ಹಾಲಾಡಿ ಬಳಿ ಬಸ್ ಪಲ್ಟಿ, ಒಂದು ಸಾವು
ಉಡುಪಿ, ಜೂ. 19 : ಖಾಸಗಿ ಬಸ್ಸೊಂದು ಹಾಲಾಡಿಯ ಮರ್ಲಚಿಕ್ಕು ದೇವಾಲಯದ ಬಳಿ ಹೊಂಡಕ್ಕೆ ಉರುಳಿಬಿದ್ದಿದ್ದರಿಂದ ಓರ್ವ ಯುವಕ ಮೃತಪಟ್ಟು, ಅನೇಕರು ಗಾಯಗೊಂಡ ಘಟನೆ ನಡೆದಿದೆ. ಸಿದ್ದಾಪುರದಿಂದ ಹಾಲಾಡಿ ಮಾರ್ಗವಾಗಿ ಬಸ್ ಉಡುಪಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಬುಧವಾರ ಬೆಳಗ್ಗೆ ಮರ್ಲಚಿಕ್ಕು ದೇವಸ್ಥಾನದ ಬಳಿ ವೇಗವಾಗಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಸುಮಾರು 25 ಅಡಿ ಆಳದ ಹೊಂಡಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ಬಸ್ಸಿನಲ್ಲಿದ್ದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿವೆ. ಮೃತಪಟ್ಟ ವ್ಯಕ್ತಿಯನ್ನು ಶಂಕರನಾರಾಯಣ ಸೌಡ ನಿವಾಸಿ ಸುಮಂತ ಕೊಠಾರಿ (19) ಎಂದು ಗುರುತಿಸಲಾಗಿದೆ.

ಸಿದ್ದಾಪುರದಿಂದ ಬೆಳಗ್ಗೆ 6.30ಕ್ಕೆ ಹೊರಟಿದ್ದ ಬಸ್ಸಿನಲ್ಲಿ ಸುಮಾರು 18 ಪ್ರಯಾಣಿಕರಿದ್ದರು. ಗಾಯಗೊಂಡವರನ್ನು ಹಾಲಾಡಿ, ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಬಸ್ಸಿನ ಚಾಲಕ ಶಂಕರ್ (22), ನಿರ್ವಾಹಕ ಕಾಶೀನಾಥ್, ಶಂಕರನಾರಾಯಣದ ನಿವಾಸಿಗಳಾದ ನಾಗೇಂದ್ರ (36), ಶ್ರೀಕರ ಗೌಡ (22), ಶ್ಯಾಮ (40), ಪದ್ಮನಾಭ ಶೆಟ್ಟಿಗಾರ್ (31) ಎಂದು ಗುರುತಿಸಲಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯರ ಸಮಯ ಪ್ರಜ್ಞೆ : ಅಪಘಾತ ಸಂಭವಿದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ಬಸ್ಸಿನಲ್ಲಿ ಸಿಕ್ಕಿಕೊಂಡ ಪ್ರಯಾಣಿಕರನ್ನು ರಕ್ಷಿಸಿದರ. ಇದರಿಂದಾಗಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸೇರಿಸಲು ಸಹಾಯಕವಾಯಿತು. ಅಪಘಾತದಲ್ಲಿ ಮೃತಪಟ್ಟ ಸುಮಂತ ಪ್ರತಿ ದಿನ ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಬುಧವಾರ ಅವರು ಬರುವ ವೇಳೆಗೆ ಬಸ್ಸು ಹೊರಟಿತ್ತು. ಅಂದು ಓಡಿಬಂದು ಅವರು ಬಸ್ಸು ಹತ್ತಿದ್ದರು. ನಂತರ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.












Click it and Unblock the Notifications