Government employee; ಲೋಕಸಭೆ ಚುನಾವಣೆ, ರಜೆಗೆ ಪೂರ್ವಾನುಮತಿ
ಬೆಂಗಳೂರು, ಫೆಬ್ರವರಿ 22; ಲೋಕಸಭೆ ಚುನಾವಣೆ 2024ರ ತಯಾರಿ ಜೋರಾಗಿದೆ. ಮಾರ್ಚ್ ತಿಂಗಳಿನಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ.
ವಿವಿಧದ ಜಿಲ್ಲಾಡಳಿತಗಳು ಚುನಾವಣಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಚುನಾವಣಾ ಕರ್ತವ್ಯ ನಿರ್ವಹಣೆಗೆ ನೋಡಲ್ ಅಧಿಕಾರಿ, ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.

ಯಾವುದೇ ಅಧಿಕಾರಿ, ಸಿಬ್ಬಂದಿಗಳು ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆ ಅಥವಾ ಚುನಾವಣಾ ಕಾರ್ಯಕ್ಕೆ ಗೈರು ಹಾಜರಾಗಬಾರದು. ಅನುಮತಿ ಪಡೆಯದೆ ಗೈರಾದಲ್ಲಿ ಗಂಭೀರವಾಗಿ ಪರಿಗಣಿಸಿ, ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುತ್ತದೆ.
ಲೋಕಸಭಾ ಚುನಾವಣೆ-2024 ಕಾರ್ಯಗಳಿಗೆ ನೂತನವಾಗಿ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳ, ಚುನಾವಣಾ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ಚುನಾವಣೆಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಚುನಾವಣಾ ಸಂಬಂಧಿತ ಕಾರ್ಯಗಳು ಸುಗಮವಾಗಿ, ಕಾಲಮಿತಿಯಲ್ಲಿ ನಡೆಸಲು ವಿವಿಧ ವಿಭಾಗಗಳಿಗೆ ಹಿರಿಯ ಅಧಿಕಾರಿಗಳನ್ನು ನೇಮಿಸಿ, ಆದೇಶಿಸಲಾಗಿದೆ. ನೊಡಲ್ ಅಧಿಕಾರಿಗೆ ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅವರ ತಂಡದ ಸದಸ್ಯರನ್ನಾಗಿ ನೇಮಿಸಿದೆ.
ಪ್ರತಿ ನೊಡಲ್ ಅಧಿಕಾರಿ ತನ್ನ ವಿಭಾಗದ ಕಾರ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ನೀಡಿ, ತನ್ನ ತಂಡವನ್ನು ಸುಸಜ್ಜಿತಗೊಳಿಸುವುದು ಅವರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಅಧಿಕಾರಿ ತನಗೆ ನಿಯೋಜಿಸಿದ ಚುನಾವಣಾ ಕಾರ್ಯಗಳ ಬಗ್ಗೆ, ಅದಕ್ಕೆ ಅನ್ವಯಿಸುವ ಸೆಕ್ಷನ್, ಕಾನೂನು, ಐಪಿಸಿ ತಿಳಿದಿರಬೇಕು. ತನ್ನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ.
ಚುನಾವಣಾ ಕಾರ್ಯದ ತಂಡಗಳ ಮಧ್ಯ ಪರಸ್ಪರ ಸಮನ್ವಯ, ಸಂವಹನ ಇರಬೇಕು. ಚುನಾವಣಾ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಮಾಡಬೇಕು. ಕಣ್‍ತಪ್ಪಿನಿಂದಲೂ ಸಹ ಯಾವುದೇ ಚುನಾವಣಾ ಕರ್ತವ್ಯ ಲೋಕವಾಗಬಾರದು. ಜಿಲ್ಲಾ ಚುನಾವಣಾ ಆಯೋಗಕ್ಕೆ ಸಾರ್ವಜನಿಕರು, ರಾಜಕೀಯ ಪಕ್ಷಗಳು ಮಾಧ್ಯಮಗಳು ಮತ್ತು ಇತರ ಮೂಲಗಳಿಂದಲೂ ಚುನಾವಣಾ ಕರ್ತವ್ಯ ಬಗ್ಗೆ ಮಾಹಿತಿ ಬರುತ್ತವೆ ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಚುನಾವಣಾ ಸಹಾಯವಾಣಿ, ಕಂಟ್ರೋಲ್ ರೂಂ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಯಾವುದೇ ಚುನಾವಣಾ ಸಿಬ್ಬಂದಿ ಪೂರ್ವಾನುಮತಿ ಪಡೆಯದೇ ರಜೆ ಹೋಗುವುದಾಗಲಿ ಅಥವಾ ಗೈರು ಹಾಜರಾಗುವುದಾಗಲಿ ಮಾಡುವಂತಿಲ್ಲ, ಇದನ್ನು ಆಯಾ ನೋಡಲ್ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.
ಕರ್ತವ್ಯದಲ್ಲಿ ಉದಾಸೀನತೆ ತೋರುವ, ನಿಯಮ ಮೀರುವ ಸಿಬ್ಬಂದಿ, ಅಧಿಕಾರಿಗಳಿಗೆ ಆಯಾ ನೊಡಲ್ ಅಧಿಕಾರಿಗಳು, ನೋಟಿಸ್ ನೀಡಿ, ಅವರ ಮೇಲೆ ಕ್ರಮ ಕೈಗೊಳ್ಳಲು ಮತ್ತು ವರದಿಯೊಂದಿಗೆ ಶಿಸ್ತುಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ಅವಕಾಶವಿದೆ.
ಅಧಿಕಾರಿಗಳಿಗೆ ನಿಯಮಾನುಸಾರ ಮತ್ತು ಅಧಿಕಾರಯುತವಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ದಂಡಾಧಿಕಾರಿ ಅಧಿಕಾರ ಕೊಟ್ಟರೂ, ಅವರು ಸರಿಯಾಗಿ ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಈ ಬಾರಿಯ ಚುನಾವಣೆಗೆ 3.5 ಲಕ್ಷ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಹಲವಾರು ಸಿಬ್ಬಂದಿಗಳು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವ ಹೊಂದಿದ್ದಾರೆ.
ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. 2019ರಲ್ಲಿ ಲೋಕಸಭೆ ಚುನಾವಣೆಯನ್ನು ದೇಶದಲ್ಲಿ 7 ಹಂತದಲ್ಲಿ ನಡೆಸಲಾಗಿತ್ತು. ಈ ಬಾರಿ ಎಷ್ಟು ಹಂತದಲ್ಲಿ ಚುನಾವಣೆ ನಡೆಯಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications