Gruha Lakshmi Scheme: ಫೆಬ್ರವರಿ ತಿಂಗಳ ಗೃಹ ಲಕ್ಷ್ಮಿ ಬಿಡುಗಡೆ: ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ, ಏಪ್ರಿಲ್ 01: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಲವಾರು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರ ಹಂತ ಹಂತವಾಗಿ ಪಂಚ ಗ್ಯಾರಂಟಿಗಳನ್ನ ಜಾರಿಗೊಳಿಸಿದೆ. ಆದರೆ, ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಹಣ ಲಭ್ಯತೆ ಕುರಿತು ಸಮಸ್ಯೆಗಳು ಎದುರಾಗಿವೆ. ಕೆಲವು ಫಲಾನುಭವಿಗಳಿಗೆ 16, 17 ಮತ್ತು 18 ನೇ ಕಂತಿನ ಹಣ ಇನ್ನೂ ಜಮಾ ಆಗಿಲ್ಲ. ಈಗಾಗಲೇ ಎರಡು ತಿಂಗಳ ಹಣ ಒಟ್ಟಿಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದರು.
ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಮೂರ್ನಾಲ್ಕು ತಿಂಗಳುಗಳ ಕಾಲ ವಿಳಂಬವಾಗಿತ್ತು. ಯುಗಾದಿ ಹಬ್ಬದ ದಿನದಂದು ರಾಜ್ಯ ಸರ್ಕಾರ ಜನವರಿ ತಿಂಗಳ ಹಣವನ್ನ ಬಿಡುಗಡೆ ಮಾಡಿದ್ದು, ಇದೀಗ ಫೆಬ್ರವರಿ ತಿಂಗಳ ಹಣ ಬಿಡುಗಡೆ ಬಾಕಿ ಇದೆ. ಸರ್ಕಾರ ಈಗಾಗಲೇ ಪೆಂಡಿಂಗ್ ಇರುವ ಹಣ ಬಿಡುಗಡೆ ಪ್ರಕ್ರಿಯೆ ಆರಂಭಿಸಿದ್ದು, ಹಂತ ಹಂತವಾಗಿ ಎಲ್ಲಾ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಾಗುತ್ತಿದೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣವೂ ಈಗಾಗಲೇ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ಜೊತೆಗೆ ಫೆಬ್ರವರಿ ತಿಂಗಳ ಹಣ ಕೂಡ ಈಗಾಗಲೇ ಬಿಡುಗಡೆಯಾಗಿದ್ದು, ಏಪ್ರಿಲ್ ಮೊದಲ ವಾರ ಫೆಬ್ರವರಿ ತಿಂಗಳ ಹಣ ಸಂದಾಯವಾಗಲಿದೆ ಎಂದು ಹೇಳಿದರು.
ಕರ್ನಾಟಕ ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ, ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರ ಸರಕಾರ ಜನ ಸಾಮಾನ್ಯರಿಗೆ ಹೊರೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು. ಇಂಧನ ಬೆಲೆ ಏರಿಕೆ, ಗ್ಯಾಸ್, ಪ್ರತಿಯೊಂದು ದಿನಸಿ ಬೆಲೆಗಳ ಏರಿಕೆಯಾಗಿದೆ. ಇದರ ಬಗ್ಗೆ ಮೊದಲು ಬಿಜೆಪಿಯವರು ಪ್ರಶ್ನಿಸಲಿ, ಹಾಲಿನ ದರ ಏರಿಸಿರುವುದರಿಂದ ರೈತರಿಗೆ ಅನುಕೂಲ ಆಗಿದೆ ಎಂದು ತಿರುಗೇಟು ನೀಡಿದರು.
ರಾಜ್ಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರಿದ್ದಾರೆ, ರಾಜ್ಯಕ್ಕೆ ನ್ಯಾಯಕೊಡಿಸಲಿ. ನಮ್ಮ ಹಕ್ಕು ನಮ್ಮ ತೆರಿಗೆ ಅಂತ ಹೋರಾಟ ಮಾಡಿದರೂ ಪ್ರಯೋಜವಾಗಲಿಲ್ಲ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇದ್ಯಾ?. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಕೇಂದ್ರದಲ್ಲಿ ಪ್ರಶ್ನಿಸಲಾಗದ ನಾಯಕರು ಈಗ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಲು ಮುಂದಾಗಿರುವುದು ಹಾಸ್ಯಸ್ಪದ ಎಂದು ಸಚಿವರು ತಿಳಿಸಿದರು.
ಬಿಜೆಪಿ ಸರ್ಕಾರ ಕಡೇ ದಿನಗಳಲ್ಲಿ ಮಾಡಿದ ತಪ್ಪಿನಿಂದಾಗಿ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಕ್ಕ ಸಿಕ್ಕಂತೆ ಟೆಂಡರ್ ಮಾಡಿ, ಯಾವುದೇ ಹಣ ಬಿಡುಗಡೆ ಮಾಡದೇ ಹೋದರು. ಇದೀಗ ಹಣ ಬಿಡುಗಡೆ ಮಾಡಿ ಅಂತ ನಮ್ಮನ್ನು ಕೇಳುತ್ತಿದ್ದಾರೆ. ಗುತ್ತಿಗೆದಾರರ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ದೂರಿದರು. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿರುವ ಪಕ್ಷ. ಸರ್ವಜನಾಂಗಕ್ಕೂ ಬೇಕಾಗಿರುವ ಪಕ್ಷ ಕಾಂಗ್ರೆಸ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.












Click it and Unblock the Notifications