2023ರ ಚುನಾವಣೆ; 3 ಪಕ್ಷಗಳಿಗೆ ಕುರುಬರ ಸಂಘದಿಂದ ಮಹತ್ವದ ಬೇಡಿಕೆ
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮೂರು ರಾಜಕೀಯ ಪಕ್ಷಗಳನ್ನು ಒತ್ತಾಯಿಸಲಾಗಿದೆ.
ಬೆಂಗಳೂರು, ಮಾರ್ಚ್ 08; ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘ ಒತ್ತಾಯಿಸಿದೆ. ಸಿದ್ದರಾಮಯ್ಯ, ಕೆ. ಎಸ್. ಈಶ್ವರಪ್ಪ, ಹೆಚ್. ವಿಶ್ವನಾಥ್ ಸೇರಿದಂತೆ ವಿವಿಧ ಪಕ್ಷದಲ್ಲಿ ಕುರುಬ ಸಮುದಾಯದ ಪ್ರಭಾವಿ ನಾಯಕರು ಇದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಕರ್ನಾಟಕದಲ್ಲಿ ಪ್ರಬಲ ಜಾತಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕುರುಬ ಸಮುದಾಯ ರಾಜ್ಯದ 150ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಸುವಲ್ಲಿ ನಿರ್ಣಾಯಕರಾಗಿದ್ದಾರೆ. ರಾಜ್ಯದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮಾಜದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇದ್ದರೂ ಕಳೆದ ಹಲವು ದಶಕಗಳಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡದೇ ಸಮಾಜವನ್ನು ಕೇವಲ ಮತದಾನಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂದರು.

ಸಮಾಜದ ಅಭ್ಯರ್ಥಿಗಳು ಗೆಲ್ಲುವ ಕಡೆಗೂ ಟಿಕೆಟ್ ನೀಡದೇ ಇರುವುದು ನಮ್ಮನ್ನು ಜಾಗೃತಗೊಳಿಸಿದೆ. ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಮ್ಮ ಸಮಾಜದ ಕನಿಷ್ಠ 40 ಆಕಾಂಕ್ಷಿಗಳನ್ನ ಗುರುತಿಸಿ, ಗೆಲ್ಲುವಂತಹ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಮೂರು ಪಕ್ಷಗಳ ಮುಂದೆ ಬೇಡಿಕೆ ಇಟ್ಟರು.
ತನ್ನದೇ ರಾಜಕೀಯ ಹಿನ್ನೆಲೆ ಹೊಂದಿರುವ ಸ್ವಾತಂತ್ರ್ಯ ಸಂದರ್ಭದಲ್ಲಿ 1951ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಕೊಲ್ಲೂರು ಮಲ್ಲಪ್ಪ ಅವರು ಸುರಪುರ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗುವ ಮೂಲಕ ಕುರುಬ ಸಮುದಾಯವನ್ನು ಪ್ರತಿನಿಧಿಸಿದರು. ಅಲ್ಲಿಂದೀಚೆಗೆ ಮದ್ರಾಸ್ ಪ್ರಾಂತ್ಯದಲ್ಲಿ ನಾಗನಗೌಡ, ಟಿ. ಮರಿಯಪ್ಪ, ವೈ. ರಾಮಚಂದ್ರ, ನಂತರ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ಒಂದು ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತನಕ ಹಲವು ಮಂದಿ ರಾಜಕೀಯ ನೇತಾರರು ಕುರುಬ ಸಮುದಾಯದ ಪ್ರಾತಿನಿಧ್ಯ ವಹಿಸಿ, ರಾಜ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. 1952 ರಿಂದ 2018ರ ವರೆಗೆ 15 ವಿಧಾನಸಭಾ ಚುನಾವಣೆ ಹಾಗೂ ಎರಡು ಉಪಚುನಾವಣೆಗಳಲ್ಲಿ ಸಮಾಜದ ನಾಯಕರು ವಿಧಾನಸಭೆ ಪ್ರವೇಶಿಸಿದ್ದಾರೆ ಎಂದು ಪದಾಧಿಕಾರಿಗಳು ಹೇಳಿದರು.

