Congress Candidate 1st List: ಇಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ? ಕರ್ನಾಟಕದ ಈ ಕ್ಷೇತ್ರಗಳಿಗೆ ಟಿಕೆಟ್ ಫೈನಲ್!
ನವದೆಹಲು, ಮಾರ್ಚ್ 08: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್ ಹಂಚಿಕೆ ಕಸರತ್ತು ಜೋರಾಗಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ 195 ಕ್ಷೇತ್ರಗಳಿಗೆ ಟಿಕೆಟ್ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಮೊದಲ ಪಟ್ಟಿಯ ತಯಾರಿಯಲ್ಲಿದೆ.
ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಸುಮಾರು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಕರ್ನಾಟಕದಲ್ಲಿ 15 ಹೆಚ್ಚು ಸ್ಥಾನಗಳು ಫೈನಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸಲು ಸಜ್ಜಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು, ಇನ್ನೂ ಈ ವಿಚಾರವೂ ಸಿಇಸಿ ಸಭೆಯಲ್ಲಿ ಚರ್ಚೆಯಾಗಿದ್ದು, ವಯನಾಡಿನಲ್ಲಿ ಸ್ಪರ್ಧಿಸುವ ಕುರಿತು ಅಂತಿಮ ತಿರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿ ಸ್ಪರ್ಧೆ ಎಲ್ಲಿಂದ ಎಂಬ ವದಂತಿಗಳಿಗೂ ತೆರೆಬಿದ್ದಿದೆ. ರಾಹುಲ್ ಗಾಂಧಿ ಈ ಸಲ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬಿತ್ಯಾದಿ ವದಂತಿಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ಪಕ್ಷದ ಅವರ ಸ್ಪರ್ಧೆ ವಯನಾಡ್‌ನಿಂದಲೇ ಎಂಬ ಸಂದೇಶ ರವಾನಿಸಿದೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಇಸಿ, ಸೋನಿಯಾ ಗಾಂಧಿ ಮತ್ತು ಕರ್ನಾಟಕದ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಕರ್ನಾಟಕದಲ್ಲಿ 11 ಮತ್ತು ತೆಲಂಗಾಣಕ್ಕೆ 7 ಸ್ಥಾನಗಳಿಗೆ ಹೆಸರನ್ನು ಈ ಸಭೆಯಲ್ಲಿ ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಗ್ರಾಮಾಂತರ ಹಾಲಿ ಸಂಸದ ಡಿ ಕೆ ಸುರೇಶ್ ಅವರ ಹೆಸರನ್ನು ಫೈನಲ್ ಆಗಿದ್ದು, ಇನ್ನೂ 10 ಲೋಕಸಭಾ ಕ್ಷೇತ್ರದ ಹೆಸರನ್ನ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ರಾಜನಂದಗಾಂವ್‌ನಿಂದ ಸ್ಪರ್ಧಿಸಲು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ ಮತ್ತು ಮಾಜಿ ಸಚಿವ ತಾಮ್ರಧ್ವಜ್ ಸಾಹು ಅವರನ್ನು ದುರ್ಗ್‌ನಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ, ಏಕೆಂದರೆ ಪಕ್ಷವು ತನ್ನ ಸ್ಥಾನಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ ದೊಡ್ಡ ನಾಯಕರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಛತ್ತೀಸ್‌ಗಢದ 11 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಜೊತೆಗೆ, ಕಣ್ಣೂರಿನಿಂದ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಕೇರಳದ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಮತ್ತು ತಿರುವನಂತಪುರಂನಿಂದ ಶಶಿ ತರೂರ್ ಸೇರಿದಂತೆ ಎಲ್ಲಾ 15 ಹಾಲಿ ಸಂಸದರನ್ನು ಕಣಕ್ಕಿಳಿಸಲು ಸಿಇಸಿ ಒಲವು ತೋರಿದೆ ಎಂದು ತಿಳಿದುಬಂದಿದೆ.
ಇನ್ನೂ ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಪ್ರಕಟಿಸುವ ಸಾಧ್ಯತೆಯಿದೆ. ಎರಡನೇ ಪಟ್ಟಿ ಬಿಡುಗಡೆಗೂ ಮೊದಲು ಮಾರ್ಚ್ 11ಕ್ಕೆ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ












Click it and Unblock the Notifications