ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಎಸ್.ಆರ್. ಪಾಟೀಲ್ ಹೆಸರು ಅಂತಿಮ?
ಬೆಂಗಳೂರು, ಜುಲೈ 7: ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ತೀರ್ಮಾನಿಸಿದೆ ಎನ್ನಲಾಗಿದೆ.
ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಎಸ್.ಆರ್. ಪಾಟೀಲ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ವಿಧಾನಸಭೆ ಅಧಿವೇಶನ ಮುಕ್ತಾಯವಾಗುವ ಕೊನೆಯಲ್ಲಿ ಸಭಾಪತಿ ಸ್ಥಾನದ ಚುನಾವಣೆ ನಡೆಯಲಿದೆ.
ಈ ಸಂಬಂಧ ಮುಂದಿನವಾರ ಅಧಿಸೂಚನೆ ಪ್ರಕಟಿಸುವ ನಿರೀಕ್ಷೆಯಿದೆ.
ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಟಾಪಟಿ ಶುರುವಾಗಿತ್ತು. ಆದರೆ, ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಒಪ್ಪಂದ ಮಾಡಿಕೊಂಡಿದ್ದು, ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ಒಪ್ಪಿಕೊಂಡಿದೆ.

ಅಲ್ಲದೆ, ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಮೇಲುಗೈ ಪಡೆದಿದ್ದಾರೆ. ಬಾದಾಮಿಯಲ್ಲಿ ತಮ್ಮ ಗೆಲುವಿಗೆ ನೆರವಾದ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರಿಗೆ ಸಭಾಪತಿ ಸ್ಥಾನ ಸಿಗಬೇಕೆಂದು ಸಿದ್ದರಾಮಯ್ಯ ಪಟ್ಟುಹಿಡಿದಿದ್ದರು ಎನ್ನಲಾಗಿದೆ.
ಅವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಕೂಡ ಎಸ್.ಆರ್. ಪಾಟೀಲ್ ಅವರ ಆಯ್ಕೆಗೆ ಸಹಮತಿ ಸೂಚಿಸಿದೆ. ವಿ.ಎಸ್. ಉಗ್ರಪ್ಪ, ಕೆ.ಸಿ. ಕೊಂಡಯ್ಯ, ಬೋಸರಾಜು ಮತ್ತು ಪ್ರತಾಪ್ ಚಂದ್ರಶೆಟ್ಟಿ ಅವರ ಹೆಸರುಗಳು ಸಹ ಕಾಂಗ್ರೆಸ್ ಪಾಳಯದಲ್ಲಿ ಚಾಲ್ತಿಯಲ್ಲಿತ್ತು.
ಈ ನಿರ್ಧಾರದಿಂದ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರಿಗೆ ಮತ್ತೆ ನಿರಾಶೆ ಎದುರಾಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವುದಾಗಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರು.
ಬಸವರಾಜ ಹೊರಟ್ಟಿ ಅವರನ್ನೇ ಸಭಾಪತಿಯನ್ನಾಗಿ ಆಯ್ಕೆ ಮಾಡಲು ಜೆಡಿಎಸ್ ಉದ್ದೇಶಿಸಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಆ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಇದರಿಂದ ಹೊರಟ್ಟಿ ಅವರಿಗೆ ಮತ್ತೊಂದು ಪ್ರಮುಖ ಹುದ್ದೆಯೂ ಕೈತಪ್ಪಿದೆ ಎನ್ನಲಾಗಿದೆ.











Click it and Unblock the Notifications