KSRTC ಮಹಿಳಾ ನೌಕರರಿಗೆ ಸಿಗುವ ಸೌಲಭ್ಯಗಳು ಯಾವುವು? ತಿಳಿಯಿರಿ
ಬೆಂಗಳೂರು, ಮಾರ್ಚ್ 12: ಪ್ರಸ್ತುತ ದಿನಗಳಲ್ಲಿ ಎಲ್ಲ ರಂಗಗಳಲ್ಲಿಯೂ ಮಹಿಳೆಯರು ಪ್ರವೇಶಿಸಿದ್ದಾರೆ. ಇದಕ್ಕೆ ಸಾರ್ವಜನಿಕ ಇಲಾಖೆ ಹೊರತಾಗಿಲ್ಲ. ಕರ್ನಾಟಕ ಸಾರಿಗೆ ಇಲಾಖೆ ವ್ಯಾಪ್ತಿಯ ಎಲ್ಲ ನಿಗಮಗಳಲ್ಲಿ ಮಹಿಳೆಯು ಕಾರ್ಯ ನಿರ್ವಹಿಸುತ್ತಿದ್ದಾರೆ. ಗಂಡಿನಂತೆ ಸರಿಸಮಾನವಾಗಿ ದುಡಿದು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಆ ಮಹಿಳೆಯರಿಗೆ ಸರ್ಕಾರ ಕೆಲವು ಸೌಲಭ್ಯಗಳನ್ನು ಒದಗಿಸುತ್ತಿದೆ.
ಸಾರಿಗೆ ಇಲಾಖೆಯಲ್ಲಿ ಅದರಲ್ಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ದುಡಿಯುವ ಮಹಿಳಾ ನೌಕರರಿಗೆ ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳನ್ನು ಸಿಗುತ್ತಿವೆ ಎಂಬುದು ನಿಮಗೆ ಗೊತ್ತೆ?. ಈ ಕುರಿತು ನಿಗಮದ ಕಚೇರಿಯಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ಮಹತ್ವ ಮಾಹಿತಿಯನ್ನು ನಿಗಮವು ಹಂಚಿಕೊಂಡಿದೆ. ಅದರ ಪೂರ್ಣ ಮಾಹಿತಿ ಇಲ್ಲಿದೆ.

3068 ಮಹಿಳಾ ಸಿಬ್ಬಂದಿ ಕಾರ್ಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಒಟ್ಟಾರೆ 3068 ಮಹಿಳಾ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಚಾಲಕ ಕಂ ನಿರ್ವಾಹಕರು 26, ನಿರ್ವಾಹಕರು 700, ತಾಂತ್ರಿಕ ಸಿಬ್ಬಂದಿಗಳು 971, ಭದ್ರತಾ ಸಿಬ್ಬಂದಿಗಳು-84, ಆಡಳಿತ ಸಿಬ್ಬಂದಿಗಳು-1210 ಹಾಗೂ ಅಧಿಕಾರಿಗಳು-77 ಮಂದಿ ಮಹಿಳೆಯರಿದ್ದಾರೆ.
ಪುರುಷ ಕಾರ್ಮಿಕರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ನಿಗಮದಿಂದ ಎಲ್ಲಾ ರೀತಿಯಲ್ಲಿಯೂ ಅವರನ್ನು ಗೌರವಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಅವರಿಗಾಗಿ ರೂಪಿಸಲಾದ ಕಲ್ಯಾಣ ಕಾರ್ಯಕ್ರಮದ ಪಟ್ಟಿ ಈ ಕೆಳಗಿನಂತಿದೆ.
KSRTC ಮಹಿಳಾ ನೌಕರರ ಸೌಲಭ್ಯಗಳ ಪಟ್ಟಿ
* ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯಲು Sexual Harassment of Women at Workplace (Prevention, Prohibition & Redressal) Act-2013 ರನ್ವಯ ಮಹಿಳಾ ನೌಕರರ ಆಂತರಿಕ ದೂರು ಸಮಿತಿ ರಚಿಸಲಾಗಿದೆ. ಲಿಂಗ ಸಂವೇದಿ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
* ಗರ್ಭಿಣಿ ಮಹಿಳಾ ನಿರ್ವಾಹಕಿ/ ಚಾಲಕಿ/ ಚಾಲಕ-ಕಂ-ನಿರ್ವಾಹಕಿ/ ತಾಂತ್ರಿಕ ಸಿಬ್ಬಂದಿ/ಮಾರ್ಗ ತನಿಖಾ ಸಿಬ್ಬಂದಿಗಳು ಅವರ ಹುದ್ದೆಯ ಕರ್ತವ್ಯ ನಿರ್ವಹಿಸುವುದು ಮಗುವಿನ ಮತ್ತು ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ಸೂಕ್ತವಲ್ಲದ ಕಾರಣ 3, 4, 5 ಮತ್ತು 6ನೇ ತಿಂಗಳ ಅವಧಿಯಲ್ಲಿ ಅವರನ್ನು ಲಘು ಕರ್ತವ್ಯದ ಮೇಲೆ ನಿಯೋಜಿಸಲಾಗುತ್ತಿದೆ.
* ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆಯನ್ನು ನೀಡಲಾಗುತ್ತಿದೆ.
* ಸರ್ಕಾರದ ಮಾದರಿಯಲ್ಲಿ ಕಿರಿಯ ಮಗುವಿಗೆ 18 ವರ್ಷ ತಲುಪುವವರೆಗೆ ಒಟ್ಟು ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ (180 ದಿನಗಳ) 'ಶಿಶುಪಾಲನಾ ರಜೆ' ಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
* ಮಹಿಳಾ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಗುವಿಗೆ ಮೂರು ವರ್ಷ ತುಂಬುವವರೆಗೆ ರೂ.1250/- ಗಳನ್ನು ಮಾಸಿಕ ಶಿಶು ಪಾಲನಾ ಭತ್ಯೆ ನೀಡಲಾಗುತ್ತಿದೆ.
* ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ನೌಕರರಿಗೆ ಒಟ್ಟು 730 ದಿವಸಗಳ 'ಶಿಶು ಪಾಲನಾ ರಜೆ'ಯನ್ನು ವೇತನ ಸಹಿತವಾಗಿ ಒದಗಿಸಲಾಗುತ್ತಿದೆ.
* ಇನ್ನೂ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಬಹುತೇಕ ಈ ವ್ಯವಸ್ಥೆಗಳು ಕೆಎಸ್‌ಆರ್‌ಟಿಸಿ ಸೇರಿದಮತೆ ಎಲ್ಲ ನಿಗಮಗಳ ಮಹಿಳಾ ನೌಕರರಿಗೂ ಇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

