KSRTC: ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆ, ನೌಕರರ ವಂತಿಗೆ ಎಷ್ಟು ಕಡಿತ
ಬೆಂಗಳೂರು, ಜನವರಿ 13: ಕರ್ನಾಟಕ ಸರ್ಕಾರ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಯೋಜನೆಯನ್ನು ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 'ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಗೆ ಕಳೆದ ವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯ ವಿವರಗಳನ್ನು ನೀಡಲಾಗಿದ್ದು, ನೌಕರರು/ ಅಧಿಕಾರಿಗಳು ಎಷ್ಟು ವಂತಿಗೆ ಪಾವತಿಸಬೇಕು? ಎಂದು ಮಾಹಿತಿ ನೀಡಲಾಗಿದೆ.
'ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಯಡಿ ಅಧಿಕಾರಿಗಳು/ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಖಾಸಗಿ ರಸ್ತೆ ಅಪಘಾತ ಹಾಗೂ ಇತರೇ ಅಪಘಾತಗಳಲ್ಲಿ ಗಾಯಗೊಂಡ ಪ್ರಕರಣಗಳಲ್ಲಿಯೂ ನಿಗಮದ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಷರತ್ತಿಗೆ ಒಳಪಟ್ಟು ಅವಕಾಶ ಕಲ್ಪಿಸಲಾಗಿದೆ.

* ರಸ್ತೆ ಅಪಘಾತ ಪ್ರಕರಣಗಳಲ್ಲಿ ವೈದ್ಯಕೀಯ ವೆಚ್ಚದ ಕ್ಲೈಮ್ ಅನ್ನು ನ್ಯಾಯಾಲಯದಿಂದ/ ವಾಹನ ವಿಮಾ ಸಂಸ್ಥೆಯಿಂದ ಪಡೆಯಬೇಕಿರುತ್ತದೆ. ಆದ್ದರಿಂದ FIR ದಾಖಲಿಸುವುದು ಹಾಗೂ ನ್ಯಾಯಾಲಯದಲ್ಲಿ MVC ಪ್ರಕರಣವನ್ನು ದಾಖಲಿಸಿ ಪರಿಹಾರ ಮೊತ್ತವನ್ನು ಪಡೆಯುವುದು ಅವಶ್ಯವಿರುತ್ತದೆ.
* ಈ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಿಂದ ವಿಮಾ ಸಂಸ್ಥೆಯಿಂದ ಅಥವಾ ಇತರೇ ಯಾವುದೇ ಮೂಲದಿಂದ ಪರಿಹಾರ ರೂಪದಲ್ಲಿ ಚಿಕಿತ್ಸೆಯ ವೆಚ್ಚದ ಮರುಪಾವತಿ ಪಡೆದಿದ್ದಲ್ಲಿ ಅದನ್ನು ಘೋಷಿಸತಕ್ಕದ್ದು.
* ಈ ರೀತಿ ಪಡೆದ ಪರಿಹಾರ ಮೊತ್ತದಿಂದ ನಿಗಮದಿಂದ ಪಾವತಿಸಿರುವ ವೈದ್ಯಕೀಯ ವೆಚ್ಚವನ್ನು ನಿಗಮಕ್ಕೆ ಹಿಂಬರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
ಪತಿ/ ಪತ್ನಿ ಪ್ರಕರಣಗಳು: ಪತಿ/ ಪತ್ನಿ ಇಬ್ಬರೂ ನಿಗಮದ ನೌಕರರಾಗಿದ್ದಲ್ಲಿ ಇಬ್ಬರೂ ಸಹ ಆರೋಗ್ಯ ಕಾರ್ಡ್ ಅನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಒಬ್ಬರು ಮಾತ್ರ ತಮ್ಮ ಅವಲಂಬಿತ ಮಕ್ಕಳಿಗೆ ಈ ಸೌಲಭ್ಯ ಪಡೆಯಬೇಕಿರುತ್ತದೆ. ಉಳಿದಂತೆ ಪತಿ/ ಪತ್ನಿ ಇಬ್ಬರೂ ನೌಕರರು ಅವರವರ ಅವಲಂಬಿತ ತಂದೆ ಮತ್ತು ತಾಯಿಗೆ ಈ ಸೌಲಭ್ಯ ಪಡೆಯಲು ಅವಕಾಶಗಳಿರುತ್ತವೆ.
