ಲೋಕಸಭೆ ಚುನಾವಣೆ: ಅಂತರರಾಜ್ಯ ಡಿಸಿ, ಎಸ್ಪಿಗಳ ಜೊತೆ ಸಭೆ
ಬೆಂಗಳೂರು, ಮಾರ್ಚ್ 07: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅಂತರರಾಜ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ, ಚೆಕ್‌ಪೋಸ್ಟ್ ಸ್ಥಾಪನೆ ಕುರಿತು ಚರ್ಚೆ ನಡೆಸಲಾಗಿದೆ.
ಲೋಕಸಭಾ ಚುನಾವಣೆಗೆ ಮಾರ್ಚ್ 15ರೊಳಗೆ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಅಂತರರಾಜ್ಯ ಗಡಿಭಾಗದ ಹಳ್ಳಿಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗುತ್ತದೆ.

ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಹಕರಿಸುವಂತೆ ಬಳ್ಳಾರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಂತರರಾಜ್ಯ ಅಧಿಕಾರಿಗಳ ಸಭೆಯಲ್ಲಿ ಮನವಿ ಮಾಡಿದರು.
ಯಾವ-ಯಾವ ಜಿಲ್ಲೆಗಳು; ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳು, ಎಸ್ಪಿ ಪಾಲ್ಗೊಂಡಿದ್ದರು.
ಬಳ್ಳಾರಿ ಜಿಲ್ಲೆಯ 72 ಹಳ್ಳಿಗಳು ಆಂಧ್ರಪ್ರದೇಶದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಿಗೆ ಗಡಿಭಾಗವನ್ನು ಹಂಚಿಕೊಂಡಿದ್ದು, ಹಳ್ಳಿಗಳ ರಸ್ತೆ ಮೂಲಕ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆಗಳ ಹಿನ್ನಲೆಯಲ್ಲಿ ಸಕಾಲಕ್ಕೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಗಡಿಭಾಗದಲ್ಲಿ 23 ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ದಾಖಲೆಗಳಿಲ್ಲದೇ ಹಣ ಸಾಗಾಣೆ, ಮದ್ಯ, ಉಡುಗೊರೆ ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾಗಾಣೆ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸರ್ವೇಲೆನ್ಸ್ ತಂಡಗಳನ್ನು ರಚಿಸಲಾಗುತ್ತಿದ್ದು, ಸಕಾಲಕ್ಕೆ ಮಾಹಿತಿ ನೀಡಿದರೆ ತಡೆಯಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.
ಅಂತರರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಗಡಿಭಾಗದ ಪೊಲೀಸ್ ಠಾಣೆಗಳ ಎಲ್ಲಾ ಹಂತದ ಅಧಿಕಾರಿಗಳು ವ್ಯಾಟ್ಸಪ್ ಗ್ರೂಪ್ ರಚಿಸಿಕೊಂಡು ನಿತ್ಯವೂ ಬೆಳವಣಿಗೆಗಳ ಮಾಹಿತಿ ನೀಡಬೇಕು. ಅಕ್ರಮವಾದ ಮತ್ತು ಅನುಮಾನಸ್ಪದ ಚಟುವಟಿಕೆ ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಬೇಕು ಎಂದು ಸೂಚನೆ ನೀಡಲಾಯಿತು.
ಚುನಾವಣೆಯನ್ನು ಶಾಂತಿ ಸುವ್ಯವಸ್ಥೆಯಿಂದ ನಡೆಸಲು ಗಡಿಭಾಗದ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಹಕಾರ ಅವಶ್ಯಕತೆಯಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ರಮ ಹಣ, ಮದ್ಯ, ಬೆಲೆಬಾಳುವ ವಸ್ತುಗಳ ಸಾಗಾಣೆಯ ಮಾಹಿತಿಯನ್ನು ಸಂಗ್ರಹ ಮಾಡಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, "ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಮತ್ತು ಇತರೆ ಜಿಲ್ಲೆಯಲ್ಲಿರುವಂತಹ ಎನ್.ಬಿ.ಡಬ್ಲ್ಯೂ ವ್ಯಕ್ತಿಗಳು, ರೌಡಿಶೀಟರ್‌ಗಳು, ಸಂಶಯುತ ಗಲಭೆ ಮಾಡುವಂತಹ ವ್ಯಕ್ತಿಗಳು ಮತ್ತು ಗಡಿ ಭಾಗದ ಗ್ರಾಮಗಳಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಗಡಿ ತಪಾಸಣೆ ಚೆಕ್‍ಪೋಸ್ಟ್‌ಗಳನ್ನು ನಿರ್ವಹಿಸುವ ಬಗ್ಗೆ ಪರಸ್ಪರ ಸಹಕಾರ ಮತ್ತು ಮಾಹಿತಿಗಳ ವಿನಿಮಯ ಮಾಡಿಕೊಳ್ಳಬೇಕು" ಎಂದು ಕೋರಿದರು.
ಚುನಾವಣಾ ನೀತಿ ಸಂಹಿತೆ ಸೂಚನೆ: ಚುನಾವಣಾ ವೇಳಾಪಟ್ಟಿ ಘೋಷಣೆಯ ಹಿನ್ನಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಛೇರಿ ಕರ್ನಾಟಕ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾದರಿ ಚುನಾವಣಾ ನೀತಿ ಸಂಹಿತೆ ಬಗ್ಗೆ ಸೂಚನೆಗಳನ್ನು ನೀಡಿದೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಘೋಷಣೆಯಾದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುವುದರಿಂದ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಇರುವಂತಹ ಅನಧಿಕೃತ Wall writings, posters, banners ಇತ್ಯಾದಿಗಳನ್ನು ಕ್ರಮವಾಗಿ ಚುನಾವಣೆ ಘೋಷಣೆಯಾದ 24 ಗಂಟೆಗಳು, 48 ಗಂಟೆಗಳು ಮತ್ತು 72 ಗಂಟೆಗಳೊಳಗಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ತೆರವುಗೊಳಿಸಬೇಕಾಗಿರುತ್ತದೆ ಎಂದು ಹೇಳಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ತಯಾರಿಸಲು ತಮ್ಮ ಹಂತದಲ್ಲಿ ತಂಡಗಳನ್ನು ಮುಂಗಡವಾಗಿ ರಚಿಸಿಕೊಂಡು, ಚುನಾವಣೆ ಘೋಷಣೆಯಾದ ತಕ್ಷಣ ಮಾಹಿತಿಯನ್ನು ಸಲ್ಲಿಸುವಂತೆ ಹಾಗೂ ಅದರ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.












Click it and Unblock the Notifications