leopard: ಖ್ಯಾತ ರಾಜಕಾರಣಿ ಮನೆಯ ಬಳಿ ಚಿರತೆ ಪ್ರತ್ಯಕ್ಷ
ಇತ್ತೀಚೆಗೆ ರಾಜ್ಯದಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿಯೂ ಚಿರತೆ ಕಾಣಿಸಿಕೊಂಡು ಜನವಸತಿ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ರಾಜ್ಯದ ರಾಜಕಾರಣಿ ಮನೆಗೂ ಚಿರತೆ ನುಗ್ಗಿರುವ ಘಟನೆ ವರದಿಯಾಗಿದೆ.
ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆ ಅಂಗಳಕ್ಕೆ ಚಿರತೆ ನುಗ್ಗಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನೆಯಲ್ಲೇ ಇದ್ದರು ಎನ್ನಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಚಿರತೆಯು ಕಾಗೇರಿ ನಿವಾಸದ ಬಳಿ ಓಡಾಟ ನಡೆಸಿದೆ.

ಆಹಾರ ಅರಸಿ ಚಿರತೆ ಇಲ್ಲಿಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಚಿರತೆ ಓಡಾಡಿರುವ ದೃಶ್ಯಗಳು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕಾಗೇರಿಯಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಅವರ ನಿವಾಸದ ಬಳಿ ಚಿರತೆ ಕಂಡು ಬೆಚ್ಚಿಬಿದ್ದಿದ್ದಾರೆ.
ಮನೆಯಂಗಳದಲ್ಲಿದ್ದ ಸಂಸದ ವಿಶ್ವೇಶ್ವರ ಹೆಗಡೆ ಅವರ ಸಾಕು ನಾಯಿಯನ್ನು ಬೇಟೆಯಾಡಲು ಚಿರತೆ ಅಟ್ಟಾಡಿಸಿದೆ ಎಂದು ಹೇಳಲಾಗಿದೆ. ಇಲ್ಲಿನ ತೋಟದಿಂದ ನಾಯಿಯನ್ನು ಚಿರತೆ ಓಡಿಸಿಕೊಂಡು ಬಂದಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಅದೃಷ್ಷವಶಾತ್ ಆ ನಾಯಿ ಚಿರತೆ ಬಾಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯು ಕಾಗೇರಿ ಅವರು ಮನೆ ಬಾಗಿಲಿಗೆ ಬಂದರೂ ಯಾವುದೇ ಹಾನಿಯಾಗಿಲ್ಲ, ಇದೇ ಮೊದಲ ಬಾರಿಗೆ ಕಾಗೇರಿ ಗ್ರಾಮಕ್ಕೆ ಚಿರತೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಹಲವೆಡೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಹೆಸರಾಂತ ಪ್ರದೇಶವಾದ ಬನಶಂಕರಿ 6ನೇ ಹಂತದ ಮೊದಲ ಬ್ಲಾಕ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಹಾಗೂ ಅದರ ಮರಿಗಳು ಈ ಪ್ರದೇಶದಲ್ಲಿ ಓಡಾಡಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದರು.

ಬನಶಂಕರಿ 6ನೇ ಹಂತದ ಮೊದಲ ಬ್ಲಾಕ್‌ನ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯಗಳು ರೆಕಾರ್ಡ್ ಆಗಿತ್ತು. ಸ್ಥಳೀಯರು ಕೂಡ ತಮ್ಮ ಮೊಬೈಲ್‌ಗಳಲ್ಲಿ ಚಿರತೆ ವಿಡಿಯೋಗಳನ್ನು ಸೆರೆ ಹಿಡಿದಿದ್ದರು. ಪಕ್ಕದಲ್ಲೇ ಇರುವ ತುರಹಳ್ಳಿ ಅರಣ್ಯದಿಂದಲೇ ಚಿರತೆಗಳು ಬಂದಿವೆ ಎಂದು ಹೇಳಲಾಗಿತ್ತು.
ಕೆಲ ದಿನಗಳ ಹಿಂದೆಯಷ್ಟೇ ಇದೇ ಪ್ರದೇಶದ ಮನೆಯೊಂದರ ಬಳಿಯೂ ಚಿರತೆ ಓಡಾಡಿತ್ತು. ಈಗ ಪದೇ ಪದೇ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸಂಜೆಯಾದ ನಂತರ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಚಿರತೆಗಳಿಂದ ರಕ್ಷಣೆ ಕೊಡುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications