ಕಲಬೆರಕೆ ಹಾಲು ಉತ್ಪಾದಕರನ್ನು ಜೈಲಿಗೆ ಕಳುಹಿಸುತ್ತೇವೆ
ಬೆಂಗಳೂರು, ಸೆ. 30 : ಕಲಬೆರಕೆ ಹಾಲು ಉತ್ಪಾದಕರನ್ನು ಜೈಲಿಗೆ ಕಳುಹಿಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ರಾಜ್ಯದಲ್ಲಿ ಯೂರಿಯಾ ಮತ್ತಿತರ ರಾಸಾಯನಿಕಗಳನ್ನೊಳಗೊಂಡ ಕಲಬೆರಕೆ ಹಾಲು ಮಾರಾಟ ದಂಧೆ ತಡೆಗೆ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಸೋಮವಾರ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) 'ವಿಶ್ವ ಹೃದಯ ದಿನಾಚರಣೆ-2014' ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಯಚಂದ್ರ ಅವರು, ಯೂರಿಯಾ ಮತ್ತಿತರ ರಾಸಾಯನಿಕಗಳನ್ನೊಳಗೊಂಡ ಕಲಬೆರಕೆ ಹಾಲು ಮಾರಾಟ ದಂಧೆ ತಡೆಗೆ ಸರ್ಕಾರ ಶೀಘ್ರವೇ ನೂತನ ಕಾನೂನನ್ನು ಜಾರಿಗೆ ತರಲಿದೆ. ಈ ಕುರಿತ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಗಡಿಭಾಗಗಳಲ್ಲಿ ಕೃತಕ ಹಾಲು ಉತ್ಪಾದಿಸುವ ಹಾಗೂ ಹಾಲಿಗೆ ಯೂರಿಯಾ ಮತ್ತಿತರ ರಾಸಾಯನಿಕ ವಸ್ತುಗಳ ಮಿಶ್ರಣ ಮಾಡುವ ದಂಧೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದನ್ನು ತಡೆಗಟ್ಟುವ ನೂತನ ಕಾಯ್ದೆಯನ್ನು ಜಾರಿ ತರಲಾಗುತ್ತದೆ. ಕೃತಕ ಹಾಲು ಉತ್ಪಾದನೆ ಮಾಡುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದರು. [ಕೆಎಂಎಫ್ ಅಧ್ಯಕ್ಷರಾದ ನಾಗರಾಜ್, ಡಿಕೆಶಿ ಬಣಕ್ಕೆ ಗೆಲುವು]
ಸುಪ್ರೀಂಕೋರ್ಟ್ ಈಗಾಗಲೇ ಕೃತಕ ಹಾಲು ತಯಾರಕರನ್ನು ಜೈಲಿಗೆ ಕಳುಹಿಸುವಂತೆ ಆದೇಶ ನೀಡಿದೆ. ರಾಜ್ಯ ಸರ್ಕಾರ ಜಾರಿಗೆ ತರಲಿರುವ ಹೊಸ ಕಾನೂನಿನ ಜೊತೆಗೆ ಕೆಎಂಎಫ್ ತಜ್ಞರು, ಆರೋಗ್ಯ ಇಲಾಖೆ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ, ನಕಲಿ ಹಾಲು ಪರಿಶೀಲನೆಗೆ ಮುಂದಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶೀಘ್ರ ನಂದಿನಿ ಹೃದಯ ಹಾಲು : ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾದ ವಿಟಮಿನ್ ಡಿ ಕೊರತೆ ನೀಗಿಸುವ 'ನಂದಿನಿ ಹೃದಯ' ಹಾಲು ಸದ್ಯದಲ್ಲೇ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಹೇಳಿದ್ದಾರೆ. [ಕ್ಷೀರಭಾಗ್ಯ ಯೋಜನೆ ಆರು ದಿನಗಳಿಗೆ ವಿಸ್ತರಣೆ?]
ಪ್ರಸ್ತುತ ನಂದಿನಿ ಸ್ಮಾರ್ಟ್ ಹೆಸರಿನಲ್ಲಿ ಟೆಟ್ರಾ ಪ್ಯಾಕ್‌ನಲ್ಲಿ ಲಭ್ಯವಾಗುವ ಡಿ ಮತ್ತು ಎ ವಿಟಮಿನ್ ಹೊಂದಿರುವ ಹಾಲನ್ನು ಸಾಮಾನ್ಯ ಪ್ಯಾಕೆಟ್‌ಗಳಲ್ಲಿ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಒದಗಿಸಲು ಕೆಎಂಎಫ್ ಮುಂದಾಗಿದೆ, ಶೀಘ್ರವೇ ಈ ಹಾಲು ಮಾರುಕಟ್ಟೆಗೆ ಬರಲಿದೆ ಎಂದರು.












Click it and Unblock the Notifications