KSRTC New Bus: ಇಂದಿನಿಂದ 20 ಹೊಸ ವೊಲ್ವೋ ಸ್ಲೀಪರ್ ಬಸ್ ಕಾರ್ಯಾಚರಣೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಡಿಸೆಂಬರ್ 24: ಕರ್ನಾಟಕದ ಸಾರ್ವಜನಿಕರಿಗೆ ಸುಗಮ ಸಂಚಾರ ಸೇವೆ ಒದಗಿಸುವ ಮೂಲಕ ವಿವಿಧ ಪ್ರಶಸ್ತಿಗೆ ಭಾಜನವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ( KSRTC) 20 ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳಿಗೆ ಮಂಗಳವಾರ ಚಾಲನೆ ದೊರೆತಿದೆ. ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್ ಸೇರಿದಂತೆ ಶಾಸಕರು, ನಿಗಮದ ಅಧ್ಯಕ್ಷರು ಈ ಹೊಸ ಬಸ್‌ಗಳನ್ನು ಸಾರ್ವಜನಿಕ ಸೇವೆ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಹೊಸ 'ಅಂಬಾರಿ ಉತ್ಸವ' ವೋಲ್ವೋ -9600 ಮಾದರಿಯ 20 ಬಸ್ಸುಗಳು ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ ಓಡಿಸಲು ನಿಗಮ ಸಮ್ಮಜಾಗಿದೆ. ಅಗತ್ಯ ಸಿಬ್ಬಂದಿ ನಿಯೋಜಿಸಿದೆ.

ಕಾರ್ಯಕ್ರಮದಲ್ಲಿ ಗಣ್ಯರು, KSRTC ನಿಗಮದ ಹುಮ್ನಾಬಾದ್ ತರಬೇತಿ ಕೇಂದ್ರದಲ್ಲಿ ನಡೆಸದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ 1406 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 50 ಅಂಕಗಳಿಗೆ 50/49/48 ಅಂಕ ಪಡೆದಿರುವ 82 ಅಭ್ಯರ್ಥಿಗಳಿಗೆ ಪೈಕಿ 14 ಮಂದಿಗೆ ಚಾಲಕ ಕಂ ನಿರ್ವಾಹಕರ ಹುದ್ದೆಗೆ ತಾತ್ಕಾಲಿಕ ನಿಯೋಜನೆ ಆದೇಶ ನೀಡಲಾಯಿತು.
ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8896 ವಾಹನಗಳ ಮೂಲಕ 8063 ಅನುಸೂಚಿಗಳಿಂದ 28.76 ಲಕ್ಷ ಕಿ.ಮೀ ಕ್ರಮಿಸಿ 35.43 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ.
5800 ಹೊಸ ಬಸ್ ಪೈಕಿ 4301 ಬಸ್ ಆಗಮನ
ಕರ್ನಾಟಕ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದೆ. ಈ ಪೈಕಿ ನಾಲ್ಕು ನಿಗಮಗಳಲ್ಲಿ ಕಳೆದ ಒಂದುವರೆ ವರ್ಷದಲ್ಲಿ 4301 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದರು.
ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ನಮ್ಮ ಸರ್ಕಾರವು ಅನುಮತಿ ನೀಡಿದೆ. ಈ ಪೈಕಿ 2144, ಚಾಲಕ ಕಂ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳಿಗೆ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. 6856 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ಇನ್ನೂ ಶಕ್ತಿ ಯೋಜನೆ ನಿಗಮಗಳ ವಾಹನಗಳಲ್ಲಿ 356.00 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ಶೂನ್ಯ ಟಿಕೇಟ್ ಮೌಲ್ಯ ರೂ. 8598.23 ಕೋಟಿಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.37 ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಮುನ್ನ ನಾಲ್ಕು ನಿಗಮಗಳ ವಾಹನಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಸ್ತುತ ಈ ಸಂಖ್ಯೆಯು 108.70 ಲಕ್ಷಗಳಿಗೆ ಹೆಚ್ಚಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1004 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ. ಸಾರಿಗೆ ಸುರಕ್ಷಾ ಅಪಘಾತ ಪರಿಹಾರ ವಿಮಾ ಯೋಜನೆಯಡಿ ಅಪಘಾತದಿಂದ ಮೃತಪಟ್ಟ 22 ಸಿಬ್ಬಂದಿಗಳ ಅವಲಂಭಿತರಿಗೆ ತಲಾ ರೂ. 1 ಕೋಟಿಯಂತೆ ಇದುವರೆಗೆ ರೂ.22 ಕೋಟಿಗಳ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ತಲಾ ರೂ.10 ಲಕ್ಷಗಳಂತೆ 81 ಸಿಬ್ಬಂದಿಗಳ ಅವಲಂಭಿತರಿಗೆ ರೂ. 8.10 ಕೋಟಿಗಳ ಪರಿಹಾರ ವಿತರಿಸಲಾಗಿದೆ.
ಸಾರಿಗೆ ವಿದ್ಯಾ ಚೇತನ: ವಿವಿಧ ಪ್ರಶಸ್ತಿ
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಕ್ಕಳಿಗೆ ವಿದ್ಯಾ ಸಹಾಯ ನಿಧಿ ಅಡಿಯಲ್ಲಿ ʼಸಾರಿಗೆ ವಿದ್ಯಾ ಚೇತನʼ ಯೋಜನೆಯಡಿ ಜಾರಿಗೊಳಿಸಿದ್ದು, ಈವರೆಗೂ 6083 ಫಲಾನುಭವಿಗಳಿಗೆ ರೂ. 3.05 ಕೋಟಿ ಸ್ಕಾಲರ್‌ಶಿಪ್ ಒದಗಿಸಲಾಗಿದೆ.
ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 112 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುತ್ತದೆ. ಈ ಮೂಲಕ ಸಾರಿಗೆ ಇಲಾಖೆಯ ಕಾರ್ಯಗಳು, ಸೇವೆ ಕುರಿತು ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ವಿವರಿಸಿದರು.












Click it and Unblock the Notifications