KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆ(KRIES), ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಇತರ ವಸತಿ ಶಾಲೆಗಳ ಪ್ರವೇಶ ಸಲುವಾಗಿ ನಡೆಸಲಾದ ಪರೀಕ್ಷೆಗಳ ಅಂತಿಮ ಅಂಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಗಳು ಹಾಗೂ ಇತರೆ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ದಾಖಲಾತಿ ಪಡೆಯಲು ಕಳೆದ ಮಾರ್ಚ್ 01ರಂದು ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA)ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೀ ಉತ್ತರಗಳನ್ನು ಮಾರ್ಚ್ 3 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ಪ್ರಕಟಿಸಿದ ಪ್ರವೇಶ ಪರೀಕ್ಷೆಯ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಮಾರ್ಚ್ 07ರೊಳಗೆ ಸಲ್ಲಿಸಲು ಅವಕಾಶ ಪ್ರಾಧಿಕಾರವು ನೀಡಿತ್ತು. ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಲಾಗಿದೆ. ಪರಿಷ್ಕೃತಗೊಂಡ ಕೀ ಉತ್ತರಗಳನ್ನು ಮಾರ್ಚ್ 07 ರಂದು ಪ್ರಕಟಿಸಲಾಗಿದೆ.
ಆಕ್ಷೇಪಣೆ ಪರಿಶೀಲಿಸಿ ಅಂತಿಮ ಅಂಕಪಟ್ಟಿ ಬಿಡುಗಡೆ
ಸದರಿ ದಿನಾಂಕದಂದೇ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು. ಆ ಅಂಕಪಟ್ಟಿಗೆ ಮಾರ್ಚ್ 18 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ನಿಗದಿತ ದಿನಾಂಕದೊಳಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂತಿಮ ಅಂಕಗಳನ್ನು ಮತ್ತು ಬ್ಯಾಂಕ್‌ನ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಮಾರ್ಚ್ 24ರದು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಅಂಕಪಟ್ಟಿಯನ್ನು ಪ್ರಾಧಿಕಾರದ ಜಾಲತಾಣ https://cetonline.karnataka.gov.in/kea/ ದಲ್ಲಿ ನೋಡಬಹುದೆಂದು ಪ್ರಕಟಣೆಯಲ್ಲಿ ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಪಿಜಿಸಿಇಟಿ ಕೋರ್ಸ್: ಸಿಇಟಿಗೆ ಅರ್ಜಿ ಆಹ್ವಾನ
ವಿವಿಧ ವೃತ್ತಿಪರ ಕೋರ್ಸ್‌ಗಳಾದ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಹಾಗೂ ಮಾಸ್ಟರ್ ಆಫ್ ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2026ಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 8ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಯಾರೆಲ್ಲ ಆಸಕ್ತ ಅರ್ಹ ಅಭ್ಯರ್ಥಿಗಳು ಇದ್ದಿರೋ ಅವರೆಲ್ಲ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಡಬೇಕು. ಶುಲ್ಕ ಪಾವತಿಗೆ ಏ.10 ಕೊನೆ ದಿನ. ವಿವಿಧ ಕೋರ್ಸ್ ಗಳ ಲಿಖಿತ ಪರೀಕ್ಷೆ ಮೇ 23 ಮತ್ತು 24 ರಂದು ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.












Click it and Unblock the Notifications