KRS Dam: 2023ರಿಂದ ಇಲ್ಲಿವರೆಗೂ ಕಾವೇರಿಯಿಂದ ತಮಿಳುನಾಡಿಗೆ ಹರಿದ ನೀರೆಷ್ಟು?-ಅಂಕಿಅಂಶಗಳ ವಿವರ ತಿಳಿಯಿರಿ
KRS Dam: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಪ್ರಮುಖ ಜಲಾಶಯಗಳು ಬತ್ತಿಹೋಗುವ ಹಂತವನ್ನು ತಲುಪಿದ್ದು, ಇದರಿಂದ ರೈತರು, ಜನರು ಕಂಗೆಟ್ಟು ಹೋಗಿದ್ದರು. ಇದರ ನಡುವೆಯೇ ಭಾರೀ ವಿರೋಧಗಳ ನಡುವೆಯೇ ತಮಿಳುನಾಡಿಗೆ ಕಾವೇರಿಯಿಂದ ನೀರು ಹರಿಸಲಾಗಿತ್ತು. ಹಾಗಾದರೆ 2023ರಿಂದ 2024ರ ಮೇ ಅವಧಿಯಲ್ಲಿ ಎಷ್ಟು ನೀರು ಹರಿಸಲಾಗಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಮಳೆ ಕೊರತೆ ನಡುವೆಯೂ ಕಳೆದ ವರ್ಷವಿಡೀ ಪಕ್ಕದ ರಾಜ್ಯ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರು ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡುತ್ತಲೇ ಬಂದಿದ್ದು, ಇದಕ್ಕೆ ಕರ್ನಾಟಕ ಆಕ್ಷೇಪವನ್ನೂ ಸಲ್ಲಿಕೆ ಮಾಡಿತ್ತು. ಆದರೂ ನೀರು ಹರಿಸಬೇಕಾಯಿತು.

ಮುಂಗಾರು ಮಳೆ ಕೊರತೆ ನಡುವೆಯೂ 2023ರ ಜೂನ್‌ನಿಂದ 2024ರ ಮೇ ವರೆಗೆ ತಮಿಳುನಾಡಿಗೆ 81.33 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವೇಳೆ ವರ್ಷದಲ್ಲಿ ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ತಮಿಳುನಾಡಿಗೆ 177.25 ಟಿಎಂಸಿಯಡಿ ಕಾವೇರಿ ನೀರನ್ನು ಹರಿಸಬೇಕಿತ್ತು.
2022ರ ಜೂನ್‌ನಿಂದ 2023ರ ಮೇ ವರೆಗೆ, ತಮಿಳುನಾಡಿಗೆ 667.24 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡಿತ್ತು. 2021ರ ಜೂನ್‌ನಿಂದ 2022 ರವರೆಗೂ 278 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡಲಾಗಿತ್ತು.
2023ರಲ್ಲಿ ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟವು 124.8 ಅಡಿಗಳ ಗರಿಷ್ಠ ಮಟ್ಟದ ಬದಲಾಗಿ 113.44 ಅಡಿಗಳಷ್ಟಿತ್ತು. ಕಬಿನಿ 2,282.73 ಅಡಿ, ಹೇಮಾವತಿ 2,915.05 ಅಡಿ ಮತ್ತು ಹಾರಂಗಿ ಅಣೆಕಟ್ಟು 2,858.65 ಅಡಿಯಿತ್ತು.
2023ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ಶೇ 25ರಷ್ಟು ಮಳೆ ಕೊರತೆಯಾಗಿದ್ದು, ಕಾವೇರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶೇಕಡ 27ರಷ್ಟು ಮಳೆ ಕೊರತೆ ಆಗಿತ್ತು.
2024ರ ಮೇ 31ರ ವೇಳೆಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು 83.90 ಅಡಿಗಳಷ್ಟಿತ್ತು. 49.45 ಟಿಎಂಸಿ ಅಡಿಗಳ ಒಟ್ಟು ಸಾಮರ್ಥ್ಯ ಜಲಾಶಯದಲ್ಲಿ 12.61 ಟಿಎಂಸಿ ನೀರು ಸಂಗ್ರಹವಾಗಿತ್ತು. ಇನ್ನು ಜನವರಿಯಿಂದ ರಾಜ್ಯದಲ್ಲಿ ಶೇಕಡ 33ರಷ್ಟು ಅಧಿಕ ಮಳೆ ಬಿದ್ದಿದೆ. ಹವಾಮಾಣ ಇಲಾಖೆಯ ಪ್ರಕಾರ, ಈ ಬಾರಿ ನೈಋತ್ಯ ಮಾನ್ಸೂನ್ ವಾಡಿಕೆಗಿಂತ ಹೆಚ್ಚಾಗಿರುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಮತ್ತೆ ಮಳೆ ಮುಂದುವರೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.
2024ರ ಜೂನ್ ಆರಂಭದಿಂದಲೇ ಮುಂಗಾರು ಶುರುವಾಗಿದ್ದು, ಎರಡೇ ದಿನಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಹಾಗೆಯೇ ಪ್ರಮುಖ ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗುತ್ತಿದೆ. ಇನ್ನು ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಭಾರೀ ಮಳೆಯಾದರೆ, ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications