ಸೇರಬೇಕಾ? ಯೋಗಿ ಆದಿತ್ಯನಾಥ್ ಅವರು ನೀಡಿದ ಹೇಳಿಕೆ, ಇಡೀ ನಮ್ಮ ಧರ್ಮಕ್ಕೆ ಮಾಡಿದಂತಹ ಅಪಮಾನ.

ಕಾರ್ಯಕ್ರಮ ಪಕ್ಷ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ವಿ ಅಗಿದೆಯಾ?
ಪ್ರ: ಮನೆಮನೆಗೆ ಕಾಂಗ್ರೆಸ್ ಅನ್ನೋ ಕಾರ್ಯಕ್ರಮ ಪಕ್ಷ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ವಿ ಆಗಿದೆಯಾ?
ದಿನೇಶ್: ಮನೆಮನೆಗೆ ಕಾಂಗ್ರೆಸ್ ಅಭಿಯಾನ ಖಂಡಿತವಾಗಿಯೂ ಯಶಸ್ಸನ್ನು ಪಡೆದಿದೆ. ಈ ಸಂಬಂಧ ಪುಸ್ತಕವೊಂದನ್ನು ಬಿಡುಗಡೆಮಾಡಿ ಮನೆಮನೆಗೆ ಹಂಚಿದ್ದೇವೆ. ಶೇ. 70ರಷ್ಟು ಎಲ್ಲಾ ಮನೆಗೂ ನಮ್ಮ ಅಭಿಯಾನವನ್ನು ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಶಾಸಕರಿಗೆ ಮತ್ತು ಮುಖಂಡರಿಗೆ ಜನರ ಬಳಿ ಹೋಗಲು ಇದೊಂದು ಉತ್ತಮ ಅವಕಾಶ. ಸಿದ್ದರಾಮಯ್ಯನವರ ಸರಕಾರದ ಇದುವರೆಗಿನ ಸಾಧನೆ ಏನೇನು ಇದೆಯೋ, ಅದನ್ನೆಲ್ಲಾ ಪುಸ್ತಕದಲ್ಲಿ ಪ್ರಿಂಟ್ ಮಾಡಿ ಜನರಿಗೆ ತಲುಪಿಸಿದ್ದೇವೆ. ಚುನಾವಣೆಗೆ ಮುನ್ನ ಇದೊಂದು ಉತ್ತಮ ಕಾರ್ಯಕ್ರಮವಾಗಿ ಮೂಡಿಬಂದಿದೆ.

ಕಾಂಗ್ರೆಸ್ ನಲ್ಲಿನ ಗುಂಪುಗಾರಿಕೆಯ ಬಗ್ಗೆ ದಿನೇಶ್ ಹೇಳಿದ್ದು
ಪ್ರ: ಕೋಲಾರದಲ್ಲಿ ಆರಂಭವಾಗಿರುವ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗುಂಪುಗಾರಿಕೆ ಬಗ್ಗೆ ಪ್ರಸ್ತಾವಿಸಿದ್ದು ಯಾಕೆ?
ದಿನೇಶ್: ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ. ನಮ್ಮಲ್ಲಿ ಕೆಲವು ಪೈಪೋಟಿಯಿರುವ ಕ್ಷೇತ್ರಗಳಿವೆ, ಅಲ್ಲಿ ನಮಗೆ ಟಿಕೆಟ್ ಸಿಗಬೇಕು ಎನ್ನುವ ಒತ್ತಡ ಎಲ್ಲರೂ ಹಾಕುತ್ತಿದ್ದಾರೆ. ನಾವು ಕಳೆದ ಬಾರಿ ಎಲ್ಲೆಲ್ಲಿ ಸೋತಿದ್ದೇವೋ ಅಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಟಿಕೆಟಿಗೆ ಪೈಪೋಟಿ ಇರುವುದರಿಂದ ಗುಂಪುಗಾರಿಕೆ ಇರೋದು ಸಹಜ. ಪಕ್ಷದ ಅಧ್ಯಕ್ಷರು ಹೇಳಿದ್ದಾರೆ, ನಾವೆಲ್ಲಾ ಒಟ್ಟಿಗೆ ಸೇರಿ ಚುನಾವಣೆಯನ್ನು ಎದುರಿಸಬೇಕು. ಇಲೆಕ್ಷನ್ ಕಮಿಟಿಯಲ್ಲಿ ಕೂತು ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ, ಎಲ್ಲರೂ ಸೇರಿ ಪಕ್ಷಕ್ಕೆ ದುಡಿಯಬೇಕು ಎನ್ನುವ ಮಾತನ್ನು ಅಧ್ಯಕ್ಷರು ಹೇಳಿದ್ದಾರೆ.

ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್
ಪ್ರ: ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರ ಮೇಲಿರುವ ಸೋಲಾರ್ ಹಗರಣದ ಕೇಸನ್ನು ಚುನಾವಣೆಯಲ್ಲಿ ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಾ?
ದಿನೇಶ್: ಮೊದಲು ಇದು ಕರ್ನಾಟಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಕೇರಳದಲ್ಲಿ ವೇಣುಗೋಪಾಲ್ ಅವರ ತೇಜೋವಧೆಗೆ ಮಾಡಿರುವ ಷಡ್ಯಂತ್ರವಿದು, ಮತ್ತಿದು ಹಳೆಯ ವಿಚಾರ. ವೇಣುಗೋಪಾಲ್ ಕೂಡಾ ಸ್ಪಷ್ಟವಾಗಿ ಇದಕ್ಕೆ ಉತ್ತರವನ್ನು ನೀಡಿದ್ದಾಗಿದೆ. ಇದು ನಮ್ಮ ರಾಜ್ಯದ issue ಅಲ್ಲ. ಹಾಗಾಗಿ, ಕರ್ನಾಟಕದ ಚುನಾವಣೆಯಲ್ಲಿ ಇದು ಪರಿಣಾಮ ಬೀರುವುದಿಲ್ಲ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದೀರಾ?
ಪ್ರ: ಮುಂದಿನ ಚುನಾವಣೆ ಕಾಂಗ್ರೆಸ್ ಗೆದ್ದರೆ, ಜೊತೆಗೆ ನೀವೂ ಗೆದ್ದರೆ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದೀರಾ?
ದಿನೇಶ್: ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಮೊದಲು ನಾನು ಮತ್ತೆ ಶಾಸಕನಾಗಿ ಆಯ್ಕೆಯಾಗಬೇಕು. ಸಚಿವ ಸ್ಥಾನದ ಬಗ್ಗೆ ಹೆಚ್ಚಿನ ಗಮನವನ್ನು ನಾನು ಈಗ ಹರಿಸುವುದಿಲ್ಲ. ಅದನ್ನು ನಮ್ಮ ಹಿರಿಯರು, ವರಿಷ್ಠರು ನಿರ್ಧರಿಸುತ್ತಾರೆ. ಮೊದಲು ನನ್ನ ಕ್ಷೇತ್ರವನ್ನು ಉಳಿಸಿಕೊಂಡು, ಜನರ ಪ್ರೀತಿಯನ್ನು ಗಳಿಸಬೇಕು.