KSRTC; ಹಬ್ಬ, ರಜೆ ದಿನ ಕೆಲಸ ಮಾಡಿದರೆ ಹೆಚ್ಚುವರಿ ವೇತನ
ಬೆಂಗಳೂರು, ಜನವರಿ 10; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ. ಸಾರ್ವತ್ರಿಕ/ ಹಬ್ಬದ ರಜೆ ದಿನಗಳಂದು ಕರ್ತವ್ಯ ನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆ ಆದೇಶ ಹೊರಡಿಸಿದೆ.
ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹಿರಿಯ/ ವಿಭಾಗ ನಿಯಂತ್ರಣಾಧಿಕಾರಿಗಳು/ ಕಾರ್ಯ ವ್ಯವಸ್ಥಾಪಕರು ಕರಾರಸಾ ನಿಗಮ ಇವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಮುಂಬರುವ ದಿನಗಳಲ್ಲಿ ಜನದಟ್ಟಣೆ ಹೆಚ್ಚಿದ್ದು, ಪೀಕ್ ಸೀಸನ್ ಆಗಿರುವುದರಿಂದ ವಾಹನಗಳ ಕಾರ್ಯಾಚರಣೆಗೆ ಸಿಬ್ಬಂದಿಗಳ ಲಭ್ಯತೆಯ ಸಲುವಾಗಿ ಜನವರಿ 23 ರಿಂದ ಜೂನ್ 23ರವರೆಗೆ ನೌಕರರು ಆಯ್ಕೆ ಮಾಡಿಕೊಂಡಿರುವ ಸಾರ್ವತ್ರಿಕ/ ಹಬ್ಬದ ರಜಾ ದಿನಗಳಿಗೆ ಸೀಮಿತಗೊಳಿಸಿ ಸದರಿ ಸಾರ್ವತ್ರಿಕ/ ಹಬ್ಬದ ರಜೆ ದಿನದಂದು ಕರ್ತವ್ಯ ನಿರ್ವಹಿಸಿದಲ್ಲಿ ಹೆಚ್ಚುವರಿ ವೇತನ (Double, Wages) ಪಾವತಿ ಮಾಡಲು ಸೂಕ್ತಾಧಿಕಾರಿಗಳು ಮಂಜೂರಾತಿ ನೀಡಿರುತ್ತಾರೆ ಎಂದು ತಿಳಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಗೌರವ ಪೂರ್ವಕವಾಗಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು (ಸಿ&ಜಾ) ರವರ ಹಿರಿಯ/ಆಪ್ತ ಕಾರ್ಯದರ್ಶಿಗಳಿಗೆ ಮಾಹಿತಿಗಾಗಿ ಕಳುಹಿಸಿದೆ. ಇಲಾಖಾ ಮುಖ್ಯಸ್ಥರು/ ವಿಭಾಗದ ಉಸ್ತುವಾರಿ ಅಧಿಕಾರಿಗಳು, ಕರಾರಸಾ ನಿಗಮ ರವರ ಮಾಹಿತಿಗಾಗಿ ಹಾಗೂ ಮಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ.
ಹೆಚ್ಚುವರಿ ಬಸ್ ಸಂಚಾರ; ಸಾಲು-ಸಾಲು ರಜೆ, ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಜನರು ಕೆಎಸ್ಆರ್‌ಟಿಸಿ ಬಸ್ ಬಳಕೆ ಮಾಡುತ್ತಾರೆ. ಆಗ ಕೆಎಸ್ಆರ್‌ಟಿಸಿ ಸಹ ಜನರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತದೆ. ಆಗ ಚಾಲಕರು, ನಿರ್ವಾಹಕರು ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ.

ಈ ಆದೇಶದಿಂದ ನೌಕರರಿಗೆ ಕೆಎಸ್ಆರ್‌ಟಿಸಿ ಸಿಹಿಸುದ್ದಿಯನ್ನು ನೀಡಿದೆ. ಸಾರ್ವತ್ರಿಕ/ ಹಬ್ಬದ ರಜೆ ದಿನಗಳಂದು ಕರ್ತವ್ಯ ನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನವೂ ಸಿಗಲಿದೆ.
ಕೆಎಸ್‌ಆರ್‌ಟಿಸಿ ಪ್ರಸ್ತುತ ಚಾಲಕ & ನಿರ್ವಾಹಕರಾಗಿ ಕಾರ್ಯ ನಿರ್ವಹಣೆ ಮಾಡುವವರನ್ನು ನೇಮಕಾ ಮಾಡಿಕೊಳ್ಳುತ್ತಿದೆ. ದೂರದ ಮಾರ್ಗದಲ್ಲಿ ಸಂಚಾರ ನಡೆಸುವ ಬಸ್‌ಗಳಲ್ಲಿ ಒಬ್ಬರೇ ಚಾಲಕ & ನಿರ್ವಾಹಕರ ಕೆಲಸ ನಿರ್ವಹಣೆ ಮಾಡುತ್ತಾರೆ. ಹಬ್ಬ, ರಜಾ ಸಂದರ್ಭದಲ್ಲಿ ಹೆಚ್ಚುವರಿ ಬಸ್ ಓಡಿಸುವುದರಿಂದ ಅವರಿಗೆ ತೊಂದರೆ ಯಾಗುತ್ತಿತ್ತು.
ಕೆಎಸ್‌ಆರ್‌ಟಿಸಿ ನೌಕರರ ಸಂಘದ ಈ ಹಿಂದೆ ಸಭೆಗಳನ್ನು ನಡೆಸಿದಾಗ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿತ್ತು. ಇದರಲ್ಲಿ ಹಬ್ಬ/ ರಜೆ ದಿನಗಳಲ್ಲಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ಪಾವತಿ ಮಾಡಬೇಕು ಎಂಬುದು ಸಹ ಬೇಡಿಕೆ ಇಡಲಾಗಿತ್ತು.












Click it and Unblock the Notifications