ಕಾಂಗ್ರೆಸ್ ಸರ್ಕಾರದ ವಿರುದ್ಧ ಡಾ. ಕೆ. ಸುಧಾಕರ್ ತೀವ್ರ ವಾಗ್ದಾಳಿ!
ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಭರ್ಜರಿಯಾಗಿ ಪ್ರಚಾರ ಮುಂದುವರಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಕೂಡ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿ ಮೋದಿ ಅವರ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾ ಮತ ಯಾಚನೆ ಮಾಡುತ್ತಿದ್ದಾರೆ. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ, ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು.
ಈ ಲೋಕಸಭಾ ಚುನಾವಣೆಯಲ್ಲಿ ಜನರ ಒಂದೊಂದು ಮತ ದೇಶವನ್ನ ರಕ್ಷಿಸುತ್ತೆ. ದೇಶವನ್ನ ಆಳುವವರು ಸಮರ್ಥರಾಗಿ ಇರಬೇಕು. ಇಲ್ಲವಾದ್ರೆ ಕರ್ನಾಟಕದಲ್ಲಿ ಆಳಲು ಬಂದವರು ಹಾಳು ಮಾಡಿದಂತೆಯೇ ಆಗುತ್ತದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಪ್ರತಿಪಾದಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಳೇಹಳ್ಳಿ, ಶ್ಯಾಂಪುರ, ಗೌಡಗೆರೆ, ಪುರ, ಜರಬಂಡಹಳ್ಳಿ, ಮಿಣಕನಗುರ್ಕಿ, ಮಂಚೇನ ಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

'ಎನ್‌ಡಿಎ ಒಕ್ಕೂಟಕ್ಕೆ 400 ಸ್ಥಾನ'
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ 400 ಮೀರಿ ಸ್ಥಾನಗಳು ಲಭ್ಯವಾಗಲಿದೆ. ಪ್ರಧಾನಿ ಮೋದಿ ಅವರಿಗೆ ಜೈಕಾರ ಹಾಕುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ ಫಲಿತಾಂಶ ಬರುವ ದಿನ ಭಾರತೀಯರು ಕಾಂಗ್ರೆಸ್‌ಗೆ ಕಪಾಳ ಮೋಕ್ಷ ಮಾಡಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಮಾಗಮಕ್ಕೆ ಜನ ಮತ ನೀಡಲಿದ್ದಾರೆ ಎಂದು ಡಾ. ಕೆ. ಸುಧಾಕರ್ ಪ್ರತಿಪಾದಿಸಿದರು.
ಹಣ ಖಾಲಿ ಮಾಡಿದ ಕಾಂಗ್ರೆಸ್!
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡದೆ ಹಣ ಖಾಲಿ ಮಾಡಿಕೊಂಡಿದೆ. ಆ ನಂತರ ಕೇಂದ್ರ ಸರ್ಕಾರದ ಮುಂದೆ ಭಿಕ್ಷಾ ಪಾತ್ರೆ ಹಿಡಿದುಕೊಂಡು ನಿಂತಿದೆ. ಇವರು ಬಂದಾಗೆಲ್ಲ ಬರಗಾಲ ಬರುತ್ತೆ. ಯಡಿಯೂರಪ್ಪ ಅವರು & ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಧಿಕ ಮಳೆ ಆಗಿತ್ತು. ಅದಕ್ಕೆ ಕೂಡ ದುಪ್ಪಟ್ಟು ಪ್ರಮಾಣದಲ್ಲಿ ಒಂದೇ ತಿಂಗಳಲ್ಲಿ ಪರಿಹಾರ ನೀಡಲಾಗಿತ್ತು. ಈಗ ಒಂದು ರೂಪಾಯಿ ಬರ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನನ್ನ ವಿರುದ್ಧ ಕಾಂಗ್ರೆಸ್‌ನಿಂದ ಶ್ರೀಮಂತರನ್ನ ನಿಲ್ಲಿಸಲಾಗಿದೆ. ಆದರೆ ಹಣ ಬಲಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಕೆಲಸ ಮತ್ತು ಪ್ರಧಾನಿ ಮೋದಿಯವರ ಕೆಲಸಗಳು ಇಲ್ಲಿ ಜನರಿಗೆ ಮುಖ್ಯವಾಗುತ್ತದೆ. ಕಾಂಗ್ರೆಸ್ ಏನೂ ಕೆಲಸ ಮಾಡದೆ, ಹೇಳಿಕೊಳ್ಳಲು ಏನೂ ಸರಕಿಲ್ಲದೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಆದರೆ ನಾವು ರಾಷ್ಟ್ರ ಕಟ್ಟುವ ವಿಷಯಗಳ ಬಗ್ಗೆ ಮಾತಾಡುತ್ತಿದ್ದೇವೆ ಎಂದು ಈ ವೇಳೆ ಡಾ. ಸುಧಾಕರ್ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಕುಡಿಯುವ ನೀರಿಗೆ 40 ಕೋಟಿ ರೂ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ 40 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ದಂಡಿಗಾನಹಳ್ಳಿಗೆ ನೀರು ನೀಡಲು ಕ್ರಮ ವಹಿಸಲಾಗಿದೆ. ಬಡವರಿಗೆ 98 ಎಕರೆ ಕಂದಾಯ ಜಮೀನು ಮೀಸಲಿಟ್ಟು 1,627 ಹಕ್ಕುಪತ್ರ ಹಾಗೂ ನಿವೇಶನ ಹಂಚಲಾಗಿದೆ. ಒಟ್ಟು 2,687 ನಿವೇಶನ ರಚಿಸಲಾಗಿದೆ. ಇನ್ನೂ 1,080 ನಿವೇಶನ ನೀಡಲು ಅವಕಾಶವಿದ್ದು, ಅದನ್ನು ಕೂಡ ಮುಂದೆ ಮಾಡಲಿದ್ದೇನೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಹಾಗೇ ತಾವು ಸಂಸದರಾಗಿ ಆಯ್ಕೆಯಾದ ಬಳಿಕ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ತಂದು, ಮಂಚೇನಹಳ್ಳಿ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುತ್ತೇನೆ. ಈಗಾಗಲೇ 1,200 ಎಕರೆ ಜಮೀನನ್ನು ಕೈಗಾರಿಕೆಗೆ ಗುರುತಿಸಲಾಗಿದೆ ಎಂದು ಇದೇ ವೇಳೆ ಡಾ. ಕೆ. ಸುಧಾಕರ್ ಅವರು ಭರವಸೆ ನೀಡಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.












Click it and Unblock the Notifications