KPSC: ಲಕ್ಷಾಂತರ ಕನ್ನಡ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ ಮಹಾಪಾಪ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ
KPSC: ಲಕ್ಷಾಂತರ ಕನ್ನಡ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ ಮಹಾಪಾಪವೇ ಸರಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಹೇಳಿದ್ದಾರೆ.
ಕೆಪಿಎಸ್ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಬಂಧನಕ್ಕೆ ಒಳಗಾಗಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದಾಗ ನಾವು ನಡೆಸಿದ ನಿರಂತರ ಹೋರಾಟದ ಸಂದರ್ಭದಲ್ಲಿ ಸಾಹುಕಾರ್ ಪಾಪದ ಕೊಡ ತುಂಬುತ್ತಾ ಬಂದಿದೆ ಎಂದು ಹೇಳಿದ್ದೆ. ಬಹುಶಃ ಇವತ್ತು ಪಾಪದ ಕೊಡ ಪೂರ್ಣ ತುಂಬಿದೆ ಅನ್ನಿಸುತ್ತಿದೆ. ಮೊದಲೇ ಪಾಪಕೂಪಗಳ ಕೇಂದ್ರ ಎನಿಸಿಕೊಂಡಿದ್ದ ಕೆಪಿಎಸ್‌ಸಿಯನ್ನು ಮತ್ತೆಂದೂ ರಿಪೇರಿ ಮಾಡಲಾಗದಂತೆ ಹಾಳುಗೆಡಹಿದ ಕುಖ್ಯಾತಿ ಈ ಸಾಹುಕಾರ್ ಮತ್ತು ತಂಡಕ್ಕೆ ಸೇರಬೇಕು. ಕನ್ನಡದ ಮಕ್ಕಳಿಗೆ ಕೆಲಸ ಕೊಡಿಸುವ ಸಂಸ್ಥೆಯನ್ನು ಸಂಪೂರ್ಣವಾಗಿ ಕಗ್ಗೊಲೆ ಮಾಡಿದ ಈ ಸಾಹುಕಾರ್ ಕ್ಷಮೆಗೆ ಅರ್ಹರಲ್ಲ.

ಜಾರಿ ನಿರ್ದೇಶನಾಲಯ ಇದೇ ಪ್ರಕರಣದಲ್ಲಿ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರನ್ನೂ ಬಂಧಿಸಿದೆ. ಇವರಿಗಿಂತ ಮೊದಲು ಬಂಧನಕ್ಕೆ ಒಳಗಾದ ಮಾಜಿ KPSC ಪರೀಕ್ಷಾ ನಿಯಂತ್ರಕ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅದನ್ನು ಸಂಭ್ರಮದಿಂದ ಆಚರಿಸಿದ ವ್ಯಕ್ತಿ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಣ್ಣೀರು ಇಡುತ್ತಾ ತಮ್ಮ ಸಂಕಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಳ್ಳುತ್ತಿದ್ದಾಗ ಅದನ್ನೆಲ್ಲ ಓದಿ ಎಂಜಾಯ್ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ ವಿಘ್ನ ಸಂತೋಷಿ ಈತ. ಈಗ ಮಾಡಿದ್ದುಣ್ಣೋ ಮಹರಾಯ ಎಂಬಂತೆ ಜೈಲು ಸೇರಿದ್ದಾನೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕೆಪಿಎಸ್‌ಸಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ದಿನನಿತ್ಯ ನನ್ನೊಂದಿಗೆ ಮಾತಾಡುತ್ತಿದ್ದರು. ಎಷ್ಟೋ ಮಂದಿ ಊಟ, ನಿದ್ದೆ ಬಿಟ್ಟು ಓದಿ ಪರೀಕ್ಷೆಗಳಿಗೆ ತಯಾರಾಗಿದ್ದರು. ಏನೇನೋ ಕನಸು ಕಟ್ಟಿಕೊಂಡಿದ್ದರು. ಆದರೆ ತಪ್ಪು ತಪ್ಪಾದ ಪ್ರಶ್ನೆ ಪತ್ರಿಕೆ ನೀಡಿ ಈ ಮಕ್ಕಳ ಭವಿಷ್ಯ ನಾಶ ಮಾಡಲಾಯಿತು. ಮೊದಲೇ ಹುದ್ದೆಗಳೆಲ್ಲ ಮಾರಾಟ ಮಾಡಿಕೊಂಡಿದ್ದರಿಂದ ಉದ್ದೇಶಪೂರ್ವಕವಾಗಿ ಈ ಸಂಚು ನಡೆಸಲಾಗಿತ್ತು. ಆ ಮಕ್ಕಳ ಕಣ್ಣೀರ ಶಾಪ ಇವರನ್ನು ತಟ್ಟದೇ ಇರುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಪಿಎಸ್‌ಸಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಪರೀಕ್ಷೆ ನಡೆಸಿದರೂ ಅವು ವಿವಾದಕ್ಕೆ ಒಳಗಾಗಿವೆ. ಅದಕ್ಕೆ ಕಾರಣ ಅಲ್ಲಿ ದಂಧೆ ನಡೆಸುತ್ತಿದ್ದ ಸಾಹುಕಾರ್, ಜ್ಞಾನೇಂದ್ರ ಥರದ ಖೂಳರು. ಒಂದು ಸಾರ್ವಜನಿಕ ಸಂಸ್ಥೆಯನ್ನು ತಮ್ಮ ಹೊಲಸು ದಂಧೆಗೆ ಬಳಸಿಕೊಂಡ ಈ ಪೀಡೆಗಳಿಂದ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ. ಇವರೆಲ್ಲ ನಮ್ಮ ಸಮಾಜಕ್ಕೆ ಅಂಟಿಕೊಂಡ ಕ್ಯಾನ್ಸರ್ ಇದ್ದಂತೆ. ಅಷ್ಟು ಸುಲಭವಾಗಿ ಇವು ನಾಶ ಆಗುವುದಿಲ್ಲ. ಅದರ ಆರಂಭ ಆಗಿದೆ ಎಂದು ನಾವು ನಿಟ್ಟುಸಿರು ಬಿಡಬೇಕಷ್ಟೆ.
ಇನ್ನು ಕೆಪಿಎಸ್‌ಸಿ ಹಗರಣವನ್ನು ಕೇವಲ ಒಂದು ಹಗರಣ ಎಂದು ಭಾವಿಸುವಂತಿಲ್ಲ. ಇದು ಒಂದು ಸಂಸ್ಥೆಯ ಸರ್ವನಾಶದ ಕೃತ್ಯ. ಅಷ್ಟೆ ಅಲ್ಲ, ಲಕ್ಷಾಂತರ ಕನ್ನಡ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ ಮಹಾಪಾಪ. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಕಠಿಣ ಶಿಕ್ಷೆಯಾಗಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಆಗ್ರಹಿಸಿದ್ದಾರೆ.


Click it and Unblock the Notifications
