KPSC ನೇಮಕಾತಿ ಹಗರಣ: ಕೊನೆಗೂ ಮಾಜಿ ಅಧ್ಯಕ್ಷ ಸಾಹುಕಾರ್, ಸದಸ್ಯೆ ಗೀತಾ ಅರೆಸ್ಟ್
ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಹುಕೋಟಿ ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಹತ್ವದ ಕಾರ್ಯಾಚರಣೆ ನಡೆಸಿದೆ. ಉದ್ಯೋಗಕ್ಕಾಗಿ ಲಂಚ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹಾಗೂ ಆಯೋಗದ ಸದಸ್ಯೆ ಬಿ.ವಿ. ಗೀತಾ ಅವರನ್ನು ಇಡಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸಾಹುಕಾರ್ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುದೀರ್ಘ ವಿಚಾರಣೆಯ ಬಳಿಕ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್‌ನಲ್ಲಿರುವ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕೃತ ನಿವಾಸಕ್ಕೆ ಕರೆದೊಯ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಗಿದೆ.

ಇಡಿ ಅಧಿಕಾರಿಗಳ ವಿಚಾರಣೆ ಮತ್ತು ಬಂಧನ
ಮಂಗಳವಾರ ಬೆಳಿಗ್ಗೆಯೇ ಸಾಹುಕಾರ್ ಮನೆಗೆ ತೆರಳಿದ ಇಡಿ ಅಧಿಕಾರಿಗಳ ತಂಡ, ಅವರಿಂದ ಸುದೀರ್ಘ ಹೇಳಿಕೆಗಳನ್ನ ದಾಖಲಿಸಿಕೊಂಡಿತು. ಸಂಜೆಯ ವೇಳೆಗೆ ವಶಕ್ಕೆ ಪಡೆದು, ತಡರಾತ್ರಿ ಅಧಿಕೃತವಾಗಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಮತ್ತೊಂದೆಡೆ, ಆಯೋಗದ ಸದಸ್ಯೆ ಬಿ.ವಿ. ಗೀತಾ ಅವರನ್ನ ಕೂಡ ಡಾಲರ್ಸ್ ಕಾಲೋನಿಯ ಅವರ ಫ್ಲಾಟ್‌ನಿಂದ ಬೆಳಿಗ್ಗೆಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಕೇವಲ ಒಂದು ವಾರದ ಹಿಂದೆಯಷ್ಟೇ, ಈ ಪ್ರಕರಣದಲ್ಲಿ ಜೈಲು ಸೇರಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಹಾಗೂ ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನ ಇಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ಬಸವರಾಜ್ ಕನ್ನಾಲೆ ಎಂಬಾತನನ್ನೂ ವಿಚಾರಣೆಗೊಳಪಡಿಸಲಾಗಿತ್ತು. ಪ್ರಸ್ತುತ ಗಂಗ್ವಾರ್ ಮತ್ತು ಕನ್ನಾಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಇಬ್ಬರ ಜಾಮೀನು ಅರ್ಜಿಗಳನ್ನ ನ್ಯಾಯಾಲಯ ತಿರಸ್ಕರಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರ ಜಾಲ
ಇಡಿ ಮೂಲಗಳ ಪ್ರಕಾರ, ಸಾಹುಕಾರ್ ಅವರ ಆಪ್ತ ಸಂಬಂಧಿ ಸುಗುರೇಶ್ ಜಾಕಾ ಎಂಬಾತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನ ಪಡೆದಿದ್ದ. ಈತನ ತಪ್ಪೊಪ್ಪಿಗೆ ಹೇಳಿಕೆಯ ಆಧಾರದ ಮೇಲೆಯೇ ಸಾಹುಕಾರ್ ಅವರನ್ನ ಬಂಧಿಸಲಾಗಿದೆ. ಜನವರಿ 7ರ ರಾತ್ರಿ ಅಂದರೆ ಪರೀಕ್ಷೆಯ ಹಿಂದಿನ ದಿನ, ಸಾಹುಕಾರ್ ಅವರು ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ಗೆ ಎರಡು ಬಾರಿ ಕರೆ ಮಾಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಗಂಗ್ವಾರ್ ಅವರು ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಯನ್ನು ಸುಗುರೇಶ್‌ಗೆ ನೀಡಿದ್ದರು, ನಂತರ ಸುರೇಶ್ ಅದನ್ನು ಬಿ.ವಿ. ಗೀತಾ ಅವರೊಂದಿಗೆ ಹಂಚಿಕೊಂಡಿದ್ದರು ಎಂಬ ಗಂಭೀರ ಆರೋಪವಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಲ ಗ್ರಾಮದವರಾದ ಕೃಷಿ ಎಂಜಿನಿಯರಿಂಗ್ ಪದವೀಧರ ಸಾಹುಕಾರ್, ಸೆಪ್ಟೆಂಬರ್ 2019ರಲ್ಲಿ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡಿದ್ದರು. ಏಪ್ರಿಲ್ 2021ರಲ್ಲಿ ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಅಂದಿನ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಬಡ್ತಿ ನೀಡಿದ್ದರು.
