HPಯಿಂದ 30 ವರ್ಷಗಳ ಬಳಿಕ ಲೇಆಫ್‌: ಅಂಟಾರ್ಕ್ಟಿಕಾದಲ್ಲಿ ಫೋರ್ಕ್ ಲಿಫ್ಟ್ ಓಡಿಸುತ್ತಾ ಹೊಸ ಸಾಹಸಕ್ಕೆ ಇಳಿದ 59ರ ಮಹಿಳೆ

ಜಾಗತಿಕ ಐಟಿ ವಲಯದಲ್ಲಿ ಲೇಆಫ್‌ ಮುಂದುವರಿದಿದ್ದು, ಸಾವಿರಾರು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಟೆಕ್ ದೈತ್ಯ ಹೆಚ್‌ಪಿ ಕಂಪನಿಯಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ 59 ವರ್ಷದ ಮಹಿಳೆಯೊಬ್ಬರು ಕೆಲಸ ಕಳೆದುಕೊಂಡಾಗ, ಅದನ್ನು ನಿರಾಸೆಯಾಗಿ ನೋಡದೆ ಒಂದು ಹೊಸ ಸಾಹಸವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ನೋಡಿ.

ಐಟಿ ಕಂಪನಿಯ ಡೆಸ್ಕ್ ಜಾಬ್‌ನಿಂದ ಹೊರಬಂದು, ಈಗ ಹಿಮಾವೃತ ಅಂಟಾರ್ಕ್ಟಿಕಾದಲ್ಲಿ ಫೋರ್ಕ್ ಲಿಫ್ಟ್ ಓಡಿಸುವ ಮೂಲಕ ಮೇ ಲೀ (May Lee) ಎಂಬ ಮಹಿಳೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

Laid Off After 30 Years At HP A 59-Year-Old Woman Moves To Antarctica For An Exciting New Job

ಮೇ ಲೀ ಅವರು 1987ರಲ್ಲಿ ಒಬ್ಬ ಇಂಟರ್ನ್ ಆಗಿ ಹೆಚ್‌ಪಿ ಕಂಪನಿಯನ್ನ ಸೇರಿಕೊಂಡಿದ್ದರು. ಪದವೀಧರೆಯಾಗಿದ್ದ ಅವರು, ಒಂದೊಳ್ಳೆ ಕಂಪನಿಯಲ್ಲಿ ಜೀವನಪರ್ಯಂತ ನಿಷ್ಠೆಯಿಂದ ಕೆಲಸ ಮಾಡಬೇಕು ಎಂಬ ಗುರಿ ಹೊಂದಿದ್ದರು. ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಎಲ್ಲರ ಹಾಗೇ ಕಂಪನಿಯಿಂದ ಕಂಪನಿಗೆ ಜಿಗಿಯುವ ಆಸೆ ಅವರಿಗಿರಲಿಲ್ಲ.

"ಕಳೆದ ಫೆಬ್ರವರಿಯಲ್ಲಿ ಹೆಚ್‌ಪಿ ಉದ್ಯೋಗ ಕಡಿತ ಮಾಡದಿದ್ದರೆ, ನಾನು ಎಂದಿಗೂ ಕಂಪನಿ ಬಿಡುತ್ತಿರಲಿಲ್ಲ," ಎಂದು ಬಿಸಿನೆಸ್ ಇನ್‌ಸೈಡರ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ನೋವು ಹಂಚಿಕೊಂಡಿದ್ದಾರೆ. ಕಂಪನಿಯಲ್ಲಿ ನೇಮಕಾತಿ ಸ್ಥಗಿತಗೊಂಡಾಗ ಹಾಗೂ ಕೆಲಸದ ಸಮಯವನ್ನ ಕಡಿತಗೊಳಿಸಿದಾಗಲೇ ಲೇ-ಆಫ್‌ನ ಮುನ್ಸೂಚನೆ ಇತ್ತು. ಆದರೂ, ಇನ್ನೂ ಐದು ವರ್ಷ ಅದೇ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ ಲೀ ಅವರಿಗೆ ಈ ಬೆಳವಣಿಗೆ ಆಘಾತ ನೀಡಿತ್ತು.

ಮತ್ತೆ ಐಟಿ ಉದ್ಯೋಗ ಹುಡುಕಾಟ

ಕೆಲಸ ಕಳೆದುಕೊಂಡ ನಂತರ ಮೇ ಲೀ ಅವರು ಮತ್ತೆ ಉದ್ಯೋಗ ಹುಡುಕಾಟದಲ್ಲಿ ತೊಡಗಿಸಿಕೊಂಡರು. ಅವರ ಬಳಿ ಉತ್ತಮ ನೆಟ್‌ವರ್ಕ್ ಮತ್ತು ರೆಫರಲ್‌ಗಳಿದ್ದರೂ ಹೊಸ ಕೆಲಸ ಸಿಗಲಿಲ್ಲ. ಈ ಹತಾಶೆಯ ಸಮಯದಲ್ಲಿ ಹೆಚ್‌ಪಿಯಲ್ಲಿದ್ದ ಅವರ ಆಪ್ತ ಗೆಳತಿಯೊಬ್ಬರು ಮಹತ್ವದ ಸಲಹೆ ನೀಡಿದರು.

"ನಿನ್ನ ಮನೆಯ ಸಾಲ ಈಗಾಗಲೇ ತೀರಿದೆ. ನಿನಗಿನ್ನು ಐಟಿಯ ದೊಡ್ಡ ಸಂಬಳದ ಅಗತ್ಯವಿಲ್ಲ. ನಿನಗೆ ಇಷ್ಟವಿರುವ ಬೇರೆ ಕ್ಷೇತ್ರಗಳಲ್ಲಿ ಏಕೆ ಕೆಲಸ ಹುಡುಕಬಾರದು?" ಎಂದು ಹೇಳಿದರು. ಈ ಮಾತು ಲೀ ಅವರ ಆಲೋಚನೆಯನ್ನೇ ಬದಲಾಯಿಸಿತು.

