ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ
Pratap Simha: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿರ್ಧಾರವೊಂದಕ್ಕೆ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಅವರು, ಜನ್ಮದಿನಕ್ಕೆ ಫ್ಲೆಕ್ಸ್ ಹಾಕಬೇಡಿ ಎಂದು ಮನವಿ ಮಾಡಿಕೊಂಡಿರುವ ಮಹಾರಾಜರ Yaduveerbjp ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ ಎಂದು ಹೇಳಿದ್ದಾರೆ. ಇದರೊಂದಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪೋಸ್ಟ್‌ವೊಂದನ್ನು ಸಹ ಪ್ರತಾಪ್ ಸಿಂಹ ಅವರು ಹಂಚಿಕೊಂಡಿದ್ದಾರೆ.

ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾರ್ವಜನಿಕರು ಹಾಗೂ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದರು. ಆ ಪೋಸ್ಟ್ ವಿವರ ಇಲ್ಲಿದೆ.
ಸಹೃದಯಿ ಬಾಂಧವರಿಗೆ ಹಾಗೂ ಆತ್ಮೀಯರಿಗೆ ವಂದನೆಗಳು
ನಿಮ್ಮೆಲ್ಲರ ಕ್ಷೇಮವನ್ನು ಹಾರೈಸುತ್ತಾ ಮುಂಬರುವ ಮಾರ್ಚ್ 24ರ ಮಂಗಳವಾರದಂದು ನನ್ನ ಜನ್ಮದಿನದ ಅಂಗವಾಗಿ ಒಂದು ಪ್ರಮುಖ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಮೇಲಿರುವ ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಚಿರಋಣಿ. ಆದರೆ, ನನ್ನ ಜನ್ಮದಿನವನ್ನು ಯಾವುದೇ ರೀತಿಯ ಆಡಂಬರ, ಅದ್ದೂರಿತನ ಅಥವಾ ದುಬಾರಿ ವೆಚ್ಚದ ಮೂಲಕ ಆಚರಿಸಬಾರದೆಂದು ನಿಮ್ಮಲ್ಲಿ ಕಳಕಳಿಯ ವಿನಂತಿ ಮಾಡುತ್ತೇನೆ. ಬದಲಾಗಿ, ಈ ದಿನವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ ಎಂಬುದು ನನ್ನ ಆಶಯ.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರ, ಅನ್ನದಾನ, ಸಸಿ ನೆಡುವುದು ಹಾಗೂ ಜನೋಪಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಭ್ರಮಿಸುವುದು ಹೆಚ್ಚು ಸೂಕ್ತವೆಂದು ನಾನು ಭಾವಿಸುತ್ತೇನೆ.
Yaduveer: ವಿಶೇಷವಾಗಿ ನನ್ನದೊಂದು ಮನವಿ
ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಈ ಹಿನ್ನೆಲೆಯಲ್ಲಿ, ನನ್ನ ಜನ್ಮದಿನದ ನೆಪದಲ್ಲಿ ನಗರದಾದ್ಯಂತ ಯಾವುದೇ ಕಾರಣಕ್ಕೂ ಪ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಅಳವಡಿಸಬಾರದು ಎಂದು ಸವಿನಯವಾಗಿ ಕೋರುತ್ತೇನೆ. ಪ್ಲೆಕ್ಸ್‌ಗಳಿಂದ ನಗರದ ಅಂದಗೆಡುವುದಲ್ಲದೆ ಪರಿಸರಕ್ಕೂ ಹಾನಿಯಾಗುತ್ತಿದೆ. 'ಪ್ಲೆಕ್ಸ್ ಮುಕ್ತ ಮೈಸೂರು' ನನ್ನದೊಂದು ಕನಸು. ಈ ಕನಸನ್ನು ನನ್ನ ಜನ್ಮದಿನದಿಂದಲೇ ಸಾಕಾರಗೊಳಿಸಲು ನೀವೆಲ್ಲರೂ ಕೈಜೋಡಿಸಬೇಕು. ಒಂದು ವೇಳೆ ಎಲ್ಲದರೂ ಪ್ಲೆಕ್ಸ್ ಅಳವಡಿಸಿರುವುದು ಕಂಡುಬಂದಲ್ಲಿ, ಅದನ್ನು ಕೂಡಲೇ ತೆಗೆದುಹಾಕುವಂತೆ ನಾನು ಈಗಾಗಲೇ ಸೂಚಿಸಿದ್ದೇನೆ. ಈ ಬದಲಾವಣೆಗೆ ನೀವು ನೀಡುವ ಸಹಕಾರವೇ ನನ್ನ ಜನ್ಮದಿನದ ನಿಜವಾದ ಉಡುಗೊರೆ.
ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ವಿಶ್ವಾಸ ಸದಾ ನನ್ನ ಮೇಲಿರಲಿ. ನಮ್ಮ ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಸಕಲ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಧನ್ಯವಾದಗಳೊಂದಿಗೆ, ತಮ್ಮ ನಂಬುಗೆಯ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎನ್ನುವ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದರು.












Click it and Unblock the Notifications