KSDL: ಮಾರ್ಜಕಗಳ ಮಾರಾಟದಲ್ಲಿ 40 ವರ್ಷಗಳಲ್ಲೇ ಸಾರ್ವಕಾಲಿಕ ದಾಖಲೆ ಸೃಷ್ಟಿ: ಸರ್ಕಾರ
ಬೆಂಗಳೂರು, ಜನವರಿ 02: ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯದ 'ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ' (KSDL) 2023ರ ವರ್ಷಾಂತ್ಯ ತಿಂಗಳು ಡಿಸೆಂಬರ್ ಒಂದರಲ್ಲೇ ದಾಖಲೆ ಮಟ್ಟದಲ್ಲಿ ವಹೀವಾಟು ನಡೆಸಿದೆ. ಇದು ಕಳೆದ 40 ವರ್ಷಗಳ ವಹಿವಾಟಿನಲ್ಲೇ ಅತ್ಯಧಿಕ ಮೊತ್ತದ ವ್ಯಾಪಾರ ಎಂದು ಸರ್ಕಾರ ತಿಳಿಸಿದೆ.
ಹೌದು, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ' (KSDL) ಈ ಹಿಂದಿನ ತಿಂಗಳೊಂದರಲ್ಲಿಯೇ ಬರೋಬ್ಬರಿ 123.42 ಕೋಟಿ ರೂ. ಮೊತ್ತದ ಮಾರ್ಜಕಗಳನ್ನು (ಡಿಟರ್ಜೆಂಟ್ಸ್) ಮಾರಾಟ ಮಾಡಿದೆ. ಕಳೆದ ನಾಲ್ಕು ದಶಕಗಳಲ್ಲಿ ಒಂದು ತಿಂಗಳಲ್ಲಿ ಇಷ್ಟೊಂದು ವ್ಯಾಪಾರ ವಹೀವಾಟು ನಡೆದಿಲ್ಲ. ಹೀಗಾಗಿ ಇದೊಂದು ಸಾರ್ವಕಾಲಿಕ ದಾಖಲೆ ಎಂದು ಕೆಎಸ್‌ಡಿಎಲ್ ಸಂಸ್ಥೆ ಅಧ್ಯಕ್ಷರೂ ಆದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಾಹಿತಿ ನೀಡಿದ್ದಾರೆ.

852 ಟನ್ ಮಾರ್ಜಕ ಉತ್ಪಾದಿಸಿ ದಾಖಲೆ
ಕಳೆದ ತಿಂಗಳು KSDL 852 ಟನ್ ಮಾರ್ಜಕಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಅದನ್ನೀಗ ಮುರಿದು, ವಹಿವಾಟಿನಲ್ಲೂ ವಿಕ್ರಮ ಸಾಧಿಸಲಾಗಿದೆ' ಎಂದು ಸಚಿವರು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KSDL ನಲ್ಲಿ ಇದುವರೆಗೆ ಮಾರ್ಜಕಗಳ ಉತ್ಪಾದನಾ ವಿಭಾಗದಲ್ಲಿ ಒಂದು ಪಾಳಿಯ ಕೆಲಸದ ವ್ಯವಸ್ಥೆ ಇತ್ತು. ಅದನ್ನೀಗ ಮೂರು ಪಾಳಿಗಳಿಗೆ ವಿಸ್ತರಿಸಲಾಗಿದೆ. ಜೊತೆಗೆ, ಈವರೆಗೆ ಸಂಸ್ಥೆಯಲ್ಲಿ ಮಾರ್ಜಕಗಳ ತಯಾರಿಕೆಗೆ ಕೇವಲ ಒಂದು ಯಂತ್ರ ಮಾತ್ರವಿತ್ತು. ಸರಕಾರಿ ಉದ್ದಿಮೆಗಳು ಖಾಸಗಿ ವಲಯದಂತೆಯೇ ಲಾಭ ಗಳಿಸಬೇಕೆಂಬ ಉದ್ದೇಶದಿಂದ ಈಗ ಈ ವಿಭಾಗದಲ್ಲಿ ಮೂರು ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಮಾರುಕಟ್ಟೆ ಜಾಲ ವಿಸ್ತರಣೆ
ಸಂಸ್ಥೆಯು ಮೊದಲಿನಿಂದಲೂ ಸಾಬೂನು ತಯಾರಿಕೆಗೆ ಹೆಸರುವಾಸಿಯಾಗಿದೆ. ಮಾರುಕಟ್ಟೆ ಕೂಡ ಅದರ ಸುತ್ತಲೇ ಕೇಂದ್ರೀಕೃತವಾಗಿತ್ತು. ಇತ್ತೀಚೆಗೆ ಮಾರ್ಜಕಗಳ ಮಾರಾಟಕ್ಕೂ ಹೆಚ್ಚಿನ ಗಮನ ಹರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದು ಈಗ ಫಲ ನೀಡಿದೆ. ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಮಾರ್ಜಕಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಮಾರುಕಟ್ಟೆ ಜಾಲವನ್ನು ಅಖಿಲ ಭಾರತ ಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಹಿಂದಿನ ವರ್ಷ 118 ಕೋಟಿ ರೂ. ಲಾಭ
ಹೋದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 2023-24ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಸಾಬೂನು, ಮಾರ್ಜಕ ಮತ್ತು ಕಾಸ್ಮೆಟಿಕ್ಸ್ ಉತ್ಪಾದನೆ ನಿಗದಿತ ಗುರಿಗಿಂತ ಹೆಚ್ಚಾಗಿದೆ. ಸಂಸ್ಥೆಯು ಹೋದ ಸಾಲಿನಲ್ಲಿ 118 ಕೋಟಿ ರೂ. ಲಾಭ ಗಳಿಸಿತ್ತು.
ಈ ಹಣಕಾಸು ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಸಂಸ್ಥೆಯು 1,171 ಕೋಟಿ ರೂ. ಮೊತ್ದಷ್ಟು ವಹಿವಾಟು ನಡೆಸಿದೆ. ಈ ವರ್ಷಕ್ಕೆ ಒಟ್ಟು 1,404 ಕೋಟಿ ರೂ. ವಹಿವಾಟು ನಿಗದಿ ಪಡಿಸಲಾಗಿದ್ದು, ಇದನ್ನು ಮೀರುವುದರಲ್ಲಿ ಅನುಮಾನವಿಲ್ಲ ಎಂದು ಎಂಬಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications