Channapatna By Election: ಬಹಿರಂಗ ಪ್ರಚಾರದ ವೇದಿಕೆಯಲ್ಲೇ ಕುಮಾರಸ್ವಾಮಿ ವಿಡಿಯೋ ತೋರಿಸಿದ ಡಿ ಕೆ ಸುರೇಶ್
ಚನ್ನಪಟ್ಟಣ, ನವೆಂಬರ್ 11: ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಡಿ ಕೆ ಸುರೇಶ್ ಅವರು ಹೆಚ್ ಡಿ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆಯ ಬಗ್ಗೆ ಆಡಿದ ಮಾತಿನ ವಿಡಿಯೋವನ್ನು ಪ್ಲೇ ಮಾಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಡುವಂತೆ ಹೇಳಿದರು.
ಕುಮಾರಸ್ವಾಮಿ ಅವರು ನಿಮ್ಮ ಆಶೀರ್ವಾದದಿಂದ ಎರಡನೇ ಬಾರಿಗೆ ವಿಧಾನಸೌಧಕ್ಕೆ ಪ್ರವೇಶ ಮಾಡಿದಾಗ ಕುಮಾರಸ್ವಾಮಿ ಅವರು ಏನು ಹೇಳಿದರು? ಶಾಸಕರಾಗಿ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಜನರ ಮಧ್ಯೆ ಇರಬಾರದು, ನಿಮಗಾಗಿ ಕೆಲಸ ಮಾಡಬಾರದು. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡಿ ಕಣ್ಣೀರು ಹಾಕಿ ಮತ ಕೇಳಿದರೆ ಸಾಕು ಎಂದು ಹೇಳಿದ್ದಾರೆ. ಇದು ಈ ತಾಲೂಕಿನ ಜನತೆಗೆ ಮಾಡಿರುವ ಅಪಮಾನ. ಇಂತಹ ಧೋರಣೆ ಹೊಂದಿರುವ ಕುಟುಂಬದ ಬಗ್ಗೆ ಚನ್ನಪಟ್ಟಣದ ಮತದಾರರು ತೀರ್ಮಾನ ಮಾಡಬೇಕು. ಅವರು ಹೇಳಿದಂತೆ ಕಳೆದ 8-10 ದಿನಗಳಿಂದ ಚುನಾವಣಾ ತಂತ್ರಗಾರಿಕೆ ಮಾಡಿಕೊಂಡು ಈಗ ಬಂದಿದ್ದಾರೆ.

ಸಿದ್ದರಾಮಯ್ಯ ಅವರು ಹದಿನೈದು ದಿನಕ್ಕೊಮ್ಮೆ ಮೈಸೂರಿಗೆ ಹೋಗುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಹದಿನೈದು ದಿನಕ್ಕೊಮ್ಮೆ ಕನಕಪುರಕ್ಕೆ ಹೋಗುತ್ತಾರೆ. ಕಾರಣ ಅವರಿಗೆ ತಮ್ಮ ಮತದಾರರ ಋಣ ತೀರಿಸುವ ಬದ್ಧತೆ ಇದೆ. ಕಷ್ಟ ಸುಖ ಕೇಳುವ ಬದ್ಧತೆ ಇದೆ. ಆದರೆ ಕುಮಾರಸ್ವಾಮಿ ಅವರು ಐದು ವರ್ಷಕ್ಕೊಮ್ಮೆ ಹಣ ಹಂಚಿದರೆ ಸಾಕು ಎಂಬ ಧೋರಣೆ ಇದೆ. ಜಾತಿ ಹೆಸರಲ್ಲಿ ಕಣ್ಣೀರು ಹಾಕಿದರೆ ಸಾಕು.
ನೀವು ನಿಮ್ಮ ರಾಜಕೀಯ ಜೀವನದಲ್ಲಿ ಯಾರನ್ನು ಯಾವ ರೀತಿ ಬಳಸಿಕೊಂಡಿದ್ದೀರಿ? ಹೇಗೆ ಮೋಸ ಮಾಡಿದ್ದೀರಿ ಎಂದು ಆಲೋಚಿಸಿ. ಕುಮಾರಸ್ವಾಮಿ ಅವರು ನನ್ನ ಹೇಳಿಕೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿದ್ದೀರಿ. ಯೋಗೇಶ್ವರ್ ಹಾಗೂ ನಾನು 30 ವರ್ಷಗಳ ಹಳೇ ಸ್ನೇಹಿತರು. ಆತ ನನ್ನ ಬೈಯ್ಯುತ್ತಾನೆ. ನಾನು ಆತನಿಗೆ ಬೈಯ್ಯುತ್ತೇನೆ. ನೀವು ಯಾರನ್ನು ಬೈದಿದ್ದೀರಿ ಗೊತ್ತಾ? ನೀವು ಮತದಾರರನ್ನು ನಿಂದಿಸಿದ್ದೀರಿ. ನಮ್ಮ ವಾಗ್ವಾದ ವೈಯಕ್ತಿಕವಾದುದ್ದು. ನೀವು ಟೀಕೆ ಮಾಡಿರುವುದು ನಿಮಗೆ ಆಶೀರ್ವಾದ ಮಾಡಿರುವ ಜನರಿಗೆ. ಇದಕ್ಕೆ ನೀವು ಉತ್ತರಿಸಿ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಜನರ ಕಷ್ಟ ಕೇಳಲು ಒಂದೇ ಒಂದು ದಿನ ಬರಲಿಲ್ಲ. ಜನರ ಕಷ್ಟ ಕೇಳುವುದಿರಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲಿಲ್ಲ. ಅವರು ಸಿಎಂ ಆಗಿದ್ದಾಗ ನಿಮ್ಮ ಕಷ್ಟ ಆಲಿಸಿದ್ದಾರಾ ಎಂದು ಆತ್ಮಸಾಕ್ಷಿಯಿಂದ ಹೇಳಿ ಎಂದು ಆ ಕಾರ್ಯಕರ್ತರಲ್ಲಿ ಕೇಳಲು ಬಯಸುತ್ತೇನೆ. ಅವರ ಬಗ್ಗೆ ನಿಮಗೆ ಇಷ್ಟು ಅಂಧ ಅಭಿಮಾನ ಯಾಕೆ? ಕಾಂಗ್ರೆಸ್ ಪಕ್ಷದಿಂದ, ಡಿ.ಕೆ. ಶಿವಕುಮಾರ್, ಯೋಗೇಶ್ವರ್, ನನ್ನಿಂದ ಯಾವ ತಪ್ಪಾಗಿದೆ? ಈ ಭಾಗದ ಕೆರೆ ತುಂಬಿಸಲು ಈ ಜಿಲ್ಲೆಯ ಅಭಿವೃದ್ಧಿಗೆ ನಾವು ಶ್ರಮಿಸಿಲ್ಲವೇ? ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಯಾವ ಯೋಜನೆ ನೀಡಿದ್ದಾರೆ ಎಂದು ಪಟ್ಟಿ ಮಾಡಿ ಹೇಳಲಿ. ಕುಮಾರಸ್ವಾಮಿ ಅವರು ಈ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಧೈರ್ಯ ತುಂಬಿದ್ದಾರಾ?
ಇದ್ಯಾವುದನ್ನು ಮಾಡದೇ ಈಗ ಕ್ಷೇತ್ರಕ್ಕೆ ಬಂದು ಡಿ.ಕೆ. ಶಿವಕುಮಾರ್, ಯೋಗೇಶ್ವರ್ ಬಗ್ಗೆ ಮಾತನಾಡುತ್ತಾರೆ. ಯೋಗೇಶ್ವರ್ ಪಕ್ಷ ಬದಲಿಸುತ್ತಾರೆ ಎಂದು ಹೇಳುವ ಕುಮಾರಸ್ವಾಮಿ ಅವರೇ ನೀವು ಮಾಡುತ್ತಿರುವುದೇನು? ನಿಮ್ಮ ಹೇಳಿಕೆಗಳೇನಿದೆ? ನಿಮಗೆ ಯಾರು ಅಧಿಕಾರ ನೀಡುತ್ತಾರೋ ಅವರ ಜತೆ ಕೈ ಜೋಡಿಸುತ್ತೀರಿ. ಇದರ ಹೊರತಾಗಿ ನಿಮ್ಮ ಬಳಿ ಯಾವ ಸಿದ್ಧಾಂತವಿದೆ? ಎಂದು ಪ್ರಶ್ನಿಸಿದರು.
ನಮ್ಮ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ಬಹಿರಂಗ ಹೇಳಿಕೆ ನೀಡುತ್ತೀರಲ್ಲಾ, ನಿಮಗೆ ಈ ಯೋಜನೆಗಳು ಇಷ್ಟವಿಲ್ಲದಿದ್ದರೆ ಈ ಯೋಜನೆಗಳನ್ನು ನಿಲ್ಲಿಸಿ ಎಂದು ನೇರವಾಗಿ ಹೇಳಿ ನಿಮ್ಮ ತಾಕತ್ತು ಪ್ರದರ್ಶಿಸಿ. ನಿಮಗೆ ಆ ತಾಕತ್ತು ಇಲ್ಲ. ಯಾವ ಆಧಾರದ ಮೇಲೆ ಈ ಯೋಜನೆ ಟೀಕೆ ಮಾಡುತ್ತೀರಿ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಬಡವರ ಕಣ್ಣೀರು ಒರೆಸಿದ್ದು ತಪ್ಪಾ? ಎಂದು ಕೇಳಿದರು.
ಈ ಉಪಚುನಾವಣೆಗೆ ಬಂದಿರುವ ಕುಮಾರಸ್ವಾಮಿ ಅವರು ಎಲ್ಲಾದರೂ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ಕನಸಲ್ಲೆಲ್ಲಾ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಯೋಗೇಶ್ವರ್, ಸಿದ್ದರಾಮಯ್ಯ ಅವರದ್ದೇ ಕನವರಿಕೆ. ಇವರ ಹೊರತಾಗಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರಾ? ಯೋಗೇಶ್ವರ್ ಈ ತಾಲೂಕಿಗೆ ನೀರು ನೀಡಿದ್ದಾರೆ. ನಾವು ಈ ತಾಲೂಕಿಗೆ ವಿದ್ಯುತ್ ನೀಡಿದ್ದೇವೆ, ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ಮತ ಕೇಳುತ್ತಿದ್ದೇವೆ. ಆದರೆ ಕುಮಾರಸ್ವಾಮಿ ಅವರು ತಮ್ಮ ಕೆಲಸದ ಬಗ್ಗೆ ಚರ್ಚೆ ಮಾಡಿ ಮತ ಕೇಳುತ್ತಿದ್ದಾರಾ? ಎಂದು ಡಿ ಕೆ ಸುರೇಶ್ ಅವರು ಪ್ರಶ್ನಿಸಿದ್ದಾರೆ.












Click it and Unblock the Notifications