41 ಮಹಿಳಾ ಸಿಬ್ಬಂದಿಗೆ ಗೌರವ
ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಪೈಕಿ ಒಟ್ಟು 41 ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಏಕಾಂಗಿಯಾಗ 03 ಬಾವಿ ತೆಗೆದ ಸಾಧಕಿಗೆ ಸನ್ಮಾನ
ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಾಸಿಯಾದ ಗೌರಿ ನಾಯಕ್ ಅವರನ್ನು ಗೌರವಿಸಿ, ಗೌರವಧನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇವರು ತಮಗೆ ಜೀವನಾಧಾರವಾಗಿದ್ದ ತೋಟಕ್ಕೆ ನೀರಿಲ್ಲದ ಸಮಯದಲ್ಲಿ ಎದೆಗುಂದದ ಛಲದಿಂದ ತಮ್ಮ ತೋಟದಲ್ಲಿ 75 ಅಡಿ ಆಳದ ಬಾವಿ ತೆಗೆದು ನೀರಿನ ಆಧಾರ ಮಾಡಿಕೊಂಡಿದ್ದಾರೆ. ಇದುವರೆಗೂ ಮೂರು ಬಾವಿಯನ್ನು ಏಕಾಂಗಿಯಾಗಿ ತೆಗೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಇವರು ಮೂರನೇ ಭಾವಿಯನ್ನು ಅಂಗನವಾಡಿಯ ಮಕ್ಕಳ ಉಪಯೋಗಕ್ಕಾಗಿ ತೆರೆದಿದ್ದಾರೆ. ಈ ಮೂಲಕ ಒಬ್ಬಂಟಿಯಾಗಿ ಮಹಿಳೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ಈ ಬಾವಿಯಿಂದ ಅಂಗನವಾಡಿ ಆವರಣದಲ್ಲಿ ಶಾಲೆಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಮನೆಗಳಿಗೂ ಸಹ ನೀರು ದೊರಕಿಸುವಂತೆ ಮಾಡಿದ್ದಾರೆಂದು ಅವರು ಕಾರ್ಯವನ್ನು ತಿಳಿಸಲಾಯಿತು.
ಮಹಿಳಾ ಕಾರ್ಯಸಾಧನೆ ಅಭಿನಂದಿಸಿದ ಸಚಿವ
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಗೌರವಿಸಿ ಮಾತನಾಡಿದ, ಸಚಿವ ರಾಮಲಿಂಗಾ ರೆಡ್ಡಿಯವರು, ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ನಿಗಮದ ತಾಂತ್ರಿಕ ಸಿಬ್ಬಂದಿಗಳು ಪುರುಷ ಸಿಬ್ಬಂದಿಗಳಷ್ಟೇ ಹೆಚ್ಚಿನ ಕಾರ್ಯಕ್ಷಮತೆಯಿಂದ ಶ್ರಮಿಸುತ್ತಿದ್ದಾರೆ.
ಮಹಿಳೆಯರು ವಾಹನಗಳ ಪುನಃಶ್ಚೇತನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ. ಪುರುಷರಂತೆ ಸಮಾನವಾಗಿ ದುಡಿಯುತ್ತಿರುವ ಈ ಮಹಿಳಾ ನೌಕರರಿಗೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ. ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಹಿಳಾ ಸಮಾನತೆ, ಸಬಲೀಕರಣ ಎಂಬುದನ್ನು ನಮ್ಮಲ್ಲಿ ಅಕ್ಷರಶಃ ಕಾಣಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಸನ್ಮಾನಿತರಾದ ಗೌರಿ ನಾಯಕ್ ಅವರ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿ, ಇದೇ ರೀತಿಯಲ್ಲಿ ಅವರು ಕಾರ್ಯವನ್ನು ಮುಂದುವರೆಸಲು ದೇವರು ಶಕ್ತಿ ಮತ್ತು ಆಯಸ್ಸನ್ನು ನೀಡುವಂತೆ ಹಾರೈಸಿದರು. ಅಂಗನವಾಡಿ ಆವರಣದಲ್ಲಿ ಅವರು ತೆರೆದಿರುವ ಬಾವಿಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುತ್ತಲು ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನಿಗಮದ ವತಿಯಿಂದ ರೂ.1 ಲಕ್ಷವನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿದೇಶಕಿ ಡಾ.ನಂದಿನಿ ದೇವಿ, ನಿಗಮದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಡಾ. ಲತಾ ಟಿ.ಎಸ್ ಅವರು ಉಪಸ್ಥಿತರಿದ್ದರು.












Click it and Unblock the Notifications