ಲೋಕಸಭಾ ಚುನಾವಣೆ: ಇಂದು ಮತಯಂತ್ರ ಸೇರಲಿರುವ 14 ಕ್ಷೇತ್ರಗಳ 247 ಅಭ್ಯರ್ಥಿಗಳ ಭವಿಷ್ಯ!
ಬೆಂಗಳೂರು, ಏಪ್ರಿಲ್ 26: ದೇಶದಲ್ಲಿ ಏಳು ಹಂತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಪೈಕಿ ಇದೀಗ ಎರಡನೇ ಹಂತದ ಚುನಾವಣೆ ಕರ್ನಾಟಕ ಸೇರಿದಂತೆ ಇತರೆಡೆಗಳಲ್ಲಿ ಸುಮಾರು 89 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ರಾಜ್ಯದ ಮತದಾರರಿಗೆ ಇದು ಮೊದಲ ಹಂತದ ಮತದಾನವಾಗಿದ್ದು, 14 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರರು ನಿರ್ಧಾರ ಮಾಡಲಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಹತ್ತು ಹಲವು ವಿಶೇಷತೆಗಳಿರುವುದು ಕಂಡು ಬಂದಿದ್ದು, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ಉತ್ಸಾಹದಿಂದ ಮತಗಟ್ಟೆಯತ್ತ ಬರುತ್ತಿರುವುದು ಎದ್ದು ಕಾಣಿಸುತ್ತಿದೆ. ಇಲ್ಲಿ ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಶಾಂತಿಯುತವಾಗಿ ಮತಚಲಾಯಿಸಲು ಚುನಾವಣಾ ಆಯೋಗ ಸರ್ವ ರೀತಿಯ ಅನುಕೂಲತೆ ಮಾಡಿಕೊಟ್ಟಿದೆ.

ರಾಜ್ಯದ ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಹೀಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು ಸುಮಾರು 247 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧಾರ ಮಾಡಲಿದ್ದಾರೆ.
ಈ ಬಾರಿಯ ಬದಲಾವಣೆ ಏನು?
ಸದ್ಯದ 14 ಲೋಕಸಭಾ ಕ್ಷೇತ್ರಗಳನ್ನು ನೋಡಿದ್ದೇ ಆದರೆ ಕಳೆದ ಬಾರಿ ಈ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಹಾಸನವನ್ನು ಹೊರತು ಪಡಿಸಿದರೆ ಉಳಿದ 12 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅದ್ವಿತೀಯ ಸಾಧನೆಗೈದಿತ್ತು. ಹಾಸನದಲ್ಲಿ ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಮತ್ತು ಬೆಂಗಳೂರು ಗ್ರಾಮಾಂತರದಿಂದ ಕಾಂಗ್ರೆಸ್ ನ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದರು. ಇಡೀ ರಾಜ್ಯದಲ್ಲಿ ತಲಾ ಒಂದು ಸ್ಥಾ ನವನ್ನಷ್ಟೆ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆದ್ದು ಸಮಾಧಾನ ಪಟ್ಟುಕೊಂಡಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆಯನ್ನು ಎದುರಿಸಿದ್ದರೆ, ಈ ಬಾರಿ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿವೆ. ಇನ್ನು 14 ಕ್ಷೇತ್ರಗಳ ಪೈಕಿ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಜೆಡಿಎಸ್ ಸ್ಪರ್ಧೆ ಮಾಡುತ್ತಿದ್ದು, ಈ ಮೂರು ಕ್ಷೇತ್ರಗಳಲ್ಲಿಯೂ ಮೊದಲ ಹಂತದಲ್ಲಿಯೇ ಚುನಾವಣೆ ಮುಗಿದು ಹೋಗಲಿದೆ.

14 ಕ್ಷೇತ್ರಗಳಿಂದ 247 ಅಭ್ಯರ್ಥಿಗಳು ಸ್ಪರ್ಧೆ
ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದರೆ, ಮಂಡ್ಯದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೋಲಾರದಿಂದ ಎಂ ಮಲ್ಲೇಶ್ ಬಾಬು ಅವರು ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಉಳಿದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಾಗಿ ಗಮನಸೆಳೆಯುತ್ತಿವೆ.
ಇವತ್ತು ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಮತದಾರರು ನಮ್ಮನ್ನು ಆಯ್ಕೆ ಮಾಡುತ್ತಾರಾ? ಎಂಬ ನಿರೀಕ್ಷೆಯಲ್ಲಿದ್ದಾರೆ. ಅಭ್ಯರ್ಥಿಗಳ ಪೈಕಿ 226 ಮಂದಿ ಪುರುಷರು ಹಾಗೂ 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲ 14 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಳಿಸಿದ್ದರೆ, ಬಿಜೆಪಿ- 11, ಜೆಡಿಎಸ್-3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೆಲ್ಲದರ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ 29 ಅಭ್ಯರ್ಥಿಗಳು ಗೆಲುವಿಗಾಗಿ ಕಣಕ್ಕಿಳಿದಿದ್ದರೆ, ದಕ್ಷಿಣ ಕನ್ನಡದಲ್ಲಿ ಅತಿಕಡಿಮೆ ಅಂದರೆ 9 ಅಭ್ಯರ್ಥಿಗಳು ಗೆಲುವಿಗಾಗಿ ಹೋರಾಟಕ್ಕಿಳಿದಿದ್ದಾರೆ.
ಯಾರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ?
ಈ ಚುನಾವಣೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್, ತುಮಕೂರಿನಿಂದ ಮಾಜಿ ಸಚಿವ ವಿ. ಸೋಮಣ್ಣ, ಬೆಂಗಳೂರು ಉತ್ತರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿಸಂಸದ ಡಿ.ಕೆ. ಸುರೇಶ್, ಖ್ಯಾತ ಹೃದಯ ತಜ್ಞ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರಿಗೆ ಪ್ರತಿಷ್ಠೆಯಾಗಿದೆ.
ಇಷ್ಟೇ ಅಲ್ಲದೆ, ಹಾಸನದಿಂದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ, ಹಾಲಿ ಸಂಸದ ತೇಜಸ್ವಿಸೂರ್ಯ, ಮುದ್ದಹನುಮೇಗೌಡ, ರಾಜುಗೌಡ, ವೆಂಕಟರಮಣೇಗೌಡ, ಬಿ.ಎನ್.ಚಂದ್ರಪ್ಪ, ಜಯಪ್ರಕಾಶ್ಹೆಗಡೆ, ಎಂ.ಲಕ್ಷ್ಮಣ್, ಹಮಾನುಲ್ಲಾಖಾನ್, ಗೋವಿಂದಕಾರಜೋಳ ಸೇರಿದಂತೆ ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್, ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಡಾ.ಕೆ. ಸುಧಾಕರ್, ಕಾಂಗ್ರೆಸ್ನ ರಕ್ಷಾ ರಾಮಯ್ಯ ಅವರು ಕಣಕ್ಕಿಳಿದಿದ್ದಾರೆ.
ನಾಳೆಯಿಂದ ಇನ್ನುಳಿದ ಕ್ಷೇತ್ರಗಳತ್ತ ಚಿತ್ತ
ಇದೀಗ ಮತದಾನ ನಡೆದಿರುವ 14 ಕ್ಷೇತ್ರಗಳ 247 ಅಭ್ಯರ್ಥಿಗಳ ಭವಿಷ್ಯ ಇಂದು ಸಂಜೆಯೊಳಗೆ ಮತಯಂತ್ರ ಸೇರಲಿದೆ. ಹಾಗೆಯೇ ಮತದಾರರು ಯಾರಿಗೆ ಜೈ ಎಂದಿದ್ದಾರೆ ಎನ್ನುವುದು ಕೂಡ ರಹಸ್ಯವಾಗಿ ಉಳಿಯಲಿದೆ. ಇಲ್ಲಿ ಮತದಾನ ಮುಗಿಯುತ್ತಿದ್ದಂತೆಯೇ ನಾಯಕರೆಲ್ಲರೂ ನಾಳೆಯಿಂದಲೇ ಉಳಿದ ಕ್ಷೇತ್ರಗಳತ್ತ ತಮ್ಮ ಪ್ರಯಾಣ ಬೆಳೆಸಲಿದ್ದು, ಅಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲ್ಲಿಸಲು ಬೇಕಾದ ತಂತ್ರಗಳನ್ನು ರೂಪಿಸಲಿದ್ದಾರೆ. ಮೇ.7ರಂದು ರಾಜ್ಯದಲ್ಲಿ ಎರಡನೇ (ದೇಶದಲ್ಲಿ ಮೂರನೇ) ಹಂತದ ಚುನಾವಣೆ ನಡೆಯಲಿದ್ದು, ಅಲ್ಲಿಗೆ ರಾಜ್ಯದಲ್ಲಿದ್ದ ಚುನಾವಣಾ ಕಾವು ತಣ್ಣಗಾಗಲಿದೆ.












Click it and Unblock the Notifications