ವಿಧಾನ ಪರಿಷತ್ ಚುನಾವಣೆ; ಮತ ಎಣಿಕೆ ದಿನಾಂಕ ಮುಂದೂಡಿಕೆ
ಬೆಂಗಳೂರು, ನವೆಂಬರ್ 01 : ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಯನ್ನು ಚುನಾವಣಾ ಆಯೋಗ ಮುಂದೂಡಿ ಆದೇಶ ಹೊರಡಿಸಿದೆ. ಅಕ್ಟೋಬರ್ 28ರಂದು ನಡೆದಿದ್ದ ಚುನಾವಣೆ ಮತ ಎಣಿಕೆ ನವೆಂಬರ್ 10ರಂದು ನಡೆಯಲಿದೆ.
ಶನಿವಾರ ಚುನಾವಣಾ ಆಯೋಗ ಈ ಕುರಿತು ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಆಯೋಗ ನವೆಂಬರ್ 2ರ ಬದಲು ನವೆಂಬರ್ 10ರಂದು ಮತ ಎಣಿಕೆ ನಡೆಸಲಾಗುತ್ತದೆ ಎಂದು ಹೇಳಿದೆ.
ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 28ರಂದು ಚುನಾವಣೆ ನಡೆದಿತ್ತು. ಮೊದಲು ಪ್ರಕಟಿಸಿದ ವೇಳಾಪಟ್ಟಿಯಂತೆ ನವೆಂಬರ್ 2ರಂದು ಮತ ಎಣಿಕೆ ನಿಗದಿಯಾಗಿತ್ತು.

ನವೆಂಬರ್ 3ರಂದು ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಆದ್ದರಿಂದ, ಮತ ಎಣಿಕೆ ದಿನಾಂಕವನ್ನು ಮುಂದೂಡಬೇಕು ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.
ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷದ ಮನವಿ ಹಿನ್ನಲೆಯಲ್ಲಿ ಚುನಾವಣಾ ಆಯೋಗ ನವೆಂಬರ್ 2ರ ಬದಲು 10ರಂದು ಮತ ಎಣಿಕೆ ಮಾಡಲು ತೀರ್ಮಾನಿಸಿದೆ. ಆರ್. ಆರ್. ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಸಹ ನವೆಂಬರ್ 10ರಂದೇ ಪ್ರಕಟವಾಗುತ್ತಿದೆ.












Click it and Unblock the Notifications