ದಸರಾ; ಮುಜರಾಯಿ ದೇವಾಲಯಗಳಲ್ಲಿ ಅ. 19ರಂದು ಕುಂಕುಮಾರ್ಚನೆಗೆ ಸುತ್ತೋಲೆ
ಬೆಂಗಳೂರು, ಅಕ್ಟೋಬರ್ 17: ದಸರಾ ಹಬ್ಬ 2023 ಆರಂಭವಾಗಿದೆ. ದೇವಾಲಯಗಳಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ನಡೆಯುತ್ತಿವೆ. ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಸರ್ಕಾರ ದಸರಾ ಪ್ರಯುಕ್ತ ಅಕ್ಟೋಬರ್ 19ರಂದು ಕುಂಕುಮಾರ್ಚನೆ ನಡೆಸಲು ಸುತ್ತೋಲೆ ಹೊರಡಿಸಿದೆ.
ಈ ಕುರಿತು ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಲ್ಲಾ ಉಪ ವಿಭಾಗಗಳ ಉಪವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ಕಂದಾಯ ತಹಸೀಲ್ದಾರ್‌ಗಳು, ಸಂಬಂಧಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು/ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು/ ಆಡಳಿತಾಧಿಕಾರಿಗಳಿಗೆ ಸುತ್ತೋಲೆ ಕಳಿಸಲಾಗಿದೆ.

ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಸುತ್ತೋಲೆ ದಿನಾಂಕ 19/10/2023ರಂದು ಗುರುವಾರ ನವರಾತ್ರಿ ಸಮಯದಲ್ಲಿ ಲಲಿತಾ ಪಂಚಮಿಯಂದು ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಈ ಸುತ್ತೋಲೆಯಲ್ಲಿ ದಿನಾಂಕ 28/09/2022ರ ಸುತ್ತೋಲೆಯನ್ನು ಉಲ್ಲೇಖ ಮಾಡಲಾಗಿದೆ.
ಸುತ್ತೋಲೆಯ ವಿವರಗಳು; ಪ್ರತಿ ವರ್ಷದ ಆಶ್ವಯುಜ ಮಾಸದ ಮೊದಲ ದಿನ ಅಂದರೆ ಪಾಡ್ಯದಿಂದ ನವಮಿಯವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ಹಿಂದಿನಿಂದಲೂ
ಆರಾಧಿಸುವುದು ಪೂಜಿಸುವುದು ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುತ್ತಿರುವ ಆಚರಣೆಯಾಗಿರುತ್ತದೆ ಎಂದು ಹೇಳಿದೆ.
ಅದರಂತೆ ದಿನಾಂಕ 19/10/2023ರ ಗುರುವಾರ ಲಲಿತಾ ಪಂಚಮಿ ವಿಶೇಷ ದಿನವಾಗಿರುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಉತ್ತಮ ರೀತಿಯಲ್ಲಿ ಮಳೆಯಾಗಿ, ಸಮೃದ್ಧವಾಗಿ ಬೆಳೆಗಳು ಬರಲೆಂದು ಹಾಗೂ ಸಸ್ಯರಾಶಿಗಳು ಸಮೃದ್ಧಿಯಾಗಿ ಸಕಲರಿಗೂ ಒಳಿತಾಗಲಿ ಎಂದು ಸಂಕಲ್ಪಿಸಿ ಪ್ರಾರ್ಥಿಸಬೇಕು ಎಂದು ವಿವರಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸಬೇಕು. ದಿನಾಂಕ 19/10/2023ರಂದು ಸಾಮೂಹಿಕ ಕುಂಕುಮಾರ್ಚನೆಯನ್ನು ಕಾರಣಾಂತರಗಳಿಂದ ನಡೆಸಲು ಸಾಧ್ಯವಾಗದಿದ್ದಲ್ಲಿ ದಿನಾಂಕ 22/10/2003ರ ಭಾನುವಾರ ದುರ್ಗಾಷ್ಟಮಿಯಂದು ಈ ಕಾರ್ಯಕ್ರಮವನ್ನು ನಡೆಸುಬೇಕು ಎಂದು ತಿಳಿಸಲಾಗಿದೆ.
ಈ ಕುರಿತು ಭಕ್ತರು, ಸಾರ್ವಜನಿಕರ ಮಾಹಿತಿಗಾಗಿ ದೇವಾಲಯಗಳ ಸೂಚನಾ ಫಲಕಗಳಲ್ಲಿ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಈ ವಿಶೇಷ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಅವರುಗಳ ಸಹಕಾರ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ; ಕರ್ನಾಟಕದಲ್ಲಿ ಈ ಬಾರಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟು ಬರ ಪರಿಸ್ಥಿತಿ ಉಂಟಾಗಿದೆ. ಒಮ್ಮೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತವೆಂದು ಸೇರಿ ಒಟ್ಟು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು.
ಈ ಪೈಕಿ 22 ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳು ನೀಡಿರುವ ವರದಿಯನ್ವಯ 11 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 11 ಸಾಧಾರಣ ಬರಪೀಡಿತ ತಾಲೂಕುಗಳೆಂದು ನಿರ್ಧರಿಸಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ - 2020ರ ಮಾರ್ಗಸೂಚಿಯಂತೆ 189 ತೀವ್ರ ಬರಪೀಡಿತ ತಾಲೂಕು ಹಾಗೂ 27 ಸಾಧಾರಣ ಬರಪೀಡಿತ ತಾಲೂಕುಗಳು ಒಳಗೊಂಡಂತೆ ಒಟ್ಟು 216 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಭಾನುವಾರ ನಾಡಹಬ್ಬ ಮೈಸೂರು ದಸರಾ 2023ಕ್ಕೆ ಚಾಲನೆ ನೀಡಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು" ಎಂದು ಹೇಳಿದ್ದರು.












Click it and Unblock the Notifications