Anantkumar Hegde: ದ್ವೇಷ ಭಾಷಣಕಾರ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಲು ಕಾರಣಗಳಿವು
ಬೆಂಗಳೂರು, ಮಾರ್ಚ್ 25: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಲವು ಚಿಂತನ ಮಂಥನ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಿಂದೂ ಫೈರ್ ಬ್ರ್ಯಾಂಡ್ ಎಂದು ಹಲವು ವಿವಾದಗಳನ್ನು ತಲೆಗೆ ಕಟ್ಟಿಕೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಬರೋಬ್ಬರಿ ನಾಲ್ಕು ವರ್ಷ ಸಾರ್ವಜನಿಕವಾಗಿ ಕಣ್ಮರೆಯಾಗಿ, ಒಂದು ಸುದ್ದಿಯು ಇಲ್ಲದೇ ಇದ್ದ ಅನಂತಕುಮಾರ ಹೆಗಡೆ, ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಸಕತ್ ಆಕ್ಟಿವ್ ಆಗಿದ್ದರು. 'ಸಂವಿಧಾನವನ್ನು ಬದಲಾಯಿಸಲು ಪಕ್ಷಕ್ಕೆ 400 ಸೀಟುಗಳು ಬೇಕು' ಎಂದು ದೊಡ್ಡ ವಿವಾದ ಮಾಡಿದ್ದ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿಲ್ಲ. ಅವರ ಬದಲಿಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.

ಕೆಲಸಕ್ಕಿಂತ ವಿವಾದಗಳೇ ಕೈ ಹಿಡಿಯುತ್ತೆ ಅಂದುಕೊಂಡ್ರಾ ಅನಂತಕುಮಾರ ಹೆಗಡೆ!?
ಸಂಸದ ಅನಂತಕುಮಾರ್ ಹೆಗಡೆ ಕಳೆದ ನಾಲ್ಕು ತಿಂಗಳುಗಳಿಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಮತ್ತೆ ಚುನಾವಣೆಗೆ ಟಿಕೆಟ್ ಗಳಿಸಬಹುದು ಎಂಬ ಯೋಚನೆಯಲ್ಲಿದ್ದರು. ಒಮ್ಮೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುಗಿ ಬೀಳುವುದು, ಪ್ರಧಾನಿ ಮೋದಿಯವರನ್ನು ಹೊಗಳುವುದು, ಹೆಚ್ಚು ಸುದ್ದಿಯಾಗುವ ರೀತಿಯ ಹೇಳಿಕೆಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರು.
ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ನಾಯಕತ್ವವನ್ನು ಮುಜುಗರಕ್ಕೀಡು ಮಾಡಿದ ಅಭ್ಯರ್ಥಿಗಳನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತಿದ. ಅವರಿಗೆ ಟಿಕೆಟ್ ಮಿಸ್ ಆಗುವುದು ಪಕ್ಕ ಎಂದು ಈ ಹಿಂದೆಯೇ ಹಲವು ಬಿಜೆಪಿ ಹಿರಿಯ ನಾಯಕರು ಹೇಳಿದ್ದರು. ಇನ್ನು, ಈ ವರ್ಷ ಉತ್ತರ ಕನ್ನಡದಿಂದ ಟಿಕೆಟ್ ಕಳೆದುಕೊಳ್ಳಲು ಕಾರಣವಾದ ಅಂಶಗಳು ಯಾವುವು ಎಂಬುದನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ದ್ವೇಷ ಭಾಷಣ
ಸಂಸದ ಅನಂತ ಕುಮಾರ್ ಹೆಗಡೆ ದ್ವೇಷ ಭಾಷಣಕ್ಕೆ ಹೆಸರುವಾಸಿ ಎನ್ನಬಹುದು. ಚುನಾವಣೆ ಹತ್ತಿರ ಬರುತ್ತಿದ್ದಂತೆ, ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಮಾಡುತ್ತೇವೆ. ಅದರ ಸಾಲಿಗೆ ಭಟ್ಕಳದ ಚಿನ್ನದ ಪಳ್ಳಿ ಸೇರಲಿದೆ. ಎಲ್ಲೆಲ್ಲಿ ದೇವಸ್ಥಾನ ಒಡೆದು ಮಸೀದಿಗಳನ್ನು ಕಟ್ಟಿದ್ದಾರೋ ಅಲ್ಲೆಲ್ಲ ಮತ್ತೆ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಪ್ರಚೋದನಾಕರಿ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ವಿರುದ್ಧ ಕಿಡಿ ಕಾರುವ ಭರದಲ್ಲಿ ಸಿಎಂ ಸಿದ್ದರಾಮಯ್ಯ, ಇಂದಿರಾ ಗಾಂಧಿ ಸಂಜಯ್ ಗಾಂಧಿ, ರಾಜೀವ್ ಗಾಂಧಿ ಅವರ ಬಗ್ಗೆಯೂ ವೈಯಕ್ತಿಕವಾಗಿ ದಾಳಿ ನಡೆಸಿದ್ದರು. ಬಿಜೆಪಿಯ ಶತ್ರು ಸಿದ್ದರಾಮಯ್ಯನೇ ಹೊರತು ಕಾಂಗ್ರೆಸ್ ಅಲ್ಲ ಎಂದಿದ್ದ ಅವರು, ಸಿದ್ದರಾಮಯ್ಯ ಅವರನ್ನು ಮಗನೇ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ಮುಸ್ಲಿಂ ವಿರೋಧಿ ನಡೆ
ಈ ಹಿಂದೆ ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಮಾಡುತ್ತೇವೆ ಎಂದು ಮುಸ್ಲಿಮರ ವಿರುದ್ಧ ಮಾತನಾಡಿದ್ದ ಅವರು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ನೆಮ್ಮದಿ ಇರುವುದಿಲ್ಲ ಎಂದು ತಿಳಿಸಿದ್ದರು. ಇಂತಹ ಕಾಲಘಟ್ಟದಲ್ಲಿ ಹಿಂದೂ ಧರ್ಮ, ದೇಶ ಉಳಿಯಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕಾಗಿದೆ ಎಂದು ತಮ್ಮ ಮುಸ್ಲಿಂ ವಿರೋಧಿ ನಡೆಯನ್ನು ಹೊರಹಾಕಿದ್ದರು.
ಸಂವಿಧಾನ ಬದಲಾವಣೆ ಹೇಳಿಕೆ
ಬಿಜೆಪಿಗೆ ಮುಜುಗರ ಕೊಟ್ಟ ಅನಂತಕುಮಾರ ಹೆಗಡೆ ಅವರ ಮತ್ತೊಂದು ಹೇಳಿಕೆ ಸಂವಿಧಾನ ಬದಲಾವಣೆ ಹೇಳಿಕೆ. ಸಂವಿಧಾನ ತಿದ್ದುಪಡಿ ಜಾರಿಗೆ ತರಲು 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು. ಅದಕ್ಕಾಗಿ ಮೋದಿ ಈ ಬಾರಿ 400 ಸೀಟು ಗೆಲ್ಲಿಸುವ ಗುರಿ ಹೊಂದಿದ್ದಾರೆ. ಹಿಂದೂಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಸಂವಿಧಾನವನ್ನು ಬದಲಾಯಿಸಿದೆ ಎಂದು ತಿಳಿಸಿದ್ದರು. ಸಂವಿಧಾನ ಬದಲಾವಣೆ ಹೇಳಿಕೆಯಿಂದ ತುಂಬಾ ಮುಜುಗರಕ್ಕೆ ಒಳಗಾದ ಬಿಜೆಪಿ ಅನಂತಕುಮಾರ ಹೆಗಡೆ ಅವರಿಂದ ಅಂತರ ಕಾಯ್ದುಕೊಂಡಿತ್ತು.
ಕ್ಷೇತ್ರ ಮತ್ತು ಪಕ್ಷದಲ್ಲಿ ನಿಷ್ಕ್ರೀಯತೆ
ಇನ್ನು, ಆರು ಬಾರಿ ಗೆಲುವು ಸಾಧಿಸಿರುವ ಅನಂತ ಕುಮಾರ ಹೆಗಡೆ ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬುದು ಬಿಜೆಪಿಯವರೆ ಒಪ್ಪುತ್ತಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ನನ್ನ ಕೆಲಸವೆ ಅಲ್ಲ. ನಾವು ಏನಿದ್ದರೂ ಶಾಸನ ರಚನೆ ಮಾಡುವುದಷ್ಟೆ. ಅದಷ್ಟೇ ನಮ್ಮ ಕೆಲಸ ಎಂದು ಹೇಳಿಕೊಂಡು ಓಡಾಡಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಆರೋಪ.
ಪಕ್ಷ ಸಂಘಟನೆಯಲ್ಲಿ ಭಾಗಿಯಾಗದೇ ಇರುವುದು
ಇನ್ನು, ಕಲೆದ ಚುನಾವಣೆಯಲ್ಲಿ ಗೆದ್ದ ಮೇಲೆ ಕ್ಷೇತ್ರದ ಕಡೆಗೆ ತಲೆ ಹಾಕದ ಅವರು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿಯೂ ಪ್ರಚಾರ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರಕ್ಕೆ ಬಂದರೂ ಕೂಡ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆಯೇ ಇದ್ದರು. ಹೀಗಾಗಿ ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಅನಂತಕುಮಾರ ಹೆಗಡೆ ಪಾಲು ಹೆಚ್ಚಿದೆ ಎಂಬ ಆರೋಪವು ಇದೆ.
ಈ ಎಲ್ಲಾ ಕಾರಣಗಳಿಂದಲೇ ಬಿಜೆಪಿ ಈ ಬಾರಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿಗಳು ಚುನಾವಣೆಗೂ ಮುನ್ನವೇ ಹರಡಿತ್ತು. ಅದಕ್ಕೆ ತಕ್ಕಂತೆ ಈ ಬಾರಿ ಸಂಸದ ಅನಂತ ಕುಮಾರ ಹೆಗಡೆ ಅವರನ್ನು ಕೆಳಗಿಳಿಸಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುಕ್ಕಾಣಿ ಹಿಡಿಯಲು ಅವಕಾಶ ನೀಡಿದೆ.












Click it and Unblock the Notifications