ನಂದಿನಿಯಿಂದ ಎರಡು ಹೊಸ ಉತ್ಪನ್ನ ಬಿಡುಗಡೆ, ಯಾವುದು ಅವು ತಿಳಿಯಿರಿ
ಬೆಂಗಳೂರು, ಆಗಸ್ಟ್ 26: ಕರ್ನಾಟಕದ ಪ್ರಮುಖ ಹಾಲು ಒಕ್ಕೂಟಗಳಲ್ಲಿ ಒಂದಾದ ಮಂಡ್ಯ ಮಿಲ್ಕ್ ಯೂನಿಯನ್ (ಮನ್ಮುಲ್) ಎರಡು ಹೊಸ ನಂದಿನಿ ಉತ್ಪನ್ನಗಳನ್ನು ಪರಿಚಯಿಸಿದೆ. ಅವುಗಳೆಂದರೆ ಪನೀರ್ ನಿಪ್ಪಟ್ಟು ಮತ್ತು ವಿಶೇಷ ಮಿಲ್ಕ್ ಬರ್ಫಿ.
ಮಂಡ್ಯ ಜಿಲ್ಲೆಯ ಮನ್ಮುಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. "ನಾವು ವಿಶೇಷ ಮಿಲ್ಕ್ ಬರ್ಫಿ ಮತ್ತು ಪನೀರ್ ನಿಪ್ಪಟ್ಟುಗಳನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಉತ್ಪನ್ನ ತಂಡವು ದೇಸಿ ತುಪ್ಪದಲ್ಲಿ ಕೆಲಸ ಮಾಡುತ್ತಿದೆ ಮತ್ತು ಆ ಉತ್ಪನ್ನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮನ್ಮುಲ್ ಅಧ್ಯಕ್ಷ ಬಿ ಬೋರೇಗೌಡ ಹೇಳಿದರು.

ಕರ್ನಾಟಕ ಹಾಲು ಒಕ್ಕೂಟದ ಬ್ರಾಂಡ್ ನಂದಿನಿ ಅಡಿಯಲ್ಲಿ ಸುಮಾರು 140 ಡೈರಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಬಾದಾಮ್ ಬರ್ಫಿ, ಗೋಡಂಬಿ ಬರ್ಫಿ, ಚಾಕೊಲೇಟ್ ಬರ್ಫಿ, ಮೈಸೂರು ಪಾಕ್, ಬೇಸನ್ ಲಾಡೂ, ಡ್ರೈ ಫ್ರೂಟ್ ಬರ್ಫಿ, ಧಾರವಾಡ ಪೇಡಾ, ಮಿಲ್ಕ್ ಪೇಡಾ, ಜಾಮೂನ್, ರೊಸೊಗೊಲ್ಲ ಹೀಗೆ ನಂದಿನಿ ಬ್ರಾಂಡ್‌ನಲ್ಲಿ ಮಾರಾಟವಾಗುವ ಸಿಹಿತಿಂಡಿಗಳು.
ಕೆಎಂಎಫ್ ಇತ್ತೀಚೆಗೆ ಕನ್ನಡ ನಟ ಶಿವರಾಜ್ ಕುಮಾರ್ ಅವರನ್ನು ತನ್ನ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಎಂದು ಹೆಸರಿಸಿದೆ. ದಿವಂಗತ ನಟರಾದ ಪುನೀತ್ ರಾಜ್‌ಕುಮಾರ್ ಮತ್ತು ರಾಜ್‌ಕುಮಾರ್ ಹಲವಾರು ವರ್ಷಗಳಿಂದ ನಂದಿನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಮನ್ ಮುಲ್ ನಿಂದ ಇನ್ನು ಹೊಸ ಹೊಸ ರೀತಿಯಲ್ಲಿ ಉತ್ಪನ್ನ ಕೊಡುತ್ತೇವೆ. ಹೊಸ ಉತ್ಪನ್ನ ತಯಾರಿಕೆಯಿಂದ ಮನ್ ಮುಲ್ ಗೆ ಮತ್ತಷ್ಟು ಆದಾಯ ಬರಲು ಸಾಧ್ಯವಾಗಿದೆ. ಸಾರ್ವಜನಿಕರು ಮನ್ ಮುಲ್ ಪ್ರಾಡಕ್ಟ್ ಗಳನ್ನು ಮತ್ತಷ್ಟು ಖರೀದಿಸಿ ಸಹಕರಿಸುವಂತೆ ಬಿ ಬೋರೇಗೌಡ ಮನವಿ ಮಾಡಿದರು.
ಮನ್‌ಮುಲ್‌ನಿಂದ ಇಂದು 2 ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಪೌಷ್ಟಿಕಾಂಶಯುಕ್ತ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಲು ಮುಂದಾಗಬೇಕು. ಆ ಮೂಲಕ ಜಿಲ್ಲೆಯ ಹೈನುಗಾರರ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ಕೋರಿದರು.
ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ, ''ರಾಜ್ಯ ಹಾಗೂ ದೇಶದಲ್ಲಿ140 ಬಗೆಯ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿಲಭ್ಯವಿವೆ. ಸ್ವಾದಿಷ್ಟವಾದ ಹಾಗೂ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸುವ ಕೆಲಸವನ್ನು ಮನ್‌ಮುಲ್ ಮಾಡುತ್ತಿದೆ'' ಎಂದರು.
ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿ, ''ಮನ್‌ಮುಲ್ ಭವಿಷ್ಯದಲ್ಲಿ ಮತ್ತಷ್ಟು ಉತ್ಪನ್ನಗಳನ್ನು ತಯಾರಿಸುವ ಮೂಲಕ ವಿದೇಶಿ ಮಾರುಕಟ್ಟೆ ಪ್ರವೇಶಿಸಲಿದೆ. ಕಳೆದ ಸಾಲಿನಲ್ಲಿ1,553 ಕೋಟಿ ರೂ. ವಹಿವಾಟು ನಡೆಸಿರುವ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ2,000 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ. ಕಳೆದ ವರ್ಷ ಬಿಡುಗಡೆ ಮಾಡಿದ್ದ ಬೆಲ್ಲದ ಬರ್ಫಿಯು ಈವರೆಗೆ 9 ಟನ್, ಖೋವಾ ಲಾಡು 6 ಟನ್ ಮಾರಾಟವಾಗಿದೆ'' ಎಂದು ಹೇಳಿದರು.
ಮನ್‌ಮುಲ್ ನಿರ್ದೇಶಕರಾದ ಯು.ಸಿ.ಶಿವಕುಮಾರ್, ರೂಪ, ಮಾರುಕಟ್ಟೆ ವಿಸ್ತರಣಾಧಿಕಾರಿ ಪ್ರದೀಪ್, ಸಂಸ್ಥೆಯ ಆಡಳಿತ ವಿಭಾಗದ ವ್ಯವಸ್ಥಾಪಕ ಡಾ.ಅಕಲಪ್ಪರೆಡ್ಡಿ ಇತರರು ಭಾಗವಹಿಸಿದ್ದರು.












Click it and Unblock the Notifications