ಮೇ 26ರಂದು ಬಿಜೆಪಿ-ಜೆಡಿಎಸ್ ಮಹತ್ವದ ಸಮನ್ವಯ ಸಮಿತಿ ಸಭೆ
ಬೆಂಗಳೂರು, ಮೇ 25: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ವಿಧಾನ ಪರಿಷತ್ ಚುನಾವಣೆ ಎದುರಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಈ ಚುನಾವಣೆಯಲ್ಲಿಯೂ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಎದುರಿಸುತ್ತಿವೆ.
ಮೂರು ಶಿಕ್ಷಕ, ಮೂರು ಪದವೀಧರ ಕ್ಷೇತ್ರಕ್ಕೆ ಜೂನ್ 3ರಂದು ಮತದಾನ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂತೆ ಬಿಜೆಪಿ ಜೆಡಿಎಸ್‌ಗೆ 2 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಈ ಚುನಾವಣೆಯ ಕುರಿತು ಚರ್ಚಿಸಲು ಮೇ 26ರಂದು ಬೆಂಗಳೂರಿನಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ.

ಈ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ ಪಾಳ್ಗೊಳ್ಳಲಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ಲೋಕಸಭೆ ಚುನಾವಣೆಯಂತೆ ಪರಿಷತ್ ಚುನಾವಣೆಯಲ್ಲೂ ಹೆಚ್ಚು ಸ್ಥಾನ ಗೆಲ್ಲಲು ತಂತ್ರ ರೂಪಿಸಿದೆ. ಆದ್ದರಿಂದ ಮೈತ್ರಿಕೂಟದ ಸಭೆ ನಡೆಯುತ್ತಿದೆ.
ಸಭೆಯ ವಿವರಗಳು: ಜೂನ್ 3ರಂದು ಬೆಂಗಳೂರು ಪದವೀಧರ ಕ್ಷೇತ್ರದಿಂದ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ನಡೆಯುತ್ತಿದೆ. ಕ್ಷೇತ್ರದಲ್ಲಿ ರಾಮೋಜಿ ಗೌಡ (ಕಾಂಗ್ರೆಸ್), ಅ. ದೇವೇಗೌಡ (ಬಿಜೆಪಿ-ಜೆಡಿಎಸ್) ಅಭ್ಯರ್ಥಿ.
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಕಾರ್ಯತಂತ್ರ ರೂಪಿಸಲು ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ, ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಉಭಯ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ (ಕೇಂದ್ರ, ಉತ್ತರ, ದಕ್ಷಿಣ), ಬೆಂಗಳೂರು ಗಾಮೀಣ ಮತ್ತು ರಾಮನಗರ ಜಿಲ್ಲೆಗಳು ಒಳಪಡುತ್ತವೆ. ಒಟ್ಟು ಮತದಾರರು 1,00,100. ಇವರಲ್ಲಿ ಪುರುಷರು 48,263, ಮಹಿಳೆಯರು 51,852 ಮತ್ತು ಇತರೆ 12.
ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್. ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್ ಪ್ರಭಾವ ಹೆಚ್ಚಿದೆ. ಆದ್ದರಿಂದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ತಂತ್ರ ರೂಪಿಸಲಾಗುತ್ತದೆ.
ಪರಿಷತ್ ಚುನಾವಣೆ ಮೈತ್ರಿಯಂತೆ ಬಿಜೆಪಿ ಜೆಡಿಎಸ್ ಪಕ್ಷಕ್ಕೆ ದಕ್ಷಿಣ ಶಿಕ್ಷಕ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ದಕ್ಷಿಣ ಶಿಕ್ಷಕ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ (ಕಾಂಗ್ರೆಸ್), ಕೆ. ವಿವೇಕಾನಂದ (ಜೆಡಿಎಸ್-ಬಿಜೆಪಿ) ಅಭ್ಯರ್ಥಿ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕೆ. ಕೆ. ಮಂಜುನಾಥ (ಕಾಂಗ್ರೆಸ್), ಎಲ್. ಭೋಜೇಗೌಡ (ಜೆಡಿಎಸ್-ಬಿಜೆಪಿ) ಅಭ್ಯರ್ಥಿಗಳು.
ಬಿಜೆಪಿ ನೈಋತ್ಯ ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಪಕ್ಷ ಬೆಂಬಲ ಘೋಷಣೆ ಮಾಡಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ನಾಯಕರು ಜಂಟಿ ಪ್ರಚಾರವನ್ನು ಕೈಗೊಂಡಿದ್ದಾರೆ.
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ (ಕಾಂಗ್ರೆಸ್), ಧನಂಜಯ ಸರ್ಜಿ (ಬಿಜೆಪಿ-ಜೆಡಿಎಸ್) ಅಭ್ಯರ್ಥಿ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ. ಎ. ನಾರಾಯಣ ಸ್ವಾಮಿ (ಬಿಜೆಪಿ-ಜೆಡಿಎಸ್), ಡಿ. ಟಿ. ಶ್ರೀನಿವಾಸ್ (ಕಾಂಗ್ರೆಸ್) ಅಭ್ಯರ್ಥಿ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಚಂದ್ರಶೇಖರ ಬಸವರಾಜ (ಕಾಂಗ್ರೆಸ್), ಅಮರನಾಥ ಪಾಟೀಲ (ಬಿಜೆಪಿ-ಜೆಡಿಎಸ್) ಅಭ್ಯರ್ಥಿ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ರಾಮೋಜಿ ಗೌಡ (ಕಾಂಗ್ರೆಸ್), ಅ. ದೇವೇಗೌಡ (ಬಿಜೆಪಿ-ಜೆಡಿಎಸ್) ಅಭ್ಯರ್ಥಿಗಳು. ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಸಹ 2024ರಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದರು. ಆದ್ದರಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗೆ ಹಿನ್ನಡೆಯಾಗಿತ್ತು.












Click it and Unblock the Notifications