ಮಂಡ್ಯ ಲೋಕಸಭೆ ಕ್ಷೇತ್ರ; ದೇವೇಗೌಡರ ಮಹತ್ವದ ಸಭೆ!
ಬೆಂಗಳೂರು, ಫೆಬ್ರವರಿ 13: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಳಿಕ ಮಂಡ್ಯ ಸೀಟು ಯಾರಿಗೆ? ಎಂಬುದು ಎಲ್ಲರ ಪ್ರಶ್ನೆ. ಈಗ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಮಹತ್ವದ ಸಭೆಯೊಂದನ್ನು ನಡೆಸಿದ್ದು, ಮಂಡ್ಯದ ವಿಚಾರದಲ್ಲಿ ಜೆಡಿಎಸ್ ನಿಲುವೇನು? ಎಂಬುದು ಕುತೂಹಲ ಹುಟ್ಟು ಹಾಕಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ತಯಾರಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಮ್ಮ ನಿವಾಸದಲ್ಲಿ ಮಂಗಳವಾರ ಮಹತ್ವದ ಸಭೆಯನ್ನು ನಡೆಸಿದರು.

ಈ ಸಭೆಯಲ್ಲಿ ಮಂಡ್ಯದ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿತವಾಗಿರುವ ನಿಖಿಲ್ ಕುಮಾರಸ್ವಾಮಿ ಸಹ ಪಾಲ್ಗೊಂಡಿದ್ದರು. ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ದೇವೇಗೌಡರು ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಈ ಸಭೆಯಲ್ಲಿ ಮಾಜಿ ಸಚಿವ ಮತ್ತು ಜೆ.ಡಿ.ಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ, ಮಾಜಿ ಸಚಿವರಾದ ಸಿ. ಎಸ್. ಪುಟ್ಟರಾಜು, ಡಿ. ಸಿ. ತಮ್ಮಣ್ಣ ಪಾಲ್ಗೊಂಡಿದ್ದರು.
ಅಲ್ಲದೇ ಶಾಸಕ ಎಚ್. ಟಿ. ಮಂಜುನಾಥ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ. ಕೆ. ಅನ್ನದಾನಿ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಟಿ. ಶ್ರೀಕಂಠೇಗೌಡ, ಮಂಡ್ಯದ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಸಹ ಭಾಗಿಯಾಗಿದ್ದರು.
ಯಾವುದೇ ಸುಳಿವು ಕೊಟ್ಟಿಲ್ಲ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಳಿಕ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮೈಸೂರು ಕ್ಲಸ್ಟರ್ ವಿಭಾಗದ ಪ್ರಮುಖರ ಸಭೆ ನಡೆಯಿತು.
ಈ ಸಭೆಯಲ್ಲಿಯೂ ಮಂಡ್ಯ ಸೀಟಿನ ಕುರಿತು ಚರ್ಚೆಗಳು ನಡೆದವು. ಮಂಡ್ಯದ 14 ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಸಭೆಯಲ್ಲಿಯೂ ಮಂಡ್ಯ ಸೀಟು ಯಾರಿಗೆ? ಎಂಬ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.
ಹಾಲಿ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಮೈತ್ರಿಯ ವೇಳೆ ಮಂಡ್ಯ ಮತ್ತು ಹಾಸನ ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎಂಬ ಸುದ್ದಿಗಳಿವೆ. ಆದ್ದರಿಂದ ಬಿಜೆಪಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿದೆಯೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿಲ್ಲ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಿತ್ತು. ಬಿಜೆಪಿ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಬೆಂಬಲಿಸಿತು. ಸುಮಲತಾ ಗೆದ್ದರು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಸಹ ನಿಖಿಲ್ ಸೋಲು ಕಂಡಿದ್ದರು.
ಸಂಸದೆ ಸುಮಲತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಬಿ. ಎಲ್. ಸಂತೋಷ್ ಮುಂತಾದ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಕಡೆ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಚನ್ನಪಟ್ಟಣದ ಹಾಲಿ ಶಾಸಕ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಯೇ ಅಭ್ಯರ್ಥಿಯಾಗಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ಆದರೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.
ಕಳೆದ ಬಾರಿ ಮಂಡ್ಯದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಬಹುದು ಎಂಬ ಸುದ್ದಿ ಇದೆ. ಅವರು ಮಾಧ್ಯಮಗಳ ಮೂಲಕವೇ ನಾನು ಮಂಡ್ಯ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಸೀಟಿನ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಎಚ್. ಡಿ. ದೇವೇಗೌಡರು ಜಿಲ್ಲೆಯ ಜೆಡಿಎಸ್ ಶಾಸಕರ ಜೊತೆ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ದೇವೇಗೌಡರ ತಂತ್ರ ಏನಿರಬಹುದು ಎಂಬುದು ಇನ್ನೂ ನಿಗೂಢವಾಗಿದೆ.












Click it and Unblock the Notifications