Lok Sabha Election 2024: ಬಿಜೆಪಿ- ಜೆಡಿಎಸ್‌ ಮೈತ್ರಿಯಿಂದ ಸುಮಲತಾ ಅಂಬರೀಶ್‌ಗೆ ಲಾಭನಾ.. ನಷ್ಟನಾ?

ಮಂಡ್ಯ, ನವೆಂಬರ್‌ 10: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಎಲ್ಲರ ಚಿತ್ತ ಮಂಡ್ಯದತ್ತ ನೆಟ್ಟಿದ್ದು, ರಾಜಕೀಯವಾಗಿ ಜೆಡಿಎಸ್‌ಅನ್ನು ಎದುರಿಸುತ್ತಾ ಬರುತ್ತಿರುವ ಸಂಸದೆ ಸುಮಲತಾ ಅಂಬರೀಶ್ ನಡೆ ಏನಿರಬಹುದು? ಎಂಬ ಕುತೂಹಲ ಎಲ್ಲರನ್ನು ಕಾಡಲಾರಂಭಿಸಿದೆ.

ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಪಡೆದು ಸದ್ಯ ಬಿಜೆಪಿ ಬೆಂಬಲಿತ ಸಂಸದೆಯಾಗಿ ಗುರುತಿಸಿಕೊಂಡಿರುವ ಸುಮಲತಾ ಅಂಬರೀಶ್ ಅವರು ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಡಿ ಕಣಕ್ಕಿಳಿಯುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೀಗ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗುತ್ತಿರುವುದರಿಂದ ಮಂಡ್ಯದ ರಾಜಕೀಯದಲ್ಲಿ ಏನಾಗಬಹುದು ಎಂಬುದು ಕುತೂಹಲ ಎಲ್ಲರ ತಲೆಯಲ್ಲಿ ಗಿರಕಿಹೊಡೆಯುತ್ತಿದೆ.

lok-sabha-election-2024

ಕಳೆದ ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಸುಮಲತಾ ಅಂಬರೀಶ್ ಕಣಕ್ಕಿಳಿದ ಮೇಲೆ ಆಗಿದ್ದೇ ಬೇರೆ..

ಮನೆ ಮಗಳಾಗಿ ಕಂಡಿದ್ದ ಮಂಡ್ಯ ಜನ

ಅವತ್ತು ಸುಮಲತಾ ಅಂಬರೀಶ್ ಅವರ ಮೇಲೆ ಮಂಡ್ಯ ಜನರಲ್ಲಿ ಅನುಕಂಪವಿತ್ತು. ಹೀಗಾಗಿ ಮತದಾರರು ರಾಜಕೀಯವನ್ನು ಬದಿಗೊತ್ತಿ ಮತ ಚಲಾಯಿಸಿದರು. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಪಕ್ಷ ಬೇಧ ಮರೆತು ಸುಮಲತಾ ಅವರ ಪರವಾಗಿ ನಿಂತಿದ್ದರು. ಸಿನಿಮಾ ತಾರೆಯರು ಪ್ರಚಾರ ಮಾಡಿದ್ದರು. ಅವತ್ತು ಯಾರಿಗೂ ಸುಮಲತಾ ಅಂಬರೀಶ್ ಅವರು ಒಬ್ಬ ರಾಜಕಾರಣಿಯಾಗಿ ಕಾಣಲಿಲ್ಲ ಅಂಬರೀಶ್ ಅವರ ಪತ್ನಿಯಾಗಿ ಕ್ಷೇತ್ರದ ಸೊಸೆಯಾಗಿ, ಮನೆ ಮಗಳಾಗಿ ಕಂಡು ಬಂದಿದ್ದರು.

ಚುನಾವಣೆ ಕಳೆದು ಐದು ವರ್ಷವಾಗುತ್ತಿದೆ. ಇವತ್ತು ಸಂಸದೆಯಾಗಿ ಸುಮಲತಾ ಅವರು ರಾಜಕೀಯದ ಒಳ, ಹೊರಗನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರಾಜಕೀಯ ಪಟ್ಟನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಜೊತೆಗೆ ಎದುರಾಳಿಗಳಿಗೆ ಕಾಲಕಾಲಕ್ಕೆ ಹೇಗೆ ಉತ್ತರಿಸಬೇಕೆಂಬುದನ್ನು ಕರಗತ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅವರೊಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರಿಗೆ ಯಾವಾಗ ಹೇಗೆ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತಿದೆ.

lok-sabha-election-2024

ಬಿಜೆಪಿಯತ್ತ ಒಲವು ತೋರಿದ್ದೇಕೆ?

