ಕಾಂಗ್ರೆಸ್ ಪರ ಕುಮಾರಸ್ವಾಮಿ ಪ್ರಚಾರ ಅನುಮಾನ, ಕಾರಣ ಏನು?
Recommended Video

ಬೆಂಗಳೂರು, ಅಕ್ಟೋಬರ್ 27: ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಎರಡೂ ಪಕ್ಷದ ಅಭ್ಯರ್ಥಿಗಳ ಪರ ಒಟ್ಟಾಗಿ ಪ್ರಚಾರ ಮಾಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಆದರೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುವುದು ಅನುಮಾನ ಎನ್ನಲಾಗಿದೆ.
ಈಗಾಗಲೇ ಮಂಡ್ಯದಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಅದು ಮುಗಿದ ನಂತರ ಕೆಲವು ದಿನ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲಿದ್ದಾರೆ.
ಶಿವಮೊಗ್ಗ ಪ್ರಚಾರದ ನಂತರ ಮೈಸೂರಿಗೆ ಬರಲಿರುವ ಕುಮಾರಸ್ವಾಮಿ ಆ ನಂತರ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರ ಪರ ಪ್ರಚಾರ ಮಾಡಲಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕುಮಾರಸ್ವಾಮಿ ಪ್ರಚಾರ ಮಾಡುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಕಾರಣ ಏನು?
ಸರ್ಕಾರದ ಕಾರ್ಯಕ್ರಮಗಳ ಜೊತೆ-ಜೊತೆಗೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿರುವ ಕಾರಣ ಕುಮಾರಸ್ವಾಮಿ ಅವರು ಕೇವಲ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರ ಮಾತ್ರವೇ ಪ್ರಚಾರ ನಡೆಸುತ್ತಾರೆ ಎನ್ನಲಾಗಿದೆ.

ಕಾಂಗ್ರೆಸ್ ಪರ ದೇವೇಗೌಡ ಪ್ರಚಾರ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಜಮಖಂಡಿ ಮತ್ತು ಶಿವಮೊಗ್ಗದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪ್ರಚಾರ ಮಾಡುತ್ತಾರೆ ಎನ್ನಲಾಗಿದೆ. ಹಾಗಾಗಿ ಈ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಅವರು ತಲೆ ಹಾಕುತ್ತಿಲ್ಲ.

ರಾಮನಗರಕ್ಕೆ ಬರದ ಕಾರಣ ಸಿಟ್ಟು?
ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರವನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಮಾಡಲಿದ್ದಾರೆ ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಅವರು ಜಂಟಿ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಆದರೆ ಅವರು ಸಿಎಂ ಮಡದಿ ಸ್ಪರ್ಧಿಸಿರುವ ರಾಮನಗರಕ್ಕೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದೇ ಅಸಮಾಧಾನದಿಂದ ಸಿಎಂ ಸಹ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಮಾತುಗಳೂ ಇವೆ.

ಜೆಡಿಎಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಜೆಡಿಎಸ್‌ನ ಮೂರು ಜನ ಅಭ್ಯರ್ಥಿಗಳ ಪರ ಪ್ರಚಾರ ಮಾಡುವವರಿದ್ದಾರೆ. ಅಕ್ಟೋಬರ್ 31 ರಂದು ಶಿವಮೊಗ್ಗದಲ್ಲಿ ಭಾರಿ ಜಂಟಿ ಸಮಾವೇಶದಲ್ಲಿ ಅವರು ದೇವೇಗೌಡರೊಂದಿಗೆ ಭಾಗವಹಿಸಲಿದ್ದಾರೆ. ಮಂಡ್ಯದಲ್ಲಿ ಇಂದು ಅಥವಾ ನಾಳೆ ಭಾಗವಹಿಸಲಿದ್ದಾರೆ. ರಾಮನಗರದಲ್ಲಿ ಅವಶ್ಯಕತೆ ಇದ್ದರೆ ಹೋಗುತ್ತೇನೆ ಎಂದು ಮೊನ್ನೆಯಷ್ಟೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.












Click it and Unblock the Notifications