ನಿಗಮದ ನೌಕರರ ಪತಿ/ ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ಯಾವುದೇ ವೈದ್ಯಕೀಯ ಸೌಲಭ್ಯ ಪಡೆಯದಿರುವ ಬಗ್ಗೆ ಸಕ್ಷಮ ಪ್ರಾಧಿಕಾರಿಯಿಂದ ವರ್ಷಕ್ಕೊಮ್ಮೆ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಿದಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ.
ಎಷ್ಟು ವಂತಿಕೆ ಪಾವತಿಸಬೇಕು?; ಈ ಯೋಜನೆಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು/ ನೌಕರರಿಂದ ಮಾಸಿಕ ರೂ. 650 ವಂತಿಕೆಯನ್ನು ನಿಗದಿಪಡಿಲಾಗಿದೆ.
ಅದರಂತೆ ಎಲ್ಲಾ ಅಧಿಕಾರಿ/ ನೌಕರರಿಂದಲೂ ಜನವರಿ-2025 ಮಾಹೆಯಲ್ಲಿ ಪಾವತಿಯಾಗುವ ಡಿಸೆಂಬರ್-2024ರ ಮಾಹೆಯ ವೇತನದಿಂದ ಮುಂದುವರೆದಂತೆ ಮಾಸಿಕ ರೂ. 650 ಗಳನ್ನು ಪ್ರತಿ ಮಾಹೆ ಕಡಿತಗೊಳಿಸುವುದು.
ಪತಿ/ ಪತ್ನಿ ಇಬ್ಬರೂ ನಿಗಮದ ನೌಕರರಾಗಿರುವ ಪ್ರಕರಣಗಳಲ್ಲಿ ಇಬ್ಬರ ವೇತನದಿಂದಲೂ ನಿಗದಿತ ಮಾಸಿಕ ವಂತಿಕೆಯನ್ನು ಕಡಿತಗೊಳಿಸುವುದು. ತರಬೇತಿ ನೌಕರರಿಗೆ ಯಾವುದೇ ವಂತಿಕೆ ಇರುವುದಿಲ್ಲ.
ನೌಕರರ ಮಾಸಿಕ ವಂತಿಕೆಯನ್ನು ರೂ.50 ರಂತೆ ಪ್ರತಿ ವರ್ಷ ಹೆಚ್ಚಿಸಿ ಪರಿಷ್ಕರಿಸುವುದು. (ಉದಾಹರಣೆಗೆ 2025ರ ಕ್ಯಾಲೆಂಡರ್ ವರ್ಷದಲ್ಲಿ ರೂ. 650, 2026 ರಲ್ಲಿ ರೂ. 650+50=700, 2027 ರೂ. 700+50=750 ರಂತೆ).
ನ್ಯಾಯಾಲಯದ ಆದೇಶದ ಮೇರೆಗೆ ಸಂಸ್ಥೆಯ ಸೇವೆಗೆ ಮರು ನೇಮಕಗೊಳ್ಳುವ ಹಾಗೂ ಅಂತರ ನಿಗಮ ವರ್ಗಾವಣೆಯ ಮೂಲಕ ಸಂಸ್ಥೆಯ ಸೇವೆಗೆ ನಿಯೋಜನೆಗೊಳ್ಳುವ ನೌಕರರು, ಕರ್ತವ್ಯಕ್ಕೆ ಹಾಜರಾಗಿ ವಂತಿಕೆ ಕಡಿತಗೊಂಡ ನಂತರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications