ನಾನು ಲೆಕ್ಕಕ್ಕೆ ಇಲ್ಲವಾ? ಸರಿಸಾಟಿ ಅಲ್ಲವಾ? : ಹೆಚ್ ಡಿ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?
ಹಾಸನ, ಏಪ್ರಿಲ್ 11 : ನಾನು ಅವರಿಗೆ ಲೆಕ್ಕಕ್ಕೆ ಇದೀನಾ? ಅವರಿಗೆ ಸರಿಸಾಟಿ ಇದೀನಾ ಇಲ್ಲವಾ? ಎಂಬುದನ್ನು ಜನರು ಚುನಾವಣೆಯಲ್ಲಿಯೇ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ರಾಮನಾಥಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹೊಸ ತೊಡಕು ದಿನ ನಮ್ಮ ತೋಟದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನಗೆ ಅಷ್ಟು ಜ್ಞಾನ ಇಲ್ಲವೇ? ಆದರೆ ಊಟವನ್ನೇ ದೊಡ್ಡ ವಿವಾದ ಮಾಡುತ್ತಿರುವ ಕಾಂಗ್ರೆಸ್ ನವರು ಅದೆಷ್ಟು ಹತಾಶರಾಗಿದ್ದಾರೆ ಎನ್ನುವುದು ಇದರಿಂದ ಅರ್ಥವಾಗುತ್ತದೆ ಎಂದರು.

ನಾನು ಜಾತಿ ಆಧಾರದಲ್ಲಿ ರಾಜಕಾರಣ ಮಾಡಿದವನಲ್ಲ. ಪಾಪ ನನ್ನ ಸ್ನೇಹಿತರಿಗೆ ಹಣದ ಮದ ನೆತ್ತಿಗೇರಿದೆ. ಕುಮಾರಸ್ವಾಮಿ ನನಗೆ ಡೋಂಟ್ ಕೇರ್ ಅಂದಿದ್ದಾರೆ, ನಾನೇನು ಲೆಕ್ಕಕ್ಕೆ ಇಟ್ಟಿಕೋ ಎಂದು ಹೇಳಿದ್ದೀನಾ? ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಇವರ ಹಣ ಅಧಿಕಾರ ಯಾವುದನ್ನೂ ತೀರ್ಮಾನ ಮಾಡಲ್ಲ. ಆರೂವರೆ ಕೋಟಿ ಜನ ಕುಮಾರಸ್ವಾಮಿ ಅವಶ್ಯಕತೆ ಇದೆಯೊ ಇಲ್ಲವೊ ಎಂದು ತೀರ್ಮಾನ ಮಾಡುತ್ತಾರೆ. ಅವರು ಏನೋ ಐ ಆಮ್ ಸ್ಟ್ರೈಟ್ ಫೈಟರ್ ಎಂದು ಹೇಳಿದಾರೆ. ಹೌದು ಕಣಪ್ಪ ನನಗೂ ಗೊತ್ತು, ನೀನು ಸ್ಟ್ರೈಟ್ ಪೈಟರ್ ಅಂತ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಅವರು ಗುಡುಗಿದರು.
ಕೊತ್ಚಾಲ್ ರಾಮಚಂದ್ರನ ಗರಡಿಯಲ್ಲಿ ಬಂದಿರುವವರು ನೀವು. ನೀವು ಸ್ಟ್ರೈಟ್ ಫೈಟರ್ ಆಗಿದ್ದರೆ ವಿಧಾನಸೌಧದಲ್ಲಿ ಪೈಟ್ ಮಾಡ್ತೀರಾ. ನೀವು ಬಂದಿರುವ ಹಿನ್ನೆಲೆ ಅಂತದ್ದೇ ಅಲ್ಲವೇ? ನಿಮ್ಮಮದ ಇದೆಯಲ್ಲ, ಅದನ್ನು ಇಳಿಸುವ ಕಾಲ ಸನಿಹಕ್ಕೆ ಬಂದಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಅವನ್ಯಾರೋ ಹೇಳುತ್ತಾನೆ, ನನ್ನ ಆದಾಯ ಆಲೂಗಡ್ಡೆ ಬೆಳೆದು ಬಂದಿದ್ದು ಎಂದು. ಬಂದು ನನ್ನ ತೋಟ ನೋಡಪ್ಪ ಮಹಾನುಭಾವ.. ನಾನು ಇನ್ನೊಬ್ಬರ ಥರ ಸರಕಾರದ ಜಾಗಕ್ಕೆ ಬೇಲಿ ಹಾಕಿ ಸಂಪಾದನೆ ಮಾಡಿಲ್ಲ. ಕಷ್ಟಪಟ್ಟು ಅಸ್ತಿ ಸಂಪಾದನೆ ಮಾಡಿದ್ದೇವೆ ಎಂದರು.

ಆದಿಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಮಾಡಿರುವ ಆರೋಪ ಕುರಿತು ಮಾತನಾಡಿ, ನಾನು ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದರೆ ನನ್ನ ಸರಕಾರವನ್ನು ಯಾಕೆ ಬೀಳಿಸಿಕೊಳ್ಳುತ್ತಿದ್ದೆ? ಅವರು ತನಿಖೆ ಮಾಡಿಕೊಳ್ಳಲಿ, ಈವರೆಗೆ ತನಿಖೆ ಮಾಡಿದರಲ್ಲ, ಅದು ಏನಾಯಿತು? ಎಂದು ತರಾಟೆಗೆ ತೆಗೆದುಕೊಂಡರು.
ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಮಠ ಮಾಡಿದರು ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆ ಸಮುದಾಯಗಳಲ್ಲೂ ಎಷ್ಟು ಮಠಗಳಿಲ್ಲ? ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೆವೆ. ಅದರಲ್ಲಿ ಏನಿದೆ? ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕಾ? ಎಂದು ಕೇಳಿದರು.
ಸ್ವಾಮಿಜಿ ಅವರನ್ನು ಭೇಟಿ ಮಾಡುವುದಕ್ಕೆ ಇವರು ಎಷ್ಟು ಜನ ಹೋಗಿದ್ದರು? ಎಲ್ಲಾ ಟಿವಿಗಳಲ್ಲಿ ವೀಡಿಯೋ ಬಂದಿದೆಯಲ್ಲ. ಇವರು ಏನು ಬೇಕಾದರೂ ಮಾಡಬಹುದು, ನಾವು ಮಾಡುವ ಹಾಗಿಲ್ಲವೇ? ಅದು ಕೂಡ ಒಂದು ದೊಡ್ಡ ರಾಜಕೀಯನಾ? ವರ್ಷದ ಮೊದಲ ದಿನ ನಮ್ಮ ಸಮುದಾಯದ ಗುರು ಹಿರಿಯರ ಆಶೀರ್ವಾದ ಪಡೆಯುತ್ತೇವೆ. ಅದೇನು ಮಹಾ ಅಪರಾಧವಾ? ಜ್ವರ ಬಂದಾಗ ಆಸ್ಪತ್ರೆಗೆ ಹೋಗದೆ ಇನ್ನೆಲ್ಲಿಗೆ ಹೋಗಲು ಸಾಧ್ಯ? ನಾನು 140 ಮಠಗಳಿಗೆ ಅನುದಾನ ನೀಡಿದ್ದೆ. ಮಠಗಳು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಿದ್ದೆ. ಇದೇನು ಹೊಸದಲ್ಲ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ಒಂದು ವರ್ಷದೊಳಗೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ಕಾದು ನೋಡಿ. ರಾಜಕೀಯ ಎಂದರೆ ಅದು ಹರಿಯುವ ನೀರು. ಯಾವಾಗ ಏನೇನಾಗುತ್ತದೆಯೋ ನಮಗೂ ಗೊತ್ತಾಗಲ್ಲ. ಅವರಿಗೂ ಗೊತ್ತಾಗೋದಿಲ್ಲ. ಸಚಿವರೇ ಹೇಳುತ್ತಿದ್ದಾರೆ, ಕಾಂಗ್ರೆಸ್ ನಾಯಕರೇ ದಿನ ಬೆಳಗಾದರೆ ಹೇಳುತ್ತಿದ್ದಾರಲ್ಲ, ಜೆಡಿಎಸ್ ಎಲ್ಲಿದೆ ಎನ್ನುವ ದುರಹಾಂಕರ ಮಾತುಗಳನ್ನು ಇವರು ಆಡುತ್ತಿದ್ದಾರೆ. ಸಹವಾಸ ಮಾಡಿದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟರಲ್ಲ, ಅದಕ್ಕೆ ಮರು ಜೀವ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ ಎಂದರು.












Click it and Unblock the Notifications