Lakkundi: ಲಕ್ಕುಂಡಿ ಉತ್ಖನನ ಕಾರ್ಮಿಕರ ಕೂಲಿ ₹600 ಹೆಚ್ಚಿಸಲು ಬೇಡಿಕೆ, ಶಿಲಾಯುಗದ ಕಲ್ಲು ಪತ್ತೆ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಪಾಯ ತೆಗೆಯುವಾಗ ನಿಧಿ ಪತ್ತೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಆ ಮನೆ ಹಾಗೂ ವೀರಭದ್ರೇಶ್ವರ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಇದೀಗ ಭೂಮಿ ಅಗೆಯುವ ನಾಲ್ಕನೇ ದಿನದ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಒಟ್ಟು ಎರಡು ತಿಂಗಳು ಉತ್ಖನನ ಕಾರ್ಯ ನಡೆಸಲು ಸರ್ಕಾರ ತೀರ್ಮಾನಿಸಿದೆ. ನೆನ್ನೆ ಭಾನುವಾರ ಹೊಸ ಶಿಲಾಯುಗದಲ್ಲಿ ಬಳಕೆ ಆಗಿದ್ದ ಕಲ್ಲೊಂದು ದೊರೆತಿದೆ.
ಗಂಗವ್ವ ರಿತ್ತಿ ಎಂಬುವವರ ಮನೆ ಅಗೆಯುವ ವೇಳೆ ನಿಧಿ ಸಿಕ್ಕಿತ್ತು. ಅದನ್ನು ಸರ್ಕಾರಕ್ಕೆ ಒಪ್ಪಿಸುತ್ತಿದ್ದಂತೆ ಮತ್ತೊಂದು ಸ್ಥಳದಲ್ಲಿ ಮುತ್ತು, ಹವಳ ಸಿಕ್ಕಿದ್ದವು. ಈ ಕಾರಣಕ್ಕೆ ಪುರಾತತ್ವ ಇಲಾಖೆ, ಸಂಬಂಧಿಸಿದ ಅಧಿಕಾರಿಗಳು ಉತ್ಖನನ ಆರಂಭಿಸಿದ್ದಾರೆ. ಈ ವೇಳೆ ಗ್ರಾಮದ ಕಾರ್ಮಿಕರನ್ನೇ ಬಳಸಿ ಉತ್ಖನನ ನಡೆಸಲಾಗುತ್ತಿದೆ. ಆದರೆ ಕಾರ್ಮಿಕರು ಈಗ ನೀಡುತ್ತಿರುವ ಕೂಲಿಯನ್ನು ಹೆಚ್ಚಿಸುವಂತೆ ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಕೆಲಸ ಕಾರ್ಯಗಳು ತಡವಾಗಿ ಅರಂಭವಾದವು.

ಸದ್ಯ ಉತ್ಖನನ ಕಾರ್ಯದಲ್ಲಿ ತೊಡಗಿರುವ ಒಬ್ಬ ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ದಿನಕ್ಕೆ ತಲಾ 374 ರೂಪಾಯಿ ಕೂಲಿ ನೀಡಲಾಗುತ್ತದೆ. ಈ ಮೊತ್ತವನ್ನು 600 ರೂಪಾಯಿ ಏರಿಕೆ ಮಾಡುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮೇಲ್ವಿಚಾರಕರ ಬಳಿ ಹಣ ಹೆಚ್ಚಳ ಬಗ್ಗೆ ಬೇಡಿಕೆ ಸಲ್ಲಿಸಿದ್ದಾರೆ. ನಿತ್ಯ ಎಂಟು ಗಂಟೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಕೂಲಿ ಕಡಿಮೆ ನೀಡುತ್ತಾರೆ, ಇದು ಸಾಕಾಗಲ್ಲ ಎಂದು ಬೆಳಗ್ಗೆ ಕೆಲಸ ಆರಂಭ ಮುನ್ನವೇ ಕಾರ್ಮಿಕರು ಡಿಮ್ಯಾಂಡ್ ಮಾಡಿದರು. ಕೆಲಸ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಲಾಯುಗದಲ್ಲಿ ಬಳಕೆ ಆಗಿದ್ದ ಕಲ್ಲು ಪತ್ತೆ
ನಿಧಿ, ಪ್ರಾಚೀನ ಅಮೂಲ್ಯ ವಸ್ತುಗಳಿಗಾಗಿ ಸರ್ಕಾರ ಲಕ್ಕುಂಡಿಯಲ್ಲಿ ಉತ್ಖನನ ನಡೆಸಿದೆ. ನಾಲ್ಕನೇ ದಿನದ ಉತ್ಖನನ ವೇಳೆ ಶಿಲಾಯುಗದಲ್ಲಿ ಬಳಕೆ ಆಗಿದ್ದ ಆಯುಧ ಮಾದರಿಯಲ್ಲಿರುವ ಕಲ್ಲು ಪತ್ತೆ ಆಗಿದೆ. ಕಾರ್ಮಿಕರು ಅಗೆಯುವಾಗ ಅದು ಪತ್ತೆ ಆಗಿದೆ. ಕಾಣುತ್ತಿದ್ದಂತೆ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆ ಕಲ್ಲು ಹಾಳಾಗದಂತೆ ನಿಧಾನವಾಗಿ ಭೂಮಿಯಿಂದ ತೆಗೆದು ಪರಿಶೀಲಿಸಲಾಗಿದೆ. ವಶಕ್ಕೆ ಪಡೆದು ಅದಕ್ಕೊಂದು ಟ್ಯಾಗ್ ಹಾಕಿದ್ದಾರೆ. ಆ ಕಲ್ಲು ಬಳಕೆ, ಎಷ್ಟು ವರ್ಷ ಹಳೆಯದು ಇಲ್ಲಿಗೆ ಹೇಗೆ ಬಂತು? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.
ನಿತ್ಯ ಒಟ್ಟು 35-40 ಕಾರ್ಮಿಕರು ನಿತ್ಯ ಇಲ್ಲಿ ಉತ್ಖನನ ಕೆಲಸ ಆರಂಭಿಸಿದ್ದಾರೆ. ಈಗಷ್ಟೇ ಆರಂಭವಾಗಿರುವ ಭೂಮಿ ಅಗೆಯುವ ಕಾರ್ಯ ಮುಂದಿನ ಎರಡು ತಿಂಗಳ ಕಾಲ ನಡೆಯಲಿದೆ. ನಿಯಮಗಳಂತೆ ನಿತ್ಯ ಒಬ್ಬ ಕೂಲಿಗೆ 374 ರೂಪಾಯಿ ನೀಡಲಾಗುತ್ತಿದೆ. ಲಕ್ಕುಂಡಿಯಲ್ಲಿ ಇನ್ನಷ್ಟು ಪ್ರಾಚೀನ ಅವಶೇಷಗಳು, ನಿಧಿ ಸಿಗುವ ವಿಶ್ವಾಸದಲ್ಲಿ ಪುರಾತತ್ವ ಇಲಾಖೆ, ಸರ್ಕಾರ ಇದೆ.












Click it and Unblock the Notifications