ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ರಾಹುಲ್ ಗಾಂಧಿ : ಶುಕ್ರವಾರ ಏನೇನಾಯ್ತು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಎರಡು ದಿನಗಳ ಭೇಟಿಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಅವರು ರಾಜ್ಯಕ್ಕೆ ಆಗಮಿಸಿದ್ದು, ಎರಡು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮಂಡ್ಯ, ಬೆಂಗಳೂರು, ಹಾವೇರಿಗೆ ಭೇಟಿ ನೀಡಲಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ, ರೈತರೊಂದಿಗೆ ಸಂವಾದ, ಸಚಿವರೊಂದಿಗೆ ಸಭೆ, ಪಾದಯಾತ್ರೆ, ಕೆಪಿಸಿಸಿ ಪದಾಧಿಕಾರಿಗಳೊಂದಿಗೆ ಸಭೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗಿ ಸೇರಿದಂತೆ ಎರಡು ದಿನ ಹಲಾವಾರು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. [ರಾಹುಲ್ 2 ದಿನದ ಕಾರ್ಯಕ್ರಮಗಳು]

rahul gandhi

ಶುಕ್ರವಾರ ಬೆಳಗ್ಗೆ 9.40ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ತೆರಳಿದರು. ಅಲ್ಲಿಂದ ವಾಪಸ್ ಬಂದ ನಂತರ ಮಧ್ಯಾಹ್ನ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರಾತ್ರಿ ಬೆಂಗಳೂರಿನಲ್ಲಿಯೇ ಅವರು ವಾಸ್ತವ್ಯ ಹೂಡಲಿದ್ದಾರೆ. ರಾಹುಲ್ ಶುಕ್ರವಾರದ ಭೇಟಿಯ ಕ್ಷಣ-ಕ್ಷಣದ ಮಾಹಿತಿಗಳು ಇಲ್ಲಿವೆ.....[ರಾಹುಲ್ ಗಾಂಧಿ ಸಮಾವೇಶಕ್ಕಾಗಿ ಬೆಳೆದ ಬೆಳೆ ಧ್ವಂಸ!]

ಸಮಯ 6 ಗಂಟೆ : 'ಪ್ರಧಾನಿ ಮೋದಿ ಸರ್ಕಾರಕ್ಕೆ ಉದ್ಯಮಿಗಳು ಬೇಕು, ಕಾಂಗ್ರೆಸ್ ಪಕ್ಷಕ್ಕೆ ಬಡವರು ರೈತರು ಬೇಕು' ಎಂದು ರಾಹುಲ್ ಹೇಳಿದರು. [ಮಂಡ್ಯದಲ್ಲಿ ರಾಹುಲ್ ಹೇಳಿದ್ದೇನು?]

ಸಮಯ 5.57 : 'ಮೋದಿಜಿ ಸರ್ಕಾರ ಕರ್ನಾಟಕದ ರೈತರನ್ನು ಭಾರತದ ರೈತರೆಂದು ಪರಿಗಣಿಸಿಲ್ಲ. ಬಿಹಾರಕ್ಕೆ ಪ್ಯಾಕೇಜ್ ಕೊಟ್ಟಿದ್ದಾರೆ. ಆದರೆ, ಕರ್ನಾಟಕದ ರೈತರ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. [ರಾಹುಲ್ ಗಾಂಧಿ 'ಗೋ ಬ್ಯಾಕ್' ಪ್ರತಿಭಟನೆಗೆ ರೈತರು ಸಜ್ಜು]

ಸಮಯ 5.54 : ಗ್ರಾಮ ಸ್ವರಾಜ್ ಸಮಾವೇಶ ಉದ್ದೇಶಿಸಿ ರಾಹುಲ್ ಭಾಷಣ. 'ಪಂಚಾಯತಿಗಳಿಗೆ ಸಿಗಬೇಕಾದ ಸಂಪೂರ್ಣವಾದ ಅಧಿಕಾರ ಇನ್ನೂ ಸಿಕ್ಕಿಲ್ಲ' ಎಂದು ರಾಹುಲ್

ಸಮಯ 5.52 : ಕನ್ನಡದಲ್ಲಿ ನಮಸ್ಕಾರ ಎಂದು ಮಾತು ಆರಂಭಿಸಿದ ರಾಹುಲ್ ಗಾಂಧಿ

ಸಮಯ 5.35 : ಬಿಜೆಪಿಯನ್ನು ಟೀಕಿಸುವ ಭರದಲ್ಲಿ 'ದೇಶದ ಪ್ರಧಾನಿ ವಾಜಪೇಯಿ' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂತರ 'ಪ್ರಧಾನಿ ನರೇಂದ್ರ ಮೋದಿ...ಮೋದಿ...ಮೋದಿ' ಎಂದು ಹೇಳಿ ತಪ್ಪನ್ನು ಸರಿಪಡಿಸಿಕೊಂಡ ಸಿದ್ದರಾಮಯ್ಯ.

ಸಮಯ 5.30 : 'ಬಿಜೆಪಿ ಅವರಿಗೆ ರೈತರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಯಾವ ಕೇಂದ್ರ ಸಚಿವರು ಭೇಟಿ ನೀಡಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮಯ 4.40 : ಎರಡೂವರೆ ಗಂಟೆ ತಡವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಹುಲ್ ಗಾಂಧಿ ಅವರ ಸಮಾವೇಶ ಉದ್ಘಾಟನೆಯಾಗಿದೆ. ತ್ರಿಪುರವಾಸಿನಿಯಲ್ಲಿ 'ಗ್ರಾಮ ಸ್ವರಾಜ್' ಸಮಾವೇಶವನ್ನು ರಾಹುಲ್ ಉದ್ಘಾಟಿಸಿದ್ದಾರೆ.

karnataka

ಸಮಯ 3.15 : ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, 'ಈ ವರ್ಷ ರಾಜ್ಯದಲ್ಲಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಮನೆಗೆ ಭೇಟಿ ನೀಡಿ ಸಮಸ್ಯೆ ಕೇಳಿದ್ದೇನೆ, ಅವರಿಗೆ ಸಾಂತ್ವನ ಹೇಳಿದ್ದೇನೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಯುಪಿಎ ಸರ್ಕಾರ ರೈತರಿಗೆ ಅಗತ್ಯ ನೆರವನ್ನು ನೀಡಿತ್ತು' ಎಂದು ಹೇಳಿದರು.

ಸಮಯ 2.30 : ವಿಸಿ ಫಾರ್ಮ್‌ನಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ, ಬೆಂಗಳೂರು ಅರಮನೆ ಮೈದಾನದಲ್ಲಿ ರಾಹುಲ್‌ಗಾಗಿ ಕಾದು ಕುಳಿತ ಕಾರ್ಯಕರ್ತರು.

ಸಮಯ 1.30 : ಪಾಂಡವಪುರದಲ್ಲಿ ಗುರುವಾರ ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಕೆಪಿಸಿಸಿ ವತಿಯಿಂದ 1 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ವಿತರಣೆ ಮಾಡಿದರು.

ಸಮಯ 12.30 : ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪಣಕನಹಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಮಯ 11.08 : ಹೆಲಿಪ್ಯಾಡ್‌ನಿಂದ ಪಾಂಡವಪುರ ತಾಲೂಕಿನ ಸಣಬಿನಕೊಪ್ಪಲು ಗ್ರಾಮಕ್ಕೆ ರಾಹುಲ್ ತೆರಳುತ್ತಿದ್ದಾರೆ. ಗುರುವಾರ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.

ಸಮಯ 11 ಗಂಟೆ : 'ರಾಹುಲ್ ಗಾಂಧಿ ಕರ್ನಾಟಕ ಭೇಟಿಯಿಂದಾಗಿ ಬಿಜೆಪಿಗೆ ಯಾವುದೇ ಭಯವಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ

ಸಮಯ 10.55 : ಮೈಸೂರು ಪೇಟ ತೊಡಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಚಿವರು ಮತ್ತು ಮಾಜಿ ಸಂಸದೆ ರಮ್ಯಾ

ಸಮಯ 10.47 : ರಾಹುಲ್ ಗಾಂಧಿ ಮಂಡ್ಯದ ವಿಸಿ ಫಾರ್ಮ್‌ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ

ಸಮಯ 10.22 : ರಾಹುಲ್ ಗಾಂಧಿ ಜೊತೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ ಅವರ ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದ್ದಾರೆ

ಸಮಯ 10.22 : ರಾಹುಲ್ ಗಾಂಧಿ ಅವರ ಮಂಡ್ಯ ಪ್ರವಾಸದಲ್ಲಿ ಬದಲಾವಣೆ ಮಾಡಲಾಗಿದೆ. ಪಾಂಡವಪುರದಲ್ಲಿ ಗುರುವಾರ ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಮನೆಗೂ ರಾಹುಲ್ ಭೇಟಿ ನೀಡಲಿದ್ದಾರೆ. ಹಿಂದೆ ಪಣಕನಹಳ್ಳಿ ಹಾಗೂ ಕೊತ್ತತ್ತಿ ಗ್ರಾಮಗಳಿಗೆ ಮಾತ್ರ ಭೇಟಿ ನೀಡುವ ಕಾರ್ಯಕ್ರಮವಿತ್ತು.

mandya

ಸಮಯ 10.15 : ರಾಹುಲ್ ಗಾಂಧಿ ಅವರ ವಿರುದ್ಧ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲೆಗೆ ಆಗಮಿಸುವ ರಾಹುಲ್ ಗಾಂಧಿ ಅವರು ರೈತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದೆ.

ಸಮಯ 9.50 : ರಾಹುಲ್ ಗಾಂಧಿ ಸ್ವಾಗತಿಸಿದ ಸಿದ್ದರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ

ಸಮಯ 9.40 : ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ

ಸಮಯ 9 ಗಂಟೆ : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂಂ.ಕೃಷ್ಣ

ಸಮಯ 8.30 : ಕರ್ನಾಟಕ ಸರ್ಕಾರದ ವರದಿಯಂತೆ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ 56 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮಯ 7.30 : ಬೆಳಗ್ಗೆ 9.45ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮನ. 10.30ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಜೊತೆ ಹೆಲಿಕಾಪ್ಟರ್‌ ನಲ್ಲಿ ಮಂಡ್ಯಕ್ಕೆ ಭೇಟಿ.

ಮಂಡ್ಯದ ವಿಸಿ ಫಾರ್ಮ್‌ನ ಡೀನ್‌ ಚೇಂಬರ್‌ನಲ್ಲಿ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ವಿವಿಧ ಇಲಾಖಾ ಸಚಿವರುಗಳೊಂದಿಗೆ ಸಭೆ. ಪಣಕನಹಳ್ಳಿ ಹಾಗೂ ಕೊತ್ತತ್ತಿ ಗ್ರಾಮಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಮನೆಗಳಿಗೆ ಭೇಟಿ.

ಮಧ್ಯಾಹ್ನ 12.30 ರಿಂದ 1 ಗಂಟೆಯ ತನಕ ರೈತರೊಂದಿಗೆ ವಿಸಿ ಫಾರ್ಮ್‌ನಲ್ಲಿ ಸಂವಾದ. 2.30ಕ್ಕೆ ಬೆಂಗಳೂರಿಗೆ ವಾಪಸ್‌. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿ. 3.30ಕ್ಕೆ ಅರಮನೆ ಮೈದಾನದಲ್ಲಿ ಕೆಪಿಸಿಸಿಯ ಪದಾಧಿಕಾರಿಗಳ ಜೊತೆ ಸಭೆ.

4.30ಕ್ಕೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ರಾಜ್ಯದಲ್ಲಿ ಸ್ಥಾಪಿತವಾಗಿರುವ ಹೊಸ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ. 5 ಗಂಟೆಗೆ ಕೆಪಿಸಿಸಿ ಎಸ್‌ಸಿ ಘಟಕದ ಪದಾಧಿಕಾರಿಗಳೊಂದಿಗೆ ಸಭೆ, ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ.

English summary
Rahul Gandhi in Karnataka : Congress vice president Rahul Gandhi in Karnataka for two days visit. Rahul will meet the family members of farmers who committed suicide recently. on Friday, October 9 he will tour in Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X