ನಿತ್ಯಾನಂದನಂತೆ ಸಿದ್ದರಾಮಯ್ಯಗೂ ಭಕ್ತರಿದ್ದಾರೆ: ಮತ್ತೆ ಗುಡುಗಿದ ಬಿಕೆ ಹರಿಪ್ರಸಾದ್
ಬೆಂಗಳೂರು, ಜನವರಿ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರೇ ನಮ್ಮ ರಾಮ, ಇನ್ನು ಅಯೋಧ್ಯೆಯ ರಾಮನನ್ನೇಕೆ ಹೋಗಿ ಪೂಜಿಸಬೇಕು ಎಂದು ಮಾಜಿ ಸಚಿವ ಹೆಚ್ ಆಂಜನೇಯ ನೀಡಿದ್ದ ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕೈಲಾಸದಲ್ಲಿರುವ ಸ್ವಾಮೀಜಿ ನಿತ್ಯಾನಂದ ಸ್ವಾಮೀಜಿಗೆ ಹೇಗೆ ಭಕ್ತರಿದ್ದಾರೆಯೋ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಭಕ್ತರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಅವರು ವ್ಯಂಗ್ಯ ಹಾಗೂ ಲೇವಡಿಯ ಮಾತುಗಳನ್ನಾಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮೀಜಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ಕುಹಕವಾಡಿದ್ದಾರೆ. ಎಲ್ಲರಿಗೂ ಭಕ್ತರು ಇರುತ್ತಾರೆ. ಕೈಲಾಸ ಆಶ್ರಮದ ನಿತ್ಯಾನಂದ ಸ್ವಾಮೀಜಿಗೂ ಭಕ್ತರಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಭಕ್ತರಿದ್ದಾರೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿಚಾರವನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರ ಮೇಲೂ ಕೇಸ್ ಇತ್ತು. ಕರಸೇವಕ ಎಂದ ಮಾತ್ರಕ್ಕೆ ಅಪರಾಧ ಪ್ರಕರಣ ಎದುರಿಸುತ್ತಿರುವವರನ್ನೆಲ್ಲ ಬಿಟ್ಟುಬಿಡಲಾಗದು. 30 ವರ್ಷ ಹಿಂದಿನ ಪ್ರಕರಣವನ್ನು ಈಗ ಯಾಕೆ ಕೆದಕಿದ್ದಾರೆ ಎಂಬುದು ಪ್ರಶ್ನೆಯೇ ಅಲ್ಲ. ಅಂತಹವರನ್ನು ಇಷ್ಟು ವರ್ಷ ಬಂಧಿಸದೆ ಬಿಟ್ಟಿದ್ದೇ ತಪ್ಪು. ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಬೇಕು. ಅಪರಾಧಿಗಳು ಎಂದಿದ್ದರೂ ಅಪರಾಧಿಗಳೇ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋಗುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ಕಾರಣ, ಗೋಧ್ರಾ ದುರಂತದ ರೀತಿಯಲ್ಲಿ ಏನಾದರೂ ಸಂಭವಿಸಬಹುದು. ಈ ಬಗ್ಗೆ ನಮಗೆ ಮಾಹಿತಿ ಸಿಗುತ್ತಿದೆ. ಇದರ ಮಾಹಿತಿ ಇದ್ದೇ ಈ ಮಾತನ್ನು ಹೇಳುತ್ತಿದ್ದೇನೆ ಎನ್ನುವ ಮೂಲಕ ಗಂಭೀರವಾದ ಮಾಹಿತಿಯನ್ನು ನೀಡಿದ್ದಾರೆ.
ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮವಾಗಿ ಉಳಿದಿಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು ಎಂದರು.











Click it and Unblock the Notifications