ತಿಂಗಳಿಗೆ 30 ಲಕ್ಷ ರೂ. ಸಂಪಾದನೆ? ತಮ್ಮ ಇನ್‌ಸ್ಟಾಗ್ರಾಮ್ ಆದಾಯದ ಅಸಲಿ ಸತ್ಯ ಬಿಚ್ಚಿಟ್ಟ ಮುಸ್ಕಾನ್ ಕಾರಿಯಾ
ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮದೇ ಆದ ವಿಶೇಷ ಕಂಟೆಂಟ್ ನೀಡುವ ಮೂಲಕ ತಿಂಗಳಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಎನ್ನಲಾಗಿದ್ದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ಕಾರಿಯಾ, ಈಗ ತಮ್ಮ ನಿಜವಾದ ಆದಾಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಇತರ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ನಡೆಸಿದ ಲೈವ್ ಸ್ಟ್ರೀಮ್‌ನಲ್ಲಿ ಮಾತನಾಡಿರುವ ಮುಸ್ಕಾನ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ತಾವು ಲಕ್ಷಾಂತರ ಅಥವಾ ಕೋಟ್ಯಾಂತರ ರೂಪಾಯಿಗಳನ್ನು ಸಬ್‌ಸ್ಕ್ರೈಬರ್‌ಗಳಿಂದ ಗಳಿಸುತ್ತಿಲ್ಲ ಎಂಬ ಅಚ್ಚರಿಯ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ಮುಸ್ಕಾನ್ ಕಾರಿಯಾ ಅವರು ಮತ್ತೊಬ್ಬ ಪ್ರಮುಖ ಕಂಟೆಂಟ್ ಕ್ರಿಯೇಟರ್ ರಚಿತ್ ಯಾದವ್ ಅವರೊಂದಿಗೆ ನಡೆಸಿದ ಜಂಟಿ ಲೈವ್ ಸ್ಟ್ರೀಮ್‌ನಲ್ಲಿ 22 ವರ್ಷದ ಮುಸ್ಕಾನ್ ಕಾರಿಯಾ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರೈಬರ್‌ಗಳಿಂದ ತಮಗೆ ದೊಡ್ಡ ಮಟ್ಟದ ಆದಾಯ ಬರುತ್ತಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.

ವಾಸ್ತವವಾಗಿ, ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ಫೀಚರ್ ಆರಂಭವಾದಾಗಿನಿಂದ ಈವರೆಗಿನ ತಮ್ಮ ಇಡೀ ಒಟ್ಟು ಗಳಿಕೆಯೇ ಕೇವಲ 1,500 ಡಾಲರ್ ಅಂದರೆ ರೂಪಾಯಿ ಮೌಲ್ಯದಲ್ಲಿ ಸುಮಾರು 1.25 ಲಕ್ಷ ರೂ. ಮಾತ್ರ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದರೂ ಸಬ್‌ಸ್ಕ್ರಿಪ್ಷನ್ ಆದಾಯ ಇಷ್ಟು ಕಡಿಮೆ ಇರಲು ಪ್ರಮುಖ ಕಾರಣವನ್ನೂ ಅವರು ವಿವರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡಲು ಬರುವ ಅನೇಕ ಬಳಕೆದಾರರು ಆರಂಭದಲ್ಲಿ ಲಭ್ಯವಿರುವ 'ಉಚಿತ ಪ್ರಯೋಗ' (Free Trial) ಅವಧಿಯನ್ನು ಬಳಸಿಕೊಂಡು ಸಬ್‌ಸ್ಕ್ರೈಬ್ ಆಗುತ್ತಾರೆ. ಆದರೆ, ಈ ಉಚಿತ ಅವಧಿ ಮುಗಿದು ಮುಂದಿನ ತಿಂಗಳ ಬಿಲ್ಲಿಂಗ್ ಸೈಕಲ್ ಆರಂಭವಾಗಿ ಹಣ ಪಾವತಿಸುವ ಸಮಯ ಹತ್ತಿರ ಬರುತ್ತಿದ್ದಂತೆ, ಅವರು ತಕ್ಷಣವೇ ತಮ್ಮ ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸುತ್ತಾರೆ ಎಂದು ಮುಸ್ಕಾನ್ ಬೇಸರದಿಂದ ತಿಳಿಸಿದ್ದಾರೆ.
ಇದರಿಂದಾಗಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಹೆಚ್ಚಾಗಿ ಕಂಡರೂ, ಅದರಿಂದ ಯಾವುದೇ ಆರ್ಥಿಕ ಲಾಭ ಕ್ರಿಯೇಟರ್‌ಗಳಿಗೆ ಸಿಗುತ್ತಿಲ್ಲ. ತಾವು ಇನ್‌ಸ್ಟಾಗ್ರಾಮ್‌ನಿಂದ ತಿಂಗಳಿಗೆ ಕೇವಲ 20 ಡಾಲರ್ ಆಸುಪಾಸಿನಲ್ಲಿ ಮಾತ್ರ ಗಳಿಸುತ್ತಿರುವುದಾಗಿ ಮುಸ್ಕಾನ್ ಲೈವ್‌ನಲ್ಲಿ ಹೇಳಿದ್ದಾರೆ. ಈ ಮೂಲಕ ಇಂಟರ್ನೆಟ್ ಜಗತ್ತಿನಲ್ಲಿ ಹರಿದಾಡುವ ಎಲ್ಲ ಇನ್‌ಫ್ಲುಯೆನ್ಸರ್‌ಗಳ ಆದಾಯದ ಅಂಕಿ-ಅಂಶಗಳು ನಿಜವಾಗಿರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಯಾರು ಈ ಮುಸ್ಕಾನ್ ಕಾರಿಯಾ?
ಮುಸ್ಕಾನ್ ಕಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಆಹಾರ ಉತ್ಪನ್ನಗಳು ಹಾಗೂ ಇತರ ವಸ್ತುಗಳನ್ನು ವಿಮರ್ಶೆ ನೀಡುವ ಮೂಲಕ ಜನಪ್ರಿಯರಾದ ಕಂಟೆಂಟ್ ಕ್ರಿಯೇಟರ್ ಮತ್ತು ಇನ್‌ಫ್ಲುಯೆನ್ಸರ್. ತಮ್ಮ ವಿಡಿಯೋಗಳಲ್ಲಿ ಹೆಚ್ಚಾಗಿ ಬಳಸುವ "ಐ ಬೆಟ್ ಯು ಡಿಡಂಟ್ ನೋ ದಿಸ್" ಎನ್ನುವುದರ ಮೂಲಕವೇ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅವರು ಬರೋಬ್ಬರಿ 1.5 ಮಿಲಿಯನ್ (15 ಲಕ್ಷ) ಫಾಲೋವರ್ಸ್ ಅನ್ನು ಸಂಪಾದಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ಎಂದರೇನು?
ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್‌ಗಳು ಕಂಟೆಂಟ್ ಕ್ರಿಯೇಟರ್‌ಗಳಿಗೆ ಮಾಸಿಕ ಚಂದಾದಾರಿಕೆ ಶುಲ್ಕವನ್ನು ಪಾವತಿಸುವ ಫಾಲೋವರ್ಸ್‌ಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್ ಮತ್ತು ಪ್ರಯೋಜನಗಳನ್ನು ನೀಡುವ ಮೂಲಕ ಹಣಗಳಿಸಲು ಮಾಡಿಕೊಡುವ ಒಂದು ವಿಶೇಷ ವ್ಯವಸ್ಥೆಯಾಗಿದೆ. ಪ್ರಸ್ತುತ ಮುಸ್ಕಾನ್ ಕಾರಿಯಾ ಒಟ್ಟು 5,845 ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ.












Click it and Unblock the Notifications