ನಕಲಿ ಆದಾಯ ಪ್ರಮಾಣಪತ್ರ ವಿವಾದ
ಕೆಪಿಎಸ್‌ಸಿ ಅಧ್ಯಕ್ಷರಾಗಿ ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದರೂ, ತಮ್ಮ ಪುತ್ರಿಗೆ 3ಬಿ ಮೀಸಲಾತಿ ಅಡಿಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಗಿಟ್ಟಿಸಲು, ಕೇವಲ 40,000 ರೂ. ವಾರ್ಷಿಕ ಕೌಟುಂಬಿಕ ಆದಾಯವಿರುವುದಾಗಿ ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಸಿದ ಗಂಭೀರ ಆರೋಪವನ್ನ ಸಾಹುಕಾರ್ ಎದುರಿಸುತ್ತಿದ್ದರು.
ಈ ಕೃತ್ಯವನ್ನು ವಂಚನೆ ಎಂದು ಕಟುವಾಗಿ ಟೀಕಿಸಿದ್ದ ಹೈಕೋರ್ಟ್, ಇದರಿಂದ ಬಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಛೀಮಾರಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಶಿಫಾರಸಿನ ಮೇರೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಾಹುಕಾರ್ ಅವರನ್ನ ಹುದ್ದೆಯಿಂದ ಅಮಾನತುಗೊಳಿಸಿದ್ದರು.
ಅಕ್ರಮ ಹಣ ವರ್ಗಾವಣೆ ತನಿಖೆ
ಇದಲ್ಲದೆ, 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ವಿವಿಧ ಗೆಜೆಟೆಡ್ ಅಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಬೃಹತ್ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಮಧ್ಯವರ್ತಿಗಳ ಹಾವಳಿ ಹಾಗೂ ಲಂಚದ ಆರೋಪಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.
ಮಧ್ಯವರ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷ್ಯಾಧಾರಗಳನ್ನ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಹಿನ್ನೆಲೆಯಲ್ಲಿ, ಸಾಹುಕಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ರಾಜ್ಯ ಮಟ್ಟದ ಕ್ರಿಮಿನಲ್ ತನಿಖೆಗಳ ಜೊತೆಗೆ, ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳು ಮತ್ತು ಅಕ್ರಮ ಆಸ್ತಿ ಗಳಿಕೆ ಬಗ್ಗೆ ಇಡಿ ಕೂಡ ಪ್ರತ್ಯೇಕವಾಗಿ ಅಕ್ರಮ ಹಣ ವರ್ಗಾವಣೆ ತನಿಖೆ ಆರಂಭಿಸಿತ್ತು. ಕಳೆದ ಆಗಸ್ಟ್ ತಿಂಗಳಲ್ಲೂ ಇಡಿ ಅಧಿಕಾರಿಗಳು ಸಾಹುಕಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.


Click it and Unblock the Notifications
