KPSC: ಕರ್ನಾಟಕ ಲೋಕಸೇವಾ ಆಯೋಗವೆಂದರೆ "ಕೈ-ಪೇ- ಸರ್ವಿಸ್; ಕಮಿಷನ್" ಎಂದ ಆರ್. ಅಶೋಕ್
KPSC: ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ನಡೆದಿರುವ ಕರ್ಮಕಾಂಡಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ. ಕೆಪಿಎಸ್‍ಸಿ(KPSC) ಅಂದರೆ K - ಕೈ, P - ಪೇ, S - ಸರ್ವಿಸ್ ಹಾಗೂ C - ಕಮಿಷನ್ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇನಾ ನಿಮ್ಮ ಪಾರದರ್ಶಕ ಆಡಳಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಎಂದು ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.
ಪಶುವೈದ್ಯಾಧಿಕಾರಿ (Veterinary Officer) ಮತ್ತು ಎಇಇ (AEE) ನೇಮಕಾತಿ ಅಕ್ರಮಗಳ ಬಗ್ಗೆ ಹೊರಬರುತ್ತಿರುವ ಅಘಾತಕಾರಿ ಸತ್ಯಗಳು ಕರ್ನಾಟಕದ ಯುವಕರ ಕನಸುಗಳನ್ನು ನುಚ್ಚುನೂರು ಮಾಡುತ್ತಿವೆ. ನೇಮಕಾತಿ ವ್ಯವಸ್ಥೆಯನ್ನು ಉದ್ಯೋಗದ ಅವಕಾಶವಲ್ಲ, ಹಣದ ಹರಾಜು ಎಂಬ ಅನುಮಾನ ಮೂಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷದವರೆಗೆ ಲಂಚ ಪಡೆದಿರುವ ಆರೋಪಗಳು ಕೇಳಿಬಂದಿವೆ. ನಮ್ಮ ಯುವಕರ ಪ್ರತಿಭೆ ಮತ್ತು ಪರಿಶ್ರಮವನ್ನು ಹಣದ ಮುಂದೆ ಮಾರಾಟಕ್ಕಿಟ್ಟಿರುವುದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

ಪರೀಕ್ಷಾ ಪ್ರಕ್ರಿಯೆಯಲ್ಲೇ ಕೈಚಳಕ ನಡೆದಿರುವ ಗಂಭೀರ ಆರೋಪಗಳು ಕೇಳಿಬಂದಿವೆ. OMR ಶೀಟ್‌ಗಳಲ್ಲಿ ತಿದ್ದುಪಡಿ, ಪರೀಕ್ಷಾ ಕೇಂದ್ರದ ಹೊರಗೆ ನಕಲಿ ಪರೀಕ್ಷೆ ನಡೆಸಿದ ಆರೋಪಗಳು ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿಸಿವೆ. ಅಕ್ರಮಗಳ ಬಗ್ಗೆ CCTV ಸೇರಿದಂತೆ ಸಾಕ್ಷ್ಯಗಳಿರುವುದಾಗಿ ವರದಿಗಳು ಹೇಳುತ್ತಿರುವಾಗ, ತನಿಖಾ ಸಮಿತಿಯ ಶಿಫಾರಸುಗಳಿದ್ದರೂ ಕಠಿಣ ಕ್ರಮ ಏಕೆ ಕಾಣುತ್ತಿಲ್ಲ? ಆರೋಪ ಎದುರಿಸುತ್ತಿರುವವರ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸರ್ಕಾರ ಹಿಂಜರಿಯುತ್ತಿರುವುದು ಯಾರನ್ನು ರಕ್ಷಿಸಲು. ತನಿಖೆಯಾ, ಕಣ್ಣೊರೆಸುವ ನಾಟಕವಾ ಎಂದಿದ್ದಾರೆ.
ಜನರಿಗೆ ಬೇಕಾಗಿರುವುದು ಸತ್ಯ ಹೊರಬರಬೇಕು ಎಂಬುದು. ಆದರೆ ಉಪಸಮಿತಿಗಳ ಹಿಂದೆ ಅಡಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದರೆ, ಅದು ನ್ಯಾಯವಲ್ಲ, ನ್ಯಾಯದ ಅಪಹಾಸ್ಯ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ್ ಗಾಂಧಿ ಅವರೇ, ಇನ್ನೆಷ್ಟು ದಿನ ಈ ಜನ ಕಿವುಡುತನ. ನಿರುದ್ಯೋಗ ಸಮಸ್ಯೆ, ಯುವಕರ ಭವಿಷ್ಯದ ಬಗ್ಗೆ ಉಪದೇಶ ಮಾಡುವ ನೀವು, ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನೇಮಕಾತಿ ಅಕ್ರಮಗಳ ಕುರಿತು ಏಕೆ ಮೌನ ವಹಿಸಿದ್ದೀರಿ. ದೆಹಲಿಯಲ್ಲಿ ಯುವಕರ ಪರವಾಗಿ ಮೊಸಳೆ ಕಣ್ಣೀರು ಹಾಕುವ ನಿಮಗೆ, ಕರ್ನಾಟಕದಲ್ಲಿ ನಿಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮಾತನಾಡುವ ಧೈರ್ಯ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಸರ್ಕಾರದ ನೇಮಕಾತಿ ಪ್ರಕ್ರಿಯೆಯ ಮೇಲೆ ಇಷ್ಟೊಂದು ಗಂಭೀರ ಅನುಮಾನಗಳು ವ್ಯಕ್ತವಾಗಿರುವಾಗ, ಜನರು ಉತ್ತರ ಕೇಳುತ್ತಿದ್ದಾರೆ. ಸತ್ಯವನ್ನು ಬಹಿರಂಗಪಡಿಸಲು ಹಿಂಜರಿಕೆ ಏಕೆ, ತಪ್ಪಿತಸ್ಥರು ಯಾರೇ ಆಗಿರಲಿ, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ದೂರವಾಗಬೇಕಾದರೆ ಸ್ವತಂತ್ರ ತನಿಖೆಯೊಂದೇ ದಾರಿ.
ನಮ್ಮ ಆಗ್ರಹ ಸ್ಪಷ್ಟ: ಪಶುವೈದ್ಯಾಧಿಕಾರಿ, AEE ಸೇರಿದಂತೆ ಎಲ್ಲಾ ವಿವಾದಿತ ನೇಮಕಾತಿಗಳ ಬಗ್ಗೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯ ನ್ಯಾಯಾಂಗ ತನಿಖೆ ನಡೆಸಬೇಕು. ಆರೋಪ ಎದುರಿಸುತ್ತಿರುವ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಅಕ್ರಮದಿಂದ ನೇಮಕಾತಿ ನಡೆದಿದ್ದರೆ ಅವುಗಳನ್ನು ರದ್ದುಗೊಳಿಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.


Click it and Unblock the Notifications