ಅಂದಾಜಿನಂತೆ ಕುರುಬ ಸಮುದಾಯಕ್ಕೆ ಎಲ್. ಜಿ. ಹಾವನೂರು ವರದಿಯಂತೆ ರಾಜಕೀಯ ಪಕ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ರಾಜಕೀಯ ನಾಯಕರು ತಮ್ಮ ವರ್ಚಸ್ಸಿನಿಂದಲೇ ಗೆದ್ದು ಬಂದವರಾಗಿದ್ದಾರೆ. ಉಳಿದವರು ಗೆಲ್ಲಲು ಶಕ್ತರಾಗಿದ್ದರೂ ಟಿಕೆಟ್ ವಂಚಿತರಾಗಿ ರಾಜಕೀಯವಾಗಿ ಸ್ಥಾನಮಾನ ಕಳೆದುಕೊಳ್ಳುವಂತಾಗಿದೆ. ಕುರುಬ ಸಮಾಜದ ಮತದಾರರು ರಾಜ್ಯಾದ್ಯಂತ ಹರಡಿರುವುದರಿಂದ 2023ರ ಚುನಾವಣೆಯಲ್ಲಿ ಈ ಹಿಂದಿನಂತೆ ಅನ್ಯಾಯ ಮುಂದುವರಿಯಬಾರದು ಎಂದು ಒತ್ತಾಯಿಸಿದರು.
ಕುರುಬ ಸಮುದಾಯದಿಂದ 2008ರಲ್ಲಿ ಸಿದ್ದರಾಮಯ್ಯ ಸೇರಿ ಒಟ್ಟು 6 ಮಂದಿ ಶಾಸಕರಿದ್ದರು. 2013ರಲ್ಲಿ 14 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ 12 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕಾಂಗ್ರೆಸ್‌ನ 8 ಮಂದಿ, ಒಬ್ಬರು ಬಿಜೆಪಿ ಮತ್ತು ಇಬ್ಬರು ಜೆಡಿಎಸ್‌ನಿಂದ ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ಪಕ್ಷದಿಂದ 11 ಮಂದಿ, ಬಿಜೆಪಿ ಪಕ್ಷದಿಂದ 5 ಮಂದಿಗೆ ಟಿಕೆಟ್ ನೀಡಿದ್ದು, ಅದರಲ್ಲೂ ಕುರುಬರಿಗೆ ಅನ್ಯಾಯವಾಗಿದೆ ಎಂದು ಸಂಘ ಆರೋಪಿಸಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆಸಿದ ಜಾತಿ ಗಣತಿ ಆಧಾರದಲ್ಲಿ ಕುರುಬರ ಸಂಖ್ಯೆಗೆ ಅನುಗುಣವಾಗಿ ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಕನಿಷ್ಠ 40 ಮಂದಿಗೆ ಟಿಕೆಟ್ ನೀಡಬೇಕು ಎಂದು ಪಕ್ಷಾತೀತವಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘವು ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರನ್ನು ಒತ್ತಾಯಿಸಿದೆ.
ಕುರುಬ ಮತಗಳ ಮೇಲೆ ಕಣ್ಣು; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡುವ ಮೂಲಕ ಕುರುಬ ಸಮುದಾಯದ ಮತಗಳನ್ನು ಸೆಳೆಯಲು ಆರಂಭಿಸಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡು ಈ ಬಾರಿಯ ಚುನಾವಣೆಯ ಸಿದ್ಧತೆಯನ್ನು ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರಿಗೆ ಸಮಾಜದ ಅಪಾರ ಬೆಂಬಲವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಿಜೆಪಿ ಕೆ. ಎಸ್. ಈಶ್ವರಪ್ಪ ಮತ್ತು ಇತರ ನಾಯಕರ ಮೂಲಕ ಸಮುದಾಯದ ಮತಗಳನ್ನು ಸೆಳೆಯಲು ಹೊರಟಿದೆ. ಬಿಜೆಪಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಾಂಗ್ರೆಸ್ ಸೇರುವ ಸುದ್ದಿ ಹಬ್ಬಿದೆ. ಅವರು ಪಕ್ಷ ಸೇರಿದರೆ ಬಿಜೆಪಿಗೆ ಕುರುಬ ಸಮುದಾಯದ ಮತ ಸೆಳೆಯಲು ಅಲ್ಪ ಹಿನ್ನಡೆಯೂ ಆಗಬಹುದು ಎಂದು ಅಂದಾಜಿಸಲಾಗಿದೆ. ಹಲವು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಕುರುಬ ಸಮುದಾಯದ ಮತಬ್ಯಾಂಕ್ ಹೊಂದಿವೆ.












Click it and Unblock the Notifications