Channapatna By Election: ಚನ್ನಪಟ್ಟಣದಲ್ಲಿ 29 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ
ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎನ್‌ಡಿಎ ನಡುವೆ ನೇರ ಹಣಾಹಣಿ ಇದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಶತಪ್ರಯತ್ನ ಮಾಡುತ್ತಿದೆ. ಮತ್ತೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಮತದಾರರನ್ನು ಸೆಳೆಯಲು ಭಾರಿ ಕಸರತ್ತು ನಡೆಸಿವೆ. ಮೂರು ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಲಕ್ಷಾಂತರ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೊಂದರಲ್ಲೇ 29 ಕೋಟಿ ಮೌಲ್ಯದ ಸುಮಾರು ಮೂರು ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ್ ಸ್ಪರ್ಧಿಸಿದ್ದು ನೇರ ಹಣಾಹಣಿ ಏರ್ಪಟ್ಟಿದೆ.

ಚುನಾವಣಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 16 ರಿಂದ 11ರವರೆಗೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಹಾಗೂ ಇತರೆ ಅಧಿಕಾರಿಗಳು 33.33 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಶಿಗ್ಗಾಂವಿಯಲ್ಲಿ 300 ಲೀಟರ್, ಸಂಡೂರಿನಲ್ಲಿ 2926 ಲೀಟರ್, ಚನ್ನಪಟ್ಟಣದಲ್ಲಿ 29 ಕೋಟಿ ರೂಪಾಯಿ ಮೌಲ್ಯದ 2,95,395 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಲೆ ಶಿಗ್ಗಾಂವಿಯಲ್ಲಿ 8.2 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
45 ಅಭ್ಯರ್ಥಿಗಳು ಕಣದಲ್ಲಿ
ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣದಲ್ಲಿ ಒಟ್ಟು 45 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಮೂರು ಕ್ಷೇತ್ರಗಳಲ್ಲಿ 770 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಏಳು ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.
ಕಾಂಗ್ರೆಸ್‌ನ ಇ. ತುಕಾರಾಂ, ಬಿಜೆಪಿಯ ಬಸವರಾಜ ಬೊಮ್ಮಾಯಿ ಮತ್ತು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಈ ಮೂರು ಕ್ಷೇತ್ರಗಳಲ್ಲಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪಚುನಾವಣೆ ನಡೆಯುತ್ತಿದೆ.












Click it and Unblock the Notifications