ಬೆಳಗಾವಿ ಜಿಲ್ಲೆ ವಿಭಜನೆ; ಎರಡು ಹೊಸ ಜಿಲ್ಲೆ ರಚನೆ: ಮಹತ್ವದ ಅಪ್ಡೇಟ್ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಳಗಾವಿ, ಡಿಸೆಂಬರ್ 10: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ್ ಗಳನ್ನು ನೂತನ ಜಿಲ್ಲೆಗಳನ್ನಾಗಿ ಘೋಷಿಸುವ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದರು.
ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರ ಸರ್ಕಾರದ ಗಮನ ಸೆಳಯುವ ಸೂಚನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ದೊಡ್ಡ ಜಿಲ್ಲೆಗಳನ್ನು ಆಡಳಿತಾತ್ಮಕವಾಗಿ ನಿರ್ವಹಣೆ ಮಾಡುವುದು ಕಷ್ಟ. ಇದರಿಂದಾಗಿ ಜನಪರ ಆಡಳಿತ ಕೊಡುವುದು ಕಷ್ಟಸಾಧ್ಯವೆಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಎರಡು ಅಥವಾ ಮೂರು ನೂತನ ಜಿಲ್ಲೆಯನ್ನು ರಚಿಸಬೇಕೆಂಬ ಮನವಿಗಳು ಬಂದಿವೆ. ಇದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಿದ್ದು, ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆ ಆಗಬೇಕಿದೆ.

ಸಮಯಾವಕಾಶ ನೋಡಿಕೊಂಡು ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳೊಂದಿಗೂ ಕೂಡ ಈ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಶಶಿಕಲಾ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ನೂತನ ಜಿಲ್ಲೆ ರಚನೆ ಅಗತ್ಯತೆ ಬಗ್ಗೆ ಸರ್ಕಾರದ ಗಮನ ಸೆಳೆದರು.
34 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಮ- ಕೃಷ್ಣ ಭೈರೇಗೌಡ
ಕಾಗಿನೆಲೆ ಪ್ರಾಧಿಕಾರದ ವ್ಯಾಪ್ತಿಗೆ ಕನಕದಾಸರ ಹುಟ್ಟೂರು ಬಾಡ ಹಾಗೂ ಗುಡ್ಡದ ಚನ್ನಾಪುರ ಗ್ರಾಮಗಳನ್ನು ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ದೇಶನ ನೀಡಿದ್ದಾರೆ. ಈಗಾಗಲೇ ಕಾಗಿನೆಲೆ ಪ್ರಾಧಿಕಾರದ ಅಭಿವೃದ್ಧಿಗೆ ರೂ.34 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ಬಳಿಸಿ ಬಾಡ ಹಾಗೂ ಗುಡ್ಡದ ಚನ್ನಾಪುರ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿ ಶಾಸಕ ಫಠಾಣ್ ಯಾಸೀರ್ ಅಹ್ಮದ್ ಖಾನ್ ಅವರ ಗಮನ ಸೆಳಯುವ ಸೂಚನೆಗೆ ಉತ್ತರಿಸಿ ಅವರು ಮಾತನಾಡಿದರು. 2016ರಲ್ಲಿ ಕಾಗಿನೆಲೆ ಪ್ರಾಧಿಕಾರ ಸ್ಥಾಪನೆ ಮಾಡಲಾಗಿತ್ತು. ಅಂದೇ ಬಾಡ ಹಾಗೂ ಗುಡ್ಡದ ಚನ್ನಾಪುರ ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದವು. ಸರ್ಕಾರ ಕಾಗಿನೆಲೆ ಅಭಿವೃದ್ಧಿಗೆ ಬದ್ಧವಿದೆ ಎಂದು ತಿಳಿಸಿದರು.
ಗ್ರಾಮಗಳ ಸೇರ್ಪಡೆ ಬಗ್ಗೆ ಸರ್ಕಾರದಿಂದ ಗೆಜೆಟ್ ಹೊರಡಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಕಾಗಿನೆಲೆ ಅಭಿವೃದ್ಧಿಗೆ ರೂ.34 ಕೋಟಿ ಬಿಡುಗಡೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಜಾನಪದ ವಿಶ್ವವಿದ್ಯಾನಿಲಯಕ್ಕೆ ಕನಕದಾಸರ ಹೆಸರು ಇಡುವಂತೆ ಇದೇ ಸಂದರ್ಭದಲ್ಲಿ ಶಾಸಕ ಫಠಾಣ್ ಯಾಸೀರ್ ಅಹ್ಮದ್ ಖಾನ್ ಮನವಿ ಮಾಡಿದರು.
ಮಂಡ್ಯ ಶಾಸಕ ರವಿಕುಮಾರ್‍ಗೌಡ ಅವರ ಗಮನ ಸೆಳೆಯುವ ಸೂಚನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಮಂಡ್ಯ ತಾಲ್ಲೂಕು ಪಂಚಾಯಿತಿ ಕಟ್ಟಡಕ್ಕೆ ರೂ.3 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ರೂ.75 ಲಕ್ಷ ಸಂದಾಯವಾಗಿದ್ದು, ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರ ಪರವಾಗಿ ಉತ್ತರಿಸಿದರು.












Click it and Unblock the Notifications