ಇದೆಲ್ಲದರ ನಡುವೆ ಮಂಡ್ಯ ಕ್ಷೇತ್ರದ ಜನರು ಕೂಡ ಸುಮಲತಾ ಅವರನ್ನು ಒಬ್ಬ ರಾಜಕಾರಣಿಯನ್ನಾಗಿ ನೋಡಲು ಆರಂಭಿಸಿದ್ದಾರೆ. 2019ರ ಅನುಕಂಪ 2024ರ ಚುನಾವಣೆಯಲ್ಲಿ ಮುಂದುವರೆಯುವುದು ಕಷ್ಟಸಾಧ್ಯ. ರಾಷ್ಟ್ರೀಯ ಪಕ್ಷವೊಂದರ ಬೆಂಬಲವಿಲ್ಲದಿದ್ದರೆ ಮುಂದಿನ ಚುನಾವಣೆಯನ್ನು ಎದುರಿಸುವುದು ಸುಲಭದ ಮಾತಲ್ಲ. ಹೀಗಾಗಿಯೇ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಮಂಡ್ಯವನ್ನು ಜೆಡಿಎಸ್ ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಆದರೀಗ ಆ ಭದ್ರಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡಿದೆ. ಹಾಗೆಂದು ಮತದಾರರು ಜೆಡಿಎಸ್ ನಿಂದ ವಿಮುಖವಾಗಿಲ್ಲ. ಆದರೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಗೆಲುವು ಪಡೆಯುವುದು ಸುಲಭವೇನಲ್ಲ. ಅದಕ್ಕಿಂತ ಹೆಚ್ಚಾಗಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಬಲ ಅಭ್ಯರ್ಥಿಯ ಅಗತ್ಯತೆಯಿದೆ. ಹೀಗಾಗಿ ಈ ಬಾರಿ ಜೆಡಿಎಸ್ ಮುಖಂಡರು ಮಂಡ್ಯದಲ್ಲಿ ಕಣಕ್ಕಿಳಿಯುವತ್ತ ಹೆಚ್ಚಿನ ಆಸಕ್ತಿ ತೋರಲಾರರು ಎಂದೇ ಹೇಳಲಾಗುತ್ತಿದೆ.

ರಾಜಕೀಯದಲ್ಲಿ ಶತ್ರುಗಳು ಮಿತ್ರರಾಗುತ್ತಾರೆ

ಒಂದು ವೇಳೆ ದಳಪತಿಗಳು ಇಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಹೋದರೆ, ಸುಮಲತಾ ಅಂಬರೀಶ್ ಅವರು ಯಾವುದೇ ಅಡೆತಡೆಯಿಲ್ಲದೆ ಕಣಕ್ಕಿಳಿಯಲಿದ್ದಾರೆ. ಇನ್ನು ರಾಜಕೀಯದಲ್ಲಿ ಯಾರೂ ಶತ್ರುವಲ್ಲ, ಮಿತ್ರರೂ ಅಲ್ಲ ಎಂಬ ಮಾತು ತಲತಲಾಂತರದಿಂದ ನಡೆದು ಬಂದಿದೆ. ಮತ್ತು ಶತ್ರುಗಳೇ ಮಿತ್ರರಾದ ನಿದರ್ಶನಗಳು ಬೇಕಾದಷ್ಟಿವೆ. ಹೀಗಿರುವಾಗ ಚುನಾವಣೆ ಹೊಸ್ತಿಲಲ್ಲಿ ಎಲ್ಲರೂ ಒಂದಾಗಿ ಮುನ್ನಡೆದರೂ ಅಚ್ಚರಿ ಪಡಬೇಕಾಗಿಲ್ಲ.

lok-sabha-election-2024

ಸುಮಲತಾ ಅಂಬರೀಶ್ ಅವರು ಮಂಡ್ಯ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಈ ಹಿಂದೆ ಹರಿದಾಡಿದ್ದವು. ಅದಕ್ಕೆ ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇಷ್ಟಕ್ಕೂ ಅವರು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೊಂದರೆಯನ್ನು ತೆಗೆದುಕೊಳ್ಳಲಾರರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ..

ಅವತ್ತಿನ ಬೆಂಬಲ, ಸಹಕಾರ ಮತ್ತೆ ಸಿಗಲಾರದು!

ಇಷ್ಟಕ್ಕೂ ಮಂಡ್ಯದಲ್ಲಿ ಈ ಬಾರಿ ಗೆಲುವು ಅಷ್ಟೊಂದು ಸುಲಭವಾಗಿಲ್ಲ ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಕಳೆದ ಬಾರಿ ಅನುಕಂಪದ ಅಲೆ, ಕುಟುಂಬ ರಾಜಕಾರಣದ ಆಕ್ರೋಶ, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಹಕಾರವಿತ್ತು. ಹೀಗಾಗಿ ಇಡೀ ಸರ್ಕಾರವೇ ಅವರ ವಿರುದ್ಧ ಕ್ಷೇತ್ರಕ್ಕೆ ಬಂದು ಆರೋಪ, ನಿಂದನೆ, ಹಣ, ಹೆಂಡ ಹಂಚಿದರೂ ಮತದರಾರರು ಅವರ ಕೈಬಿಡಲಿಲ್ಲ. ಇನ್ನೊಂದೆಡೆ ಬಿಜೆಪಿ, ರೈತಸಂಘ ಬಹಿರಂಗವಾಗಿ ಬೆಂಬಲ ನೀಡಿತ್ತು.

ಇದರ ಜತೆಗೆ ನಾಯಕ ನಟರಾದ ದರ್ಶನ್, ಯಶ್, ಹಿರಿಯನಟರಾದ ದೊಡ್ಡಣ್ಣ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹೀಗೆ ಹಲವರು ಕೈಜೋಡಿಸಿದ್ದರು. ಆದರೆ ಮುಂದೆ 2024ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿದರೆ ಹಿಂದೆ ಆದ ಯಾವ ಬೆಳವಣಿಗೆಗಳು ಆಗಲಾರವು. ಜತೆಗೆ 2019ರಲ್ಲಿ ದೊರೆತ ಬೆಂಬಲವೂ ಸಿಗಲಾರದು. ಈಗಾಗಲೇ ಅವರ ಬೆಂಬಲಿಗರ ಪೈಕಿ ಹೆಚ್ಚಿನವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ದಳಪತಿಗಳು ಮೌನವಾಗಿರುವುದೇಕೆ..?

ಮಂಡ್ಯದಲ್ಲಿ ಬಿಜೆಪಿ ಕೂಡ ಮೊದಲಿಗೆ ಹೋಲಿಸಿದರೆ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಜನಕ್ಕೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವುದು ಗೊತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಮೈತ್ರಿಯಾದರೆ ಅದರಿಂದ ಸುಮಲತಾ ಅವರಿಗೆ ಲಾಭವಾಗುವುದಂತು ಖಚಿತ. ವಿಧಾನಸಭಾ ಚುನಾವಣೆಯ ನಂತರ ಸುಮಲತಾ ಅಂಬರೀಶ್ ಮತ್ತು ದಳಪತಿಗಳ ನಡುವೆ ಯಾವುದೇ ಆರೋಪ ಪ್ರತ್ಯಾರೋಪಗಳು ನಡೆದಿಲ್ಲ.

ಈಗಾಗಲೇ ಮಂಡ್ಯದಲ್ಲಿ ಭದ್ರವಾಗಿ ನೆಲೆಯೂರಿರುವ ಸುಮಲತಾ ಅವರು ಇಲ್ಲಿನ ಮತದಾರರ ನಾಡಿಮಿಡಿತ ಅರಿತಿದ್ದಾರೆ.

ಈಗಿರುವ ಪರಿಸ್ಥಿತಿಯಲ್ಲಿ ದಳಪತಿಗಳು ಕೂಡ ಹಠಕ್ಕೆ ಬಿದ್ದು ಕ್ಷೇತ್ರವನ್ನು ಕಸಿದುಕೊಳ್ಳುವ ಕೆಲಸಕ್ಕೆ ಕೈಹಾಕಲಾರರು. ಇನ್ನು ಬಿಜೆಪಿ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಜೆಡಿಎಸ್ ಮೈತ್ರಿ ಬಳಿಕ ಸುಮಲತಾ ಅವರ ವಿಚಾರದಲ್ಲಿ ರಾಜಕೀಯ ಮಾಡಿದರೆ ಅದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಹೀಗಾಗಿಯೇ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಮಂಡ್ಯ ಕ್ಷೇತ್ರದ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಹೀಗಾಗಿ ಸುಮಲತಾ ಅವರು ನೆಮ್ಮದಿಯಾಗಿದ್ದಾರೆ.. ಮುಂದೇನು? ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+