lok sabha election: ಬಿಜೆಪಿ ಕೋಟೆಯಲ್ಲಿ ಬಾವುಟ ಹಾರಿಸುವ ಕನಸಿನಲ್ಲಿದೆ ಕಾಂಗ್ರೆಸ್
ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ 2024ರ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 7ರಂದು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಗಳ ರಂಗು ಮೇಳೈಸಲಿದೆ. ಕರ್ನಾಟಕದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆಗಳು ನಡೆದಿವೆ. ಚುನಾವಣಾ ಫಲಿತಾಂಶ ಜೂನ್ 4ರಂದು ಹೊರ ಬೀಳಲಿದೆ.
ಏಪ್ರಿಲ್ 26 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಿದೆ. ಮೇ 7ರಂದು ಎರಡನೇ ಹಂತದ ಚುನಾವಣೆಗಳು ನಡೆಯುತ್ತಿವೆ. ಇದು ದೇಶದಲ್ಲಿ ನಡೆಯುತ್ತಿರುವ ಮೂರನೇ ಹಂತದ ಚುನಾವಣೆ ಆಗಿದೆ. ಇದರ ಬಿಸಿ, ಈಗ ಉತ್ತರ ಕರ್ನಾಟಕ ಭಾಗದಲ್ಲಿ ಆವರಿಸಿದೆ. ಕಳೆದ ಚುನಾವಣೆಯಲ್ಲಿ ಈ ಭಾಗದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿ ಇಂಹತದ್ದೇ ಸಾಧನೆಯನ್ನು ಮಾಡುವ ಕನಸಿನಿಂದ ಕಣಕ್ಕೆ ಇಳಿದಿದೆ.

ಈ ಬಾರಿ ಎಲ್ಲರ ಚಿತ್ತ ಕದ್ದಿರುವ ಲೋಕಸಭಾ ಕ್ಷೇತ್ರಗಳಲ್ಲಿ ಚಿಕ್ಕೋಡಿ ಕ್ಷೇತ್ರ ಸಹ ಒಂದು. ಈ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಹೊಸ ಮುಖಕಕ್ಕೆ ಮಣೆ ಹಾಕಿದೆ. ಕಾಂಗ್ರೆಸ್‌ನಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆ ಆಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ದಶಕಗಳೇ ಕಳೆದಿವೆ. ಇಬ್ಬರೂ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದು, ಭಾರೀ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.
ಏನು ಹೇಳುತ್ತೆ ಕ್ಷೇತ್ರದ ಇತಿಹಾಸ
1999ರ ವರೆಗೆ ಮೀಸಲು ಕ್ಷೇತ್ರವಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿ ಶಂಕರಾನಂದ್ ಏಳು ಬಾರಿ ಜಯ ಸಾಧಿಸಿದ್ದಾರೆ. 1996ರಲ್ಲಿ ಈ ಕ್ಷೇತ್ರ ಜನತಾ ದಳದ ಅಭ್ಯರ್ಥಿಗೆ ಜೈ ಎಂದಿದೆ. ಇನ್ನು ಈ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ ಮೂರು ಬಾರಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ರಮೇಶ್ ಜಿಗಜಿಣಗಿ ಸದ್ಯ ವಿಜಯಪುರ ಕ್ಷೇತ್ರದ ಸಂಸದರಾಗಿದ್ದಾರೆ. 2009ರಲ್ಲಿ ಬಿಜೆಪಿಯ ರಮೇಶ್ ಕತ್ತಿ ಗೆದ್ದರೆ, 2014ರಲ್ಲಿ ಪ್ರಕಾಶ್ ಹುಕ್ಕೇರಿ ಈ ಕ್ಷೇತ್ರ ಗೆದ್ದು ಮತ್ತೇ ಕಾಂಗ್ರೆಸ್ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಜೆಪಿ ಜಯದ ಕನಸು
ಅಣ್ಣಾ ಸಾಹೇಬ್ ಜೊಲ್ಲೆ ಸಹಾಕರಿ ರಂಗದಲ್ಲಿ ಭಾರೀ ಹೆಸರು ಮಾಡಿದ್ದು, ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ಈ ಬಾರಿ ಎರಡನೇ ಬಾರಿ ಲೋಕಸಭೆ ಪ್ರವೇಶಿಸುವ ಕನಸಿನಲ್ಲಿದ್ದಾರೆ. ಕ್ಷೇತ್ರದಲ್ಲಿ ಹಲವು ಪ್ಲಸ್ ಮೈನಸ್‌ಗಳು ಇದ್ದೇ ಇವೆ. ತಮ್ಮದೇ ಪಕ್ಷದ ಮುಖರಂಡರೊಂದಿಗೆ ಅಣ್ಣಾ ಸಾಹೇಬ್ ಮುನಿಸಿಕೊಂಡಿದ್ದು ಪಕ್ಷಕ್ಕೆ ಪೆಟ್ಟು ನೀಡಿದರು ಅಚ್ಚರಿಯಿಲ್ಲ.
ಯುವಕರಿಗೆ ಕಾಂಗ್ರೆಸ್ ಮಣೆ
ಪ್ರಿಯಾಂಕ್ ಜಾರಕೀಹೊಳಿ ವಿದ್ಯಾವಂತೆ, ಯುವತಿ ಆಗಿದ್ದು ಯುವಕರನ್ನು ತಮ್ಮತ್ತ ಸೆಳೆಯಲು ಸಫಲರಾಗಬಹುದು. ರಾಜಕೀಯ ಅನುಭವದ ಕೊರತೆ ಕಡಿಮೆ ಕಂಡರೂ ಸಹ, ಕುಟುಂಬ ಇವರಿಗೆ ಬೆನ್ನಿಗೆ ನಿಂತಿರುವುದು ಇವರಿಗೆ ಪ್ಲಸ್ ಆಗಬಹುದು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನ ಸಭಾ ಕ್ಷೇತ್ರಗಳು ಬರುತ್ತವೆ. ಚಿಕ್ಕೋಡಿ, ಅಥಣಿ, ಹುಕ್ಕೇರಿ, ರಾಯಬಾಗ, ನಿಪಾಣಿ, ಕಾಗವಾಡ, ಕುಡಚಿ, ಯಮಕನಮರಡಿ ಕ್ಷೇತ್ರಗಳು ಸೇರಿವೆ. ಈ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ 8ರಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ ಐದರಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಒಟ್ಟು 17.30 ಲಕ್ಷ ಮತದಾರರು ಇದ್ದು, ಪುರುಷರ ಸಂಖ್ಯೆ ಕೊಂಚ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಎನ್ನಲಾಗುತ್ತಿದೆ.












Click it and Unblock the Notifications