KRS Dam Outflow: ತಮಿಳುನಾಡಿಗೆ ಹರಿದ ಕಾವೇರಿ, ಕೆಆರ್‌ಎಸ್ ಡ್ಯಾಂ ಖಾಲಿ ಖಾಲಿ!
ತಮಿಳುನಾಡು ಸರ್ಕಾರದ ಕಿರಿಕ್ ಶುರುವಾದ ಹಿನ್ನೆಲೆ ಭಾರಿ ಪ್ರಮಾಣದ ನೀರನ್ನು KRS ಡ್ಯಾಂನಿಂದ ಹೊರ ಬಿಡಲಾಗಿದೆ. ಹೀಗೆ ಕಾವೇರಿ ನೀರು ಭಾರಿ ಪ್ರಮಾಣದಲ್ಲಿ ಕೆಆರ್‌ಎಸ್ ಜಲಾಶಯದಿಂದ ಹರಿದು ಹೋಗುತ್ತಿದ್ದು, ಡ್ಯಾಂನ ನೀರಿನ ಮಟ್ಟ ಭಾರಿ ಕುಸಿತ ಕಂಡಿದೆ. ಹಾಗಾದರೆ ಈಗ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಎಷ್ಟಿದೆ? ಇನ್ನೆಷ್ಟು ದಿನದಲ್ಲಿ ನೀರು ಖಾಲಿ ಆಗುತ್ತೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹೌದು ತಮಿಳುನಾಡು ಕಿರಿಕ್ ಶುರು ಮಾಡಿದ ಕಾರಣಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ (Tamil Nadu) ನೀರನ್ನು ಬಿಡಲಾಗುತ್ತಿದೆ. ಸುಮಾರು 8 ಸಾವಿರ ಕ್ಯೂಸೆಕ್ ನೀರನ್ನ ಅಧಿಕಾರಿಗಳು ಡ್ಯಾಂನಿಂದ ಹೊರ ಬಿಡುತ್ತಿದ್ದಾರೆ. ಅತ್ತ ನಾಲೆಗೆ ನೀರಿನ ಕೊರತೆ ಇರುವಾಗ ಕೂಡ ತಮಿಳುನಾಡಿಗೆ ಬಿಡಬೇಕಾದ ನೀರನ್ನ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೈತರಿಂದ ಭಾರಿ ಆಕ್ರೋಶ ವ್ಯಕ್ತವಾಗುವ ಮುನ್ಸೂಚನೆ ಸಿಕ್ಕಿದೆ. ಅಲ್ಲದೆ ಪ್ರತಿಭಟನೆ ಭುಗಿಲೇಳುವ ಸಾಧ್ಯತೆ ಕೂಡ ಎದುರಾಗಿದೆ.

ಖಾಲಿಯಾಗುತ್ತಿದೆ ಜೀವನದಿ ಕಾವೇರಿ
ಜೂನ್ ತಿಂಗಳಲ್ಲಿ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಬತ್ತಿ ಹೋಗುವ ಹಂತ ತಲುಪಿತ್ತು. ಆದ್ರೆ ಆ ವರುಣನ ಕೃಪೆಯಿಂದ ಜುಲೈ ತಿಂಗಳಲ್ಲಿ ಉತ್ತಮವಾಗಿ ಮಳೆ ಬಿದ್ದ ಕಾರಣ ಕೆಆರ್‌ಎಸ್ ಡ್ಯಾಂ ಒಂದಷ್ಟು ತುಂಬಿಕೊಂಡಿದೆ. ಮುಂಗಾರಿನ ಹಿನ್ನೆಲೆ ಕೆಲ ದಿನಗಳ ಹಿಂದೆ ಕೊಡಗಿನಲ್ಲಿ ಉತ್ತಮ ಮಳೆ ಬಿದ್ದಿತ್ತು. ಅಲ್ಲದೆ ಕೇರಳದ ವಯನಾಡು ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಮಟ್ಟ ಹೆಚ್ಚಾಗಿದೆ. ಆದರೆ ತಮಿಳುನಾಡು ಜಲಾಶಯಗಳಿಗೆ ರಾಜ್ಯ ಬಿಡಬೇಕಾದ ನೀರು ಇನ್ನೂ ಲಭ್ಯವಾಗಿಲ್ಲ. ಇಷ್ಟಾದರೂ ಡ್ಯಾಂನ ನೀರು ತಮಿಳುನಾಡು ಕಡೆಗೆ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂ ಖಾಲಿಯಾಗುವ ಭಯ ಶುರುವಾಗಿದೆ.
ಕಾವೇರಿ ಕೊಳ್ಳದಲ್ಲಿ ಬರದ ಛಾಯೆ
ಪರಿಸ್ಥಿತಿ ಕಠಿಣವಾದ್ರೂ ಒತ್ತಾಯದ ಕಾರಣ ತಮಿಳುನಾಡಿಗೆ ನೀರು ಹರಿಸಲಾಗಿದೆ. ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು ಜಲಾಶಯದ ಇಂದಿನ ಮಟ್ಟ 112.32 ಅಡಿ. ಒಳ ಹರಿವು 3,960 ಕ್ಯೂಸೆಕ್ ಇದ್ದು, ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾರಣ ಹೊರ ಹರಿವನ್ನ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದೀಗ 7256 ಕ್ಯುಸೆಕ್ ಹೊರಹರಿವು ಇದ್ದು ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಂಡ್ಯ ಸೇರಿದಂತೆ ಕಾವೇರಿ ನೀರನ್ನ ನಂಬಿಕೊಂಡಿರುವ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ.
ಹೆಚ್ಚುವರಿ ನೀರನ್ನು ಏನು ಮಾಡಿದ್ರು?
ಕಳೆದ ವರ್ಷವೇ ತಮಿಳುನಾಡು ಮೂಲಕ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದೆ. ಮುಂಗಾರು ಅಬ್ಬರದ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿದ್ದು, ಗಮನ ಸೆಳೆದಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೆಲ್ಲ ನೀರನ್ನ ಅಲ್ಲಿ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿ ಬೇಕು ಅಂತಾ ತಮಿಳುನಾಡು ಕಿರಿಕ್ ಶುರುಮಾಡುತ್ತಿದೆ. ಹೀಗಾಗಿ ತಮಿಳುನಾಡು ಸರ್ಕಾರದ ವರ್ತನೆಗೆ ಬೇಸರ ವ್ಯಕ್ತವಾಗುತ್ತಿದೆ.

ಒಟ್ನಲ್ಲಿ ಕಾವೇರಿ ಕೊಳ್ಳದ ಪರಿಸ್ಥಿತಿ ಭೀಕರವಾಗಿದೆ. ತಮಿಳುನಾಡು ಇದೇ ರೀತಿ ಕಿರಿಕಿರಿ ಮಾಡುತ್ತಾ ಕೂತರೆ ಕೆಆರ್‌ಎಸ್ ಕೂಡ ಖಾಲಿಯಾಗಿ, ಜನರು ಪರದಾಡು ಪರಿಸ್ಥಿತಿ ಕೂಡ ನಿರ್ಮಾಣವಾಗಲಿದೆ. ಹೀಗಾಗಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು, ಸರ್ಕಾರ ನೆರೆಯ ರಾಜ್ಯದ ಒತ್ತಡಕ್ಕೆ ಮಣಿಯಬಾರದು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ ಇದನ್ನು ತಮಿಳುನಾಡು ರಾಜಕಾರಣಿಗಳು ಅರ್ಥ ಮಾಡಿಕೊಂಡಂತೆ ಕಂಡಿಲ್ಲ. ಬೇರೆ ವಿಚಾರದಲ್ಲಿ ಒಗ್ಗಟ್ಟಿನ ಪಾಠ ಹೇಳುವ ತಮಿಳುನಾಡು, ಕನ್ನಡ ನಾಡಿನ ಕಷ್ಟ ಅರ್ಥ ಮಾಡಿಕೊಳ್ಳದೇ ಇರುವುದು ದುರಂತವೇ ಸರಿ.












Click it and Unblock the Notifications