ಅಂಟಾರ್ಕ್ಟಿಕಾದಲ್ಲಿ ಸಾಹಸಮಯ ಕೆಲಸ: ಐಸ್ ಖಂಡದತ್ತ ಪಯಣ

ಹೊಸದನ್ನೇನಾದರೂ ಮಾಡಬೇಕು ಎಂದು ಯೋಚಿಸಿದಾಗ ಲೀ ಅವರಿಗೆ ಹೊಳೆದದ್ದು ಅಂಟಾರ್ಕ್ಟಿಕಾ. ಈ ಹಿಂದೆ ಎರಡು ಬಾರಿ ರಜೆಯ ಮಜಾ ಸವಿಯಲು ಅವರು ಅಲ್ಲಿಗೆ ಭೇಟಿ ನೀಡಿದ್ದರು. ಆ ಜಾಗವನ್ನ ವಿಪರೀತ ಇಷ್ಟಪಟ್ಟಿದ್ದ ಅವರು, ಅಲ್ಲಿ ಕೆಲಸ ಮಾಡಲು ಅವಕಾಶವಿದೆಯೇ ಎಂದು ಹುಡುಕಲು ಪ್ರಾರಂಭಿಸಿದರು. ಅಚ್ಚರಿ ಎಂಬಂತೆ ಅಲ್ಲಿ ಅವಕಾಶಗಳಿದ್ದವು. ಆದರೆ ಅಂಟಾರ್ಕ್ಟಿಕಾದಲ್ಲಿ ಕೆಲಸ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ.

ಕಠಿಣ ದೈಹಿಕ ಪರೀಕ್ಷೆಗಳು ಮತ್ತು ಸುದೀರ್ಘ ಹಿನ್ನೆಲೆ ಪರಿಶೀಲನೆಯ ನಂತರ, ಅಮೆಂಟಮ್ ಎಂಬ ಕಂಪನಿಯಲ್ಲಿ ಸಪ್ಲೈ ಟೆಕ್ನಿಷಿಯನ್ ಆಗಿ ಅವರು ಕೆಲಸ ಗಿಟ್ಟಿಸಿಕೊಂಡರು. ಹೆಚ್‌ಪಿ ನೀಡುತ್ತಿದ್ದ ಸಂಬಳಕ್ಕಿಂತ ಇಲ್ಲಿನ ವೇತನ ತೀರಾ ಕಡಿಮೆಯಿದ್ದರೂ, ಅವರಿಗೆ ಸಿಕ್ಕ ಮಾನಸಿಕ ನೆಮ್ಮದಿ ದೊಡ್ಡದಿತ್ತು.

ಫೋರ್ಕ್ ಲಿಫ್ಟ್ ಕೆಲಸ

ಅಂಟಾರ್ಕ್ಟಿಕಾದ ಹೊಸ ಕೆಲಸ ಮೇ ಲೀ ಅವರ ಹಿಂದಿನ ಕೆಲಸಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಹಗಲಿರುಳು ಕಂಪ್ಯೂಟರ್ ಪರದೆ ನೋಡುತ್ತಿದ್ದ ಅವರು, ಈಗ ಮೈನಸ್ ಡಿಗ್ರಿ ಚಳಿಯಲ್ಲಿ ಫೋರ್ಕ್ ಲಿಫ್ಟ್ ಮೂಲಕ ಸರಕುಗಳನ್ನ ವೇರ್‌ಹೌಸ್‌ಗೆ ಸಾಗಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರತಿಯೊಂದು ಆರ್ಡರ್‌ನ ಡೇಟಾಬೇಸ್ ಪರಿಶೀಲಿಸುವುದು, ಭಾರವಾದ ಬಾಕ್ಸ್‌ಗಳನ್ನ ಹೊರುವುದು ಸೇರಿದಂತೆ ದೈಹಿಕ ಶ್ರಮದ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಇಲ್ಲಿನ ಜೀವನ ಲೀ ಅವರಿಗೆ ಹೊಸ ಚೈತನ್ಯ ನೀಡಿದೆ. "ಊಟದ ಸಮಯದಲ್ಲಿ ಯಾರೊಬ್ಬರೂ ಮೊಬೈಲ್ ಫೋನ್ ಹಿಡಿದು ಕೂರುವುದಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುತ್ತಾರೆ. ಇದು ನನಗೆ ಅತೀವ ಖುಷಿ ನೀಡಿದೆ," ಎನ್ನುತ್ತಾರೆ ಲೀ.

ಈ ಕೆಲಸ ಕೇವಲ ಒಂದು ಸೀಸನ್‌ಗೆ ಮಾತ್ರ ಸೀಮಿತವಾಗಿದ್ದರೂ, ಅವರು ಅಂಟಾರ್ಕ್ಟಿಕಾದಲ್ಲಿಯೇ ಮತ್ತೊಂದು ಹೊಸ ಜವಾಬ್ದಾರಿಯನ್ನ ಹೊರಲು ಈಗ ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ಲೇಆಫ್‌ ಎಂದರೆ ಜೀವನದ ಅಂತ್ಯವಲ್ಲ, ಅದು ಹೊಸ ಸಾಹಸದ ಆರಂಭ ಎಂಬುದಕ್ಕೆ ಮೇ ಲೀ ಅವರೇ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+