ಹಾಸನದಲ್ಲಿ ನಾಟಕೀಯ ಬೆಳವಣಿಗೆ: ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ
Recommended Video
ಹಾಸನ, ಮೇ 24: ನಾಟಕೀಯ ಬೆಳವಣಿಗೆಯೊಂದರಲ್ಲಿ ಹಾಸನದಲ್ಲಿ ನೂತನವಾಗಿ ಚುನಾಯಿತರಾಗಿದ್ದ ಜೆಡಿಎಸ್ ಸಂಸದ ಪ್ರಜ್ವಲ್, ಫಲಿತಾಂಶದ ಮರುದಿನವೇ ರಾಜೀನಾಮೆಗೆ ಮುಂದಾಗಿದ್ದಾರೆ.
ತಾತ, ಮಾಜಿ ಪ್ರಧಾನಿ ದೇವೇಗೌಡ ಅವರ ಸೋಲಿನಿಂದ ತೀವ್ರ ನೋವಾಗಿದೆ. ಹೀಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ಮೂಲಕ ಪ್ರಜ್ವಲ್ ಅವರು ತಮಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ದೇಚೇಗೌಡರಿಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ.
ತಮ್ಮ ರಾಜೀನಾಮೆ ಕುರಿತಂತೆ ತಂದೆ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ. ಕುಟುಂಬದವರಿಂದ ನನ್ನ ಮೇಲೆ ಯಾವುದೇ ಒತ್ತಡ ಬಂದಿಲ್ಲ. ಯಾರಿಗೂ ಈ ಬಗ್ಗೆ ಕೇಳಿಲ್ಲ. ನನ್ನ ಮನಸಿನಲ್ಲಿರುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರೊಂದಿಗೆ ಚರ್ಚಿಸಿ ಎಲ್ಲರೂ ಹೋಗಿ ದೇವೇಗೌಡರ ಮನವೊಲಿಸಲಾಗುವುದು ಎಂದು ಪ್ರಜ್ವಲ್ ತಿಳಿಸಿದ್ದಾರೆ.
ಹೋರಾಟವೇ ಜೀವನ ಎಂದುಕೊಂಡಿದ್ದ ದೇವೇಗೌಡರಿಗೆ ಸೋಲಾಗಿದೆ. ದೇವೇಗೌಡರಿಗೆ ಮತ್ತೆ ಶಕ್ತಿ ತುಂಬುವುದು ನನ್ನ ಉದ್ದೇಶ. ಇದರ ಕುರಿತು ಹಾಸನದ ಜನತೆ ತಪ್ಪು ತಿಳಿಯಬಾರದು ಎಂದು ಅವರು ಹೇಳಿದ್ದಾರೆ.

ರಾಜ್ಯಕ್ಕೆ ದೇವೇಗೌಡರ ಅಗತ್ಯವಿದೆ
ರಾಜ್ಯಕ್ಕೆ ದೇವೇಗೌಡರ ಅಗತ್ಯವಿದೆ. ಬಡವರು, ರೈತರ ಕೆಲಸಕ್ಕಾಗಿ ದೇವೇಗೌಡರು ಸಂಸತ್‌ನಲ್ಲಿ ಇರಬೇಕಿದೆ. ಅವರಿಗೆ ಹೋರಾಟದ ಶಕ್ತಿ ಇನ್ನೂ ಇದೆ. ಎಲ್ಲರಿಗೂ ಅವರು ಬೇಕಾಗಿದ್ದಾರೆ. ಅವರಿಗೆ ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇಬೆ. ನಾವೆಲ್ಲ ಅವರ ಬಗ್ಗೆ ಚರ್ಚೆ ಮಾಡಿದ್ದೇವೆ. ಮಧ್ಯಾಹ್ನ ಒಂದು ಗಂಟೆಗೆ ಅವರನ್ನು ಭೇಟಿ ಮಾಡಿ ಮನವೊಲಿಸಲಾಗುವುದು.

ಸೋಲಿನಿಂದ ಎಲ್ಲರಿಗೂ ಬೇಸರವಾಗಿದೆ
ದೇವೇಗೌಡರ ಸೋಲಿನಿಂದ ಹಾಸನದಲ್ಲಿ ಎಲ್ಲರಿಗೂ ಬೇಸರವಾಗಿದೆ. ಈ ಸೋಲು ಆಕಸ್ಮಿಕ. ತುಮಕೂರಿನಲ್ಲಿಯೂ ಬೇಸರವಿದೆ. ಸಂಸತ್ ಚುನಾವಣೆಯಲ್ಲಿ ಹನ್ನೊಂದು ಸಾವಿರದ ಸೋಲು ದೊಡ್ಡ ಅಂತರವೇನಲ್ಲ. ತುಮಕೂರಿನ ಜನತೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇದು ನನ್ನ ಮನಸಿನ ನಿರ್ಧಾರ. ಕೇವಲ ಅಭಿಪ್ರಾಯ ಅಲ್ಲ.

ಹಾಸನದಲ್ಲಿ ಸಂತಸ ಮೂಡಿಸುವುದೇ ಉದ್ದೇಶ
ಇದು ನನ್ನ ನಿರ್ಧಾರ. ಅವರ ಮನವೊಲಿಸಿ ಮತ್ತೆ ಹಾಸನಕ್ಕೆ ಕರೆದುಕೊಂಡು ಬಂದು ನಮ್ಮ ಜಿಲ್ಲೆಯ ಜನರಿಗೆ ಮತ್ತೆ ಸಂತಸ ಮೂಡಿಸುವುದು ನನ್ನ ಉದ್ದೇಶ. ಹಾಸನ ಜಿಲ್ಲೆಯ ಜನತೆಗೆ ಅವರ ಮೇಲೆ ಭಾರಿ ವಿಶ್ವಾಸವಿದೆ. ಅವರು ಪಟ್ಟಿರುವ ಶ್ರಮ, ಅವರ ಹೋರಾಟ ಹಾಸನದ ಮನೆ ಮನೆಗೂ ಗೊತ್ತಿದೆ. ಅವರ ಮತ್ತೆ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ.

ಇದು ತ್ಯಾಗ ಅಲ್ಲ, ಗೌರವ
ನನ್ನ ರಾಜೀನಾಮೆ ನಿರ್ಧಾರ ಯಾವುದೇ ರೀತಿಯ ತ್ಯಾಗ ಅಲ್ಲ. ಇದು ಅವರ ರಾಜಕೀಯ ಜೀವನದಲ್ಲಿ ಮಾಡಿರುವ ಹೋರಾಟಕ್ಕೆ ನಾನು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರು ನೀಡುತ್ತಿರುವ ಗೌರವ. ಈ ಬಗ್ಗೆ ಅವರ ಮನವೊಲಿಸುವ ವಿಶ್ವಾಸ ಇದೆ. ಮುಖ್ಯಮಂತ್ರಿ ಮುಖಂಡರನ್ನು ಭೇಟಿ ಮಾಡುತ್ತೇನೆ. ಅವರನ್ನು ಒಪ್ಪಿಸುವ ನಂಬಿಕೆ ಇದೆ.

ತುಮಕೂರಿನ ಜನತೆಗೆ ಧನ್ಯವಾದ
ಸೋಲು ಗೆಲುವು ಎಲ್ಲ ಪಕ್ಷಕ್ಕೂ, ಎಲ್ಲ ಕಡೆಯೂ ಇರುತ್ತದೆ. ಇಂಥದ್ದೇ ಕಾರಣಕ್ಕೆ ಸೋಲುತ್ತಾರೆ ಎಂದು ಹೇಳಲಾಗದು. ದೇವೇಗೌಡರಿಗೆ ತುಮಕೂರಿನಲ್ಲಿ ಪ್ರಚಾರ ಮಾಡಲು ಸಾಕಷ್ಟು ಸಮಯಾವಕಾಶ ಸಿಗದೇ ಇರವುದು ಕೂಡ ಸೋಲಿಗೆ ಕಾರಣ ಇರಬಹುದು. ಆದರೆ, ತುಮಕೂರು ಜಿಲ್ಲೆಯ ಜನರಿಗೆ ಧನ್ಯವಾದ ಹೇಳುತ್ತೇನೆ. ಅವರು ಐದೂವರೆ ಲಕ್ಷ ಮತ ಕೊಟ್ಟು ಗೌರವ ನೀಡಿದ್ದಾರೆ. ಅವರಿಗೆ ಚಿರಋಣಿ ಆಗಿರುತ್ತೇನೆ ಎಂದು ಪ್ರಜ್ವಲ್ ಹೇಳಿದರು.












Click it and Unblock the Notifications