ಪಂಚಮಸಾಲಿ ಮೀಸಲು: ಹೈಕೋರ್ಟ್‌ನಲ್ಲಿ ಸರ್ಕಾರದ ಸಮರ್ಥನೆ
ಪಂಚಮಸಾಲಿ ಮೀಸಲು ನಿಗದಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ. ಆಕ್ಷೇಪಣೆಯಲ್ಲಿ ತನ್ನ ನಡೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಬೆಂಗಳೂರು, ಫೆಬ್ರವರಿ 23; ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡಲು ಮಾಡಿರುವ ತೀರ್ಮಾನವನ್ನು ಸರ್ಕಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
ಇದರಿಂದಾಗಿ ಮೀಸಲು ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಮೀಸಲಿಗಾಗಿ ಬೇಡಿಕೆ ಇಟ್ಟಿರುವ ಇತರೆ ಸಮುದಾಯಗಳಿಗೆ ಸರ್ಕಾರದ ವಿರುದ್ಧ ಹೋರಾಡಲು ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ಪಂಚಮಸಾಲಿ ಮೀಸಲಾತಿ ಹೋರಾಟ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಪಂಚಮಸಾಲಿ ಮೀಸಲು ನಿಗದಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ. ತನಗೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ಇದೆ ಎಂದು ಬಲವಾಗಿ ಪ್ರತಿಪಾದಿಸಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರ್ಪಡೆ ಮಾಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಕೋರಿ ಬೆಂಗಳೂರಿನ ಡಿ. ಜಿ. ರಾಘವೇಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆಕ್ಷೇಪಣೆಯ ವಿವರಗಳೇನು?
ಲಿಂಗಾಯತ ಪಂಚಮಸಾಲಿ ಸಮುದಾಯವು ತನ್ನನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲು ಕಲ್ಪಿಸಲು ಕೋರಿದೆ. ಆ ಬಗ್ಗೆ ಆಯೋಗವು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಅದನ್ನು ಸರ್ಕಾರ ಈಗಾಗಲೇ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ಅರ್ಜಿ ಸಲ್ಲಿಸಿರುವ ಅರ್ಜಿದಾರರ ನಡೆಯು ಅಕಾಲಿಕವಾಗಿದೆ. ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ, ವಿಚಾರಣಾ ಮಾನ್ಯತೆ ಹೊಂದಿಲ್ಲ ಹಾಗೂ ವಜಾಗೊಳಿಸಲು ಅರ್ಹವಾಗಿದೆ ಎಂದು ಸರ್ಕಾರ ನ್ಯಾಯಾಲಯವನ್ನು ಕೋರಿದೆ.
ಅರ್ಜಿದಾರರ ಪರ ವಕೀಲರು ಹಾಜರಾಗಿ, ಸರ್ಕಾರದ ಆಕ್ಷೇಪಣೆಗೆ ಪ್ರತಿಕ್ರಿಯಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆ ಮನವಿಗೆ ಒಪ್ಪಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.

ಸರ್ಕಾರ ಆಕ್ಷೇಪಣೆಯಲ್ಲಿ ಏನಿದೆ?
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995ರ ಸೆಕ್ಷನ್ 9 ಪ್ರಕಾರ ಯಾವುದಾದರೂ ಒಂದು ಸಮುದಾಯವು ತನ್ನನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ ಎಂದು ಸರ್ಕಾರ ಆಕ್ಷೇಪಣೆಯಲ್ಲಿ ತಿಳಿಸಿದೆ.
ಅಲ್ಲದೆ, ನಿಯಮಗಳ ಪ್ರಕಾರ ಆಯೋಗವು ಮನವಿ ಮಾಡಿರುವ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆಯೇ ವಿಚಾರಣೆ,ಸಮೀಕ್ಷೆ, ತನಿಖೆ ನಡೆಸಿ ನಾಗರಿಕರ ಹಿಂದುಳಿದ ವರ್ಗಗಳ ವರ್ಗೀಕರಣದ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಹೇಳಿದೆ.

ಪರಿಷ್ಕರಣೆ ಮಾಡಬಹುದಾಗಿದೆ
ಕಾಯ್ದೆಯ ಸೆಕ್ಷನ್ 11ರ ಪ್ರಕಾರ ರಾಜ್ಯ ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸಿ ಪ್ರತಿ ಹತ್ತು ವರ್ಷಗಳಿಗೊಮ್ಮೆ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಬಹುದಾಗಿದೆ. ಈ ರೀತಿಯಲ್ಲಿ ಒಂದೆಲ್ಲಾ ಒಂದು ಸಮುದಾಯ ಸಲ್ಲಿಸುವ ಮನವಿಯನ್ನು ಸದಾ ಆಯೋಗದ ಮಂದೆ ಪರಿಣನೆಯಲ್ಲಿರುತ್ತದೆ. ಇದು ಸಹ ನಿರಂತರ ಪ್ರಕ್ರಿಯೆಯಾಗಿದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ವಿವರಿಸಿದೆ.
ಇನ್ನೂ ಆಯೋಗ ಸಹ ಕಾಲ ಕಾಲಕ್ಕೆ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದ್ದು, ಅದಕ್ಕೆ ಅನುಗುಣವಾಗಿ ಸರ್ಕಾರವು ಹಲವು ಹಿಂದುಳಿದ ವರ್ಗಗಳನ್ನು ವರ್ಗೀಕರಣ ಮತ್ತು ಮರುವರ್ಗೀಕರಣ ಮಾಡಿಕೊಂಡು ಬಂದಿದೆ. ಯಾವುದೇ ಹಿಂದುಳಿದ ವರ್ಗದ ವ್ಯಕ್ತಿಯ ಸಾಮಾಜಿಕ ಸ್ಥಿತಿಗತಿ ಒಂದೇ ರೀತಿ ಇರುವುದಿಲ್ಲ. ತೀರಾ ಹಿಂದುಳಿದ ವರ್ಗದ ವ್ಯಕ್ತಿ ಭವಿಷ್ಯದಲ್ಲಿ ಮುಂದುವರಿದ ವರ್ಗಕ್ಕೆ ವರ್ಗಾವಣೆಯಾಗಬಹುದು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಪಂಚಮಸಾಲಿ ಮೀಸಲಾತಿ ಹೋರಾಟ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗಿತ್ತು. ಲಿಂಗಾಯತ ಪಂಚಮಸಾಲಿ ಹೋರಾಟ ಸಮಿತಿ ಅಧ್ಯಕ್ಷರು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಹದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಕಾರ ಈ ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಕೆ ಮಾಡಿದೆ.












Click it and Unblock the Notifications