KPSC: ಕನ್ನಡ ಪ್ರಶ್ನೆ ಗೊತ್ತಾಗದಿದ್ರೆ ಇಂಗ್ಲಿಷ್‌ನಲ್ಲಿ ಓದಿಕೊಳ್ಳಿ ಎಂದ ಕೆಪಿಎಸ್‌ಸಿ, ವಿಜಯೇಂದ್ರ ಎಚ್ಚರಿಕೆ
ಕರ್ನಾಟಕ ಲೋಕಸೇವಾ ಆಯೋಗವು ( ಕೆಪಿಎಸ್ ಸಿ) ಪದೇ ಪದೇ ಯಡವಟ್ಟುಗಳನ್ನು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೆಪಿಎಸ್‌ಸಿ ಗೊಂದಲಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ಡಿಸೆಂಬರ್ 29ಕ್ಕೆ ನಿಗದಿಯಾಗಿರುವ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ ಮಾಡಿರುವ ಕೆಪಿಎಸ್‌ಸಿ, ಕನ್ನಡ ಭಾಷೆಯಲ್ಲಿರುವ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಆಂಗ್ಲ ಭಾಷೆಯ ಪ್ರಶ್ನೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಈ ಮೂಲಕ ತಮ್ಮ ಯಡವಟ್ಟುಗಳು ನಿತ್ಯ ನಿರಂತರ ಎಂಬ ಮುನ್ಸೂಚನೆ ನೀಡಿರುವುದು ವಿಪರ್ಯಾಸವೇ ಸರಿ ಎಂದು ಖಂಡಿಸಿದ್ದಾರೆ.

ಈ ಹಿಂದಿನ ಪರೀಕ್ಷೆಯಲ್ಲೂ ಕನ್ನಡ ಭಾಷಾ ಪರೀಕ್ಷಾರ್ಥಿಗಳಿಗೆ ಸಮರ್ಪಕವಾಗಿ ಭಾಷಾಂತರಿಸದೇ ಯಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮುಂದಾಗಬಹುದಾದ ಗೊಂದಲದ ಹುಳುಕುಗಳನ್ನು ಮೊದಲೇ ಪರೀಕ್ಷಾರ್ಥಿಗಳಿಗೆ ಸೂಚಿಸುತ್ತಿರುವುದು ಕೆಪಿಎಸ್‌ಸಿ ಅಧಿಕಾರಿಗಳ ಬೇಜವಾಬ್ದಾರಿ ಮನಸ್ಥಿತಿಯನ್ನು ಸಾಕ್ಷೀಕರಿಸುತ್ತಿದೆ ಎಂದು ಅವರು ದೂರಿದ್ದಾರೆ.
ಕರ್ನಾಟಕದ ಮಾತೃಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಬೇಜವಾಬ್ದಾರಿತನ ಮತ್ತೆ ಮರುಕಳಿಸಿದಲ್ಲಿ, ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರೀಕ್ಷಾರ್ಥಿಗಳ ಪರ ಬಿಜೆಪಿ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಕಳೆದ ಬಾರಿ ಆಗಿದ್ದ ತಪ್ಪುಗಳನ್ನು ಸರಿ ಪಡಿಸುತ್ತೇವೆ ಎಂದು ಮರುಪರೀಕ್ಷೆ ಮಾಡುತ್ತಿರುವ ಕೆಪಿಎಸ್‌ಸಿ ಪದೇ ಪದೇ ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವುದು ಬೇಸರದ ವಿಷಯ. ಕನ್ನಡದಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ, ಕನ್ನಡದಲ್ಲೇ ಪ್ರಶ್ನೆಗಳು ಅರ್ಥವಾಗದ ಮೇಲೆ ಇಂಗ್ಲೀಷ್‌ನಲ್ಲಿ ಹೇಗೆ ಅರ್ಥವಾಗಬಹುದು? ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸುವ ಯೋಗ್ಯತೆಯೂ ಕೂಡ ಕೆಪಿಎಸ್‌ಸಿಗೆ ಇಲ್ಲವೇ ಎಂದು ನಮ್ಮ ನಾಡು ನಮ್ಮ ಆಳ್ವಿಕೆ ವೇದಿಕೆ ಕೂಡ ಇದನ್ನ ಖಂಡಿಸಿದೆ.
ನಿಲ್ಲದ ಬಾಣಂತಿಯರ ಸಾವು: ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವುಗಳ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರೂ ಮೊನ್ನೆಯಷ್ಟೇ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರವೂ ಸಾವುಗಳು ನಿಲ್ಲುತ್ತಿಲ್ಲ ಎಂದು ವಿಜಯೇಂದ್ರ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

ಇದನ್ನು ನೋಡುತ್ತಿದ್ದರೆ ಕಾಂಗ್ರೆಸ್ ಸರ್ಕಾರದ ಅಸಡ್ಡೆತನ ನಾಡಿನ ಬಡ ಕುಟುಂಬಗಳ ತಾಯಂದಿರ ಪ್ರಾಣಗಳಿಗೆ ಸಂಚಕಾರ ತಂದೊಡ್ಡಿದೆ ಎಂದರೆ ತಪ್ಪಾಗಲಾರದು. ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲೇ 29 ಬಾಣಂತಿಯರು ಹಾಗೂ ಒಂದು ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದರು. ಇದೀಗ ಕಳೆದ ಐದು ದಿನಗಳ ಅಂತರದಲ್ಲಿ ಇಬ್ಬರು ತಾಯಂದಿರು ಸಾವಿಗೀಡಾಗಿರುವ ಘಟನೆ ನಿಜಕ್ಕೂ ರಾಜ್ಯವೇ ತಲೆ ತಗ್ಗಿಸುವಂತದ್ದು ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣದ ಗಂಭೀರತೆಯನ್ನು ಅರಿತು ಉನ್ನತ ತನಿಖೆಗೆ ವಹಿಸಿ, ಬಾಣಂತಿಯರ ಸಾವಿಗೆ ಕಾರಣ ತಿಳಿದು ಬಡ ಕುಟುಂಬಗಳ ತಾಯಂದಿರ ಪ್ರಾಣ ಉಳಿಸುವ ನಿಟ್ಟಿನಲ್ಲಿ ತತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications