Lok sabha election: ಯಡಿಯೂರಪ್ಪ ಭೇಟಿಯಾದ ವಿ. ಸೋಮಣ್ಣ!
ಬೆಂಗಳೂರು, ಮಾರ್ಚ್ 03: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಕರ್ನಾಟಕದ ರಾಜಕೀಯದಲ್ಲಿ ಹಲವು ಬೆಳವಣಿಗೆ ನಡೆಯುತ್ತಿದೆ. ಮಾಜಿ ಸಚಿವ ವಿ. ಸೋಮಣ್ಣ ಮುನಿಸು ಮರೆತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಸೋಮಣ್ಣ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 'ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಜನ್ಮದಿನದ ಶುಭಾಶಯ ಕೋರಿ, ಸಮಾಲೋಚನೆ ನಡೆಸಲಾಯಿತು' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ತುಮಕೂರು ಕ್ಷೇತ್ರದ ಸಂಸದ ಜಿ. ಎಸ್. ಬಸವರಾಜು, ಪಕ್ಷದ ಮುಖಂಡರಾದ ಲಕ್ಷ್ಮೀ ನಾರಾಯಣ, ಡಾ. ಅರುಣ್ ಸೋಮಣ್ಣ ಉಪಸ್ಥಿತರಿದ್ದರು.
ಮುನಿಸು ಮರೆತ ವಿ. ಸೋಮಣ್ಣ: 2023ರ ವಿಧಾನಸಭೆ ಚುನಾವಣೆಯ ಸಮಯದಿಂದ ವಿ. ಸೋಮಣ್ಣ ಬಿ. ಎಸ್. ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿದ್ದರು. ಹಲವು ಬಾರಿ ಯಡಿಯೂರಪ್ಪ ಪುತ್ರ ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡಿದ್ದರು.
ಆದರೆ ಕಳೆದ ವಾರದ ಸಮಾರಂಭವೊಂದರಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರರನ್ನು ವಿ. ಸೋಮಣ್ಣ ಭೇಟಿಯಾಗಿದ್ದರು. ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ. ಟಿ. ರವಿ ಸಹ ಉಪಸ್ಥಿತರಿದ್ದರು.
ಫೆಬ್ರವರಿ 27ರಂದು ಬಿ. ಎಸ್. ಯಡಿಯೂರಪ್ಪ ಹುಟ್ಟುಹಬ್ಬ ಅಂದು ವಿ. ಸೋಮಣ್ಣ ಫೇಸ್‌ಬುಕ್ ಪೋಸ್ಟ್ ಮೂಲಕ ಶುಭಾಶಯಗಳನ್ನು ಕೋರಿದ್ದರು. ಶನಿವಾರ ಬೆಂಗಳೂರಿನ ನಿವಾಸದಲ್ಲಿ ಯಡಿಯೂರಪ್ಪ ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ವರುಣ, ಹನೂರು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದ ವಿ. ಸೋಮಣ್ಣ ಎರಡು ಕಡೆ ಸೋತಿದ್ದರು. ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದ ಅವರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು.
ತುಮಕೂರು ಕ್ಷೇತ್ರದ ಹಾಲಿ ಸಂಸದ ಜಿ. ಎಸ್. ಬಸವರಾಜು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ವಿ. ಸೋಮಣ್ಣ ಈ ಬಾರಿಯ ಲೋಕಸಭೆ ಚುನಾವಣೆಗೆ ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.
ಬಿಜೆಪಿ ಶನಿವಾರ ಚುನಾವಣೆಗೆ 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿಲ್ಲ. ಜೆಡಿಎಸ್ ಜೊತೆ ಸೇರಿ ಚುನಾವಣೆ ಎದುರಿಸಲಿರುವ ಪಕ್ಷ ಸೀಟು ಹಂಚಿಕೆ ಅಂತಿಮಗೊಂಡ ಬಳಿಕ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ವಿ. ಸೋಮಣ್ಣ ತುಮಕೂರು ಟಿಕೆಟ್ ಅಷ್ಟು ಸುಲಭವಾಗಿಲ್ಲ. ಆದರೆ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದರೆ ಎಲ್ಲರೂ ಪಾಲಿಸಬೇಕು. ಸೋಮಣ್ಣ ಕ್ಷೇತ್ರಕ್ಕೆ ಹೊರಗಿನವರು. 40 ವರ್ಷ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಯುವಕರಿಗೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು ಎಂಬ ಕೂಗಿದೆ.
ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ವಿ. ಸೋಮಣ್ಣ ಮಾತನಾಡಿದ್ದು, "ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡುವಂತೆ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ್ದೇನೆ. ವರಿಷ್ಠರು ಒಪ್ಪಿಗೆ ನೀಡಿದರೆ ಸ್ಪರ್ಧಿಸುತ್ತೇನೆ" ಎಂದು ಹೇಳಿದ್ದಾರೆ.
"ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲು ಅಳಿಲು ಸೇವೆ ಮಾಡುವ ಆಸೆ ನನ್ನದು. ವರಿಷ್ಠರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಸೂಚಿಸಿದರೂ ಕಣಕ್ಕಿಳಿಯಲು ಸಿದ್ಧ. ತುಮಕೂರು ಟಿಕೆಟ್ ತಮಗೆ ಕೊಡುವ ಬಗ್ಗೆ ಮಾಹಿತಿ ಇಲ್ಲ. ಅಲ್ಲಿ ಮನೆಯನ್ನೂ ಮಾಡಿಲ್ಲ. ತುಮಕೂರಿನ ಜೊತೆ ಸಂಬಂಧವು ಚೆನ್ನಾಗಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications