ಹಸಿರು ವಲಯದಲ್ಲಿ ಮದ್ಯ ಮಾರಾಟ? ನಾಳೆ ಸಂಪುಟ ಸಭೆಯಲ್ಲಿ ತೀರ್ಮಾನ!
ಬೆಂಗಳೂರು, ಏ. 29: ರಾಜ್ಯದಲ್ಲಿ ಕೊರೊನಾ ವೈರಸ್ ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ ಕಲಬುರಗಿ, ನಂಜನಗೂಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹಾವಳಿ ಮಿತಿ ಮೀರಿದೆ. ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿ ಮೃತಪಟ್ಟವರಿಗಿಂತ ಮದ್ಯ ಸಿಗದೇ ಮದ್ಯ ವ್ಯಸನಿಗಳು ಜೀವ ಕಳೆದುಕೊಂಡಿರುವ ಪ್ರಕರಣಗಳೇ ಹೆಚ್ಚಿವೆ ಎಂಬ ವರದಿಗಳಿವೆ. ಹೀಗಾಗಿ ಹಲವು ವಿಚಾರಗಳ ಕುರಿತು ನಾಳೆಯ ಸಂಪುಟ ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಇನ್ನು ಮೇ 3ಕ್ಕೆ ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಲಾಕ್‌ಡೌನ್ ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ಕೊಟ್ಟಿರುವುದರಿಂದ ಹಸಿರುವವಲಯದ ಜಿಲ್ಲೆಗಳಲ್ಲಿ ಮತ್ತಷ್ಟು ರಿಯಾಯತಿ ಘೊಷಣೆ ಮಾಡುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಆದರೆ ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕ ಸ್ಥಿತಿಯೂ ಕೂಡ ಸರಿಯಾಗಿಲ್ಲ. ಹೀಗಾಗಿ ಆರ್ಥಿಕ ಸಂಪನ್ಮೂಲ ಕ್ರೂಡೀಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಹುಮುಖ್ಯವಾಗಿ ಚರ್ಚೆ ನಡೆಯಲಿದೆ.

ಹಸಿರು ವಲಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ
ಎರಡನೇ ಹಂತದ ಲಾಕ್‌ಡೌನ್ ಮೇ 3ಕ್ಕೆ ಮುಕ್ತಾಯವಾಗಲಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯ ಆಧಾರದ ಮೇಲೆ ರಾಜ್ಯದಲ್ಲಿ ಹಸಿರು, ಹಳದಿ, ಕಿತ್ತಳೆ ಹಾಗೂ ಕೆಂಪು ವಲಯಗಳೆಂದು ವಿಂಗಡಿಸಲಾಗಿದೆ. ಹಸಿರು ವಲಯದಲ್ಲಿನ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ರಾಜ್ಯದ 13 ಜಿಲ್ಲೆಗಳನ್ನು ಹಸಿರು ವಲಯದಲ್ಲಿ ಗುರುತಿಸಲಾಗಿದೆ.
ಹಸಿರುವ ವಲಯದ ಜಿಲ್ಲೆಗಳಲ್ಲಿ ನಗರ, ಪಟ್ಟಣ ಪ್ರದೇಶ ಹೊರತುಪಡಿಸಿ, ಗ್ರಾಮೀಣ ಭಾಗದ ಕೈಗಾರಿಕೆಗಳು ಆರಂಭಿಸಲು ಅನುಮತಿ ಕೊಡಲಾಗಿದೆ. ಆರ್ಥಿಕ ವಲಯಗಳಲ್ಲಿರುವ ರಫ್ತು ಆಧರಿತ ಕಾರ್ಖಾನೆಗಳು, ನೋಂದಣಿಯಾಗಿರುವ ಎಲ್ಲ ಅಂಗಡಿಗಳು, ಜನವಸತಿ ಪ್ರದೇಶಗಳಲ್ಲಿನ ಅಂಗಡಿಗಳು, ಕಾಂಪ್ಲೆಕ್ಸ್‌ಗಳು ಶೇಕಡಾ 50ರಷ್ಟು ಉದ್ಯೋಗಿಗಳನ್ನು ಕೆಲಸಕ್ಕೆ ಬಳಸಿಕೊಂಡು ಆರಂಭಿಸಲು ಅನುಮತಿ ಕೊಡಲಾಗಿದೆ.

ಹಸಿರು ವಲಯಗಳಲ್ಲಿ ಮದ್ಯ ಮಾರಾಟ ಮಾಡಿ
ಈ ಮಧ್ಯೆ ಈಗಾಗಲೇ ಲಾಕ್‌ಡೌನ್ ಸಡಿಲಿಕೆ ಮಾಡಿರುವ ಹಸಿರುವ ವಲಯಗಳಲ್ಲಿ ಮದ್ಯ ಮಾರಾಟ ಆರಂಭಿಸಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು. ರಾಜ್ಯದಲ್ಲಿ ಆರ್ಥಿಕ ಸಮಸ್ಯೆಯಿದೆ. ಅಬಕಾರಿ ಸುಂಕ ಬಂದರೆ ರಾಜ್ಯದ ಆರ್ಥಿಕತೆ ಸ್ವಲ್ಪ ಮಟ್ಟಿಗಾದರೂ ಸುಧಾರಿಸುತ್ತದೆ. ಷರತ್ತುಗಳನ್ನು ಹಾಕಿ ಮದ್ಯದ ಅಂಗಡಿಗಳನ್ನು ಆರಂಭ ಮಾಡಿದರೆ ರಾಜ್ಯದ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು. ಹಸಿರು ವಲಯಗಳಲ್ಲಿ ಮಾತ್ರ ಆರಂಭಿಸಿದರೆ ಒಳಿತು ಎಂದು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಹಲೆ ಕೊಟ್ಟಿದ್ದಾರೆ. ಇದು ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮದ್ಯ ಮಾರಾಟ: ಸಾಧಕ ಬಾಧಕಗಳ ಚರ್ಚೆ
ಹೀಗಾಗಿ ನಾಳೆಯ ಸಂಪುಟ ಸಭೆಯಲ್ಲಿ ಮದ್ಯ ಮಾರಾಟದ ಬಗ್ಗೆ ಮಹತ್ವದ ಚರ್ಚೆಯ ಸಾಧ್ಯತೆಯಿದೆ. ಮದ್ಯ ಮಾರಾಟದಿಂದ ಆಗಬಹುದಾದ ಸಾಧಕ ಬಾಧಕ ಕುರಿತು ಸಚಿವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಮೇ 3ರ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಉಂಟಾಗುವ ಸಾಧಕ ಬಾಧಕ ಕುರಿತು ಗೃಹ, ಆರೋಗ್ಯ, ವೈದ್ಯಕೀಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಬಾರ್, ವೈನ್ ಸ್ಟೋರ್, ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಕುರಿತು ಈ ಹಿಂದೆಯೆ ಚರ್ಚೆ ನಡೆಸಾಲಾಗಿತ್ತು. ಇದೀದ ಕೊರೊನಾ ಸೋಂಕು ಪತ್ತೆಯಾಗದ 13 ಜಿಲ್ಲೆಗಳಲ್ಲಿ ಮದ್ಯ ಮಾರಾಟ ಮಾಡಿ ಎಂದು ವಿರೋಧ ಪಕ್ಷದ ನಾಯಕರೂ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.

ಇತರ ವಿಷಯಗಳ ಬಗ್ಗೆ ಸಂಪುಟದಲ್ಲಿ ಚರ್ಚೆ
ಕೊರೊನಾ ವೈರಸ್ ವೈರಸ್ ಕುರಿತಂತೆ ರಾಜ್ಯಾದ್ಯಂತ ಇರುವ ವಸ್ತುಸ್ಥಿತಿಯ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಅವರು ಸಿಎಂ ಯಡಿಯೂರಪ್ಪ ಹಾಗೂ ಉಳಿದ ಸಚಿವರಿಗೆ ಮಾಹಿತಿ ಕೊಡಲಿದ್ದಾರೆ. ಕೃಷಿ ಚಟುವಟಿಕೆಗಳ ಕುರಿತು ಹಾಗೂ ಕೈಗಾರಿಕೆ, ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿಗತಿ, ಬೆಂಗಳೂರಿನಲ್ಲಿ ಆರ್ಥಿಕತೆ ಸುಧಾರಿಸಿಕೊಳ್ಳುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಸಂಪುಟದಲ್ಲಿ ಕೈಗೊಳ್ಳಲಾಗುವುದು. ಜೊತೆಗೆ ಪಾದರಾಯನಪುರ ಘಟನೆಯ ಬಳಿಕ ಜಾರಿಗೆ ತರಲಾಗಿರುವ ಸುಗ್ರೀವಾಜ್ಞೆ ಕುರಿತು ಚರ್ಚೆ ನಡೆಯಲಿದೆ.












Click it and Unblock the Notifications