ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: 15 ಜಿಲ್ಲೆಗಳ ಅಧಿಕಾರಗಳ ವಿರುದ್ಧ ಲೋಕಾಯುಕ್ತ ಸುಮೊಟೊ ಕೇಸ್ ದಾಖಲು

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸ್ವಯಂ ಪ್ರೇರಿತ ಅಂದರೆ ಸುಮೊಟೊ ಕೇಸ್‌ ದಾಖಲಿಸಿಕೊಂಡಿದೆ.

ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್‌ಗಳನ್ನ ನೀಡಿ ಮಕ್ಕಳ ಹಕ್ಕುಗಳನ್ನ ಮೊಟಕುಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳ ಆಧಾರದ ಮೇಲೆ ಉಪ ಲೋಕಾಯುಕ್ತ-1 ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ 15 ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ವಿರುದ್ಧ ತನಿಖೆಗೆ ಸೂಚಿಸಲಾಗಿದೆ.

Lokayukta Orders Suo Motu Probe Into Poor-Quality Shoes in Karnataka Govt Schools

ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಉಚಿತ ಶೂ ಮತ್ತು ಸಾಕ್ಸ್ ವಿತರಣಾ ಯೋಜನೆಯನ್ನ ಜಾರಿಗೊಳಿಸಿದೆ. ಆದರೆ, ಈ ವರ್ಷ ವಿತರಿಸಲಾದ ಶೂಗಳು ತೀರಾ ಕಳಪೆಯಾಗಿದ್ದು, ಮಕ್ಕಳು ಹಾಕಿಕೊಳ್ಳಲು ಶುರು ಮಾಡಿದ ಒಂದು ವಾರಕ್ಕೆ ಹರಿದುಹೋಗುತ್ತಿವೆ, ಹೊಲಿಗೆ ಬಿಚ್ಚಿಕೊಳ್ಳುತ್ತಿವೆ ಎಂಬ ದೂರುಗಳು ರಾಜ್ಯದ ನಾನಾ ಭಾಗಗಳಿಂದ ಕೇಳಿಬಂದಿದ್ದವು.

ಕಳೆದ ವರ್ಷ ವಿತರಿಸಿದ್ದ ಶೂಗಳಿಗಿಂತ ಈ ವರ್ಷದ ಶೂಗಳ ಗುಣಮಟ್ಟ ತೀರಾ ಕಳಪೆಯಾಗಿದೆ. ರಾಯಚೂರು, ತುಮಕೂರು, ಕೊಡಗು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶೂಗಳು ಕೆಲವೇ ದಿನಗಳಲ್ಲಿ ಹಾಳಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಟೆಂಡರ್ ಪ್ರಕ್ರಿಯೆಯಲ್ಲಿಯೇ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಯೋಜನೆಯಲ್ಲಿ ಶೇ. 40ರಷ್ಟು ಕಮಿಷನ್ ದಂಧೆ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನ ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತವು, ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ಪೂರೈಸಿರುವ ಗುತ್ತಿಗೆದಾರರು ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಸಂವಿಧಾನದ 21ಎ ವಿಧಿ ಉಲ್ಲಂಘನೆ

ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನ ಒದಗಿಸುವುದು ಕೇವಲ ಭ್ರಷ್ಟಾಚಾರವಷ್ಟೇ ಅಲ್ಲ, ಅದು ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಹೌದು ಎಂದು ಉಪ ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ. ಗುಣಮಟ್ಟದ ಶಿಕ್ಷಣ ಮತ್ತು ಅದಕ್ಕೆ ಪೂರಕವಾದ ಸೌಲಭ್ಯಗಳನ್ನ ಪಡೆಯುವುದು ಸಂವಿಧಾನದ 21ಎ ವಿಧಿಯ ಅಡಿಯಲ್ಲಿ ಬರುವ ಮೂಲಭೂತ ಹಕ್ಕಾಗಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ ಮಾಡಿರುವುದು ಮೇಲ್ನೋಟಕ್ಕೆ ಸಂವಿಧಾನದ ಆಶಯಗಳ ಉಲ್ಲಂಘನೆ ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ವ್ಯತಿರಿಕ್ತವಾದ ನಡವಳಿಕೆಯಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯನ್ನ ನಿಗದಿಪಡಿಸುವುದು ಅತ್ಯಗತ್ಯ ಎಂದು ನ್ಯಾ. ಫಣೀಂದ್ರ ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿಗಳಿಂದ ತನಿಖೆ

ಈ ಭ್ರಷ್ಟಾಚಾರದ ಜಾಲವನ್ನ ಭೇದಿಸಲು ಹೆಜ್ಜೆ ಇಟ್ಟಿರುವ ಉಪ ಲೋಕಾಯುಕ್ತರು, ತಮ್ಮ ವ್ಯಾಪ್ತಿಗೆ ಒಳಪಡುವ 15 ಜಿಲ್ಲೆಗಳ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ. ಶೂ ಖರೀದಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ, ಬಿಡುಗಡೆಯಾದ ಅನುದಾನ, ಗುಣಮಟ್ಟ ಪರಿಶೀಲನೆ ಸೇರಿದಂತೆ ಎಲ್ಲ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲಿಸುವಂತೆ ಸೂಚಿಸಲಾಗಿದೆ. ಎರಡು ವಾರಗಳ ಒಳಗೆ ಸಮಗ್ರವಾದ ಪ್ರಾಥಮಿಕ ತನಿಖಾ ವರದಿಯನ್ನ ಸೂಕ್ತ ದಾಖಲೆಗಳ ಸಮೇತ ಸಲ್ಲಿಸುವಂತೆ ಆದೇಶ ನೀಡಲಾಗಿದೆ.

ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಈ ಹಂತದಲ್ಲಿ ಮೌನ ವಹಿಸಿದ್ದು, ಲೋಕಾಯುಕ್ತದ ಈ ದಿಟ್ಟ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ತನಿಖೆಯಿಂದ ಕಳಪೆ ಗುಣಮಟ್ಟದ ಶೂ ಪೂರೈಸಿದ ಗುತ್ತಿಗೆದಾರರ ಮತ್ತು ಅವರಿಗೆ ಸಾಥ್ ನೀಡಿದ ಅಧಿಕಾರಿಗಳ ಬಣ್ಣ ಬಯಲಾಗುವ ಸಾಧ್ಯತೆ ಇದೆ.

ತನಿಖೆಯ ಆದೇಶದ ಪ್ರತಿಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಶಾಲಾ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+