ಮಹಾಶಿವರಾತ್ರಿಗೆ ಕೆಎಸ್ಆರ್ ಟಿಸಿಯಿಂದ 450 ಹೆಚ್ಚುವರಿ ಬಸ್
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ಬೆಂಗಳೂರಿನಿಂದ ಫೆ.23 ಹಾಗೂ ಫೆ.24ರಂದು 450 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು, ಫೆಬ್ರವರಿ. 21 : ಮಹಾ ಶಿವರಾತ್ರಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಮತ್ತು ಅಂತರಾಜ್ಯದ ವಿವಿಧ ಜಿಲ್ಲೆಗಳಿಗೆ ಹೆಚ್ಚುವರಿ 450 ಕೆಎಸ್ಆರ್ ಟಿಸಿ ವಿಶೇಷ ಬಸ್ ಗಳ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾಡಿದೆ.
ಫೆಬ್ರವರಿ 23ರ ಗುರುವಾರ ಮತ್ತು ಫೆ24ರ ಶುಕ್ರವಾರ ಬಸ್ಸುಗಳು ಬೆಂಗಳೂರಿನಿಂದ ಹೊರಡಲಿದ್ದು, ಫೆಬ್ರವರಿ 26ರಂದು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ವಾಪಸ್ ಆಗಲಿವೆ. ಈಶಾನ್ಯ ಮತ್ತು ವಾಯುವ್ಯ ಕರ್ನಾಟಕ ಪ್ರದೇಶಗಳಿಗೆ ಸಂಚಾರ ನಡೆಸುವ ವಿಶೇಷ ಸಾರಿಗೆ ಬಸ್ಸುಗಳು ಮೆಜೆಸ್ಟಿಕ್ ನಿಂದಲೇ ಹೊರಡಲಿವೆ ಎಂದು ಕೆಎಸ್ಆರ್ ಟಿಸಿ ಹೇಳಿದೆ.

ಮೆಜೆಸ್ಟಿಕ್ ನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ತಿರುಪತಿ, ಬೀದರ್, ಪಾವಗಡ, ಹೊಸದುರ್ಗಕ್ಕೆ ಬಸ್ಸುಗಳು ಸಂಚಾರ ನಡೆಸಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಬಸ್ಸುಗಳು ಸಂಚಾರ ನಡೆಸಲಿವೆ.
ಶಾಂತಿನಗರ ಬಸ್ ನಿಲ್ದಾಣದಿಂದ ತಮಿಳುನಾಡು, ಆಂಧ್ರಪ್ರದೇಶದ ಕಡೆಯ ವಿಶೇಷ ಬಸ್ಸುಗಳು ಸಂಚಾರ ನಡೆಸಲಿವೆ.












Click it and Unblock